ನಾನು ಪ್ರಶಸ್ತಿಯನ್ನು ವಾಪಸ್ ಮಾಡುವುದಿಲ್ಲ: ಡಾ ವಿಜಯಾ

ಬೆಂಗಳೂರು, ಡಿ.19:         ಕೇಂದ್ರ  ಸಾಹಿತ್ಯ ಅಕಾಡೆಮಿ ನನ್ನ 'ಕುದಿ ಎಸರು' ಕೃತಿಗೆ ಕೊಟ್ಟಿರುವ ಪ್ರಶಸ್ತಿಯನ್ನು ನಾನು  ಹಿಂದಿರುಗಿಸುವುದಿಲ್ಲ ಎಂದು ಲೇಖಕಿ ಡಾ ವಿಜಯಾ ಖಚಿತ ಮಾತುಗಳಲ್ಲಿ ತಿಳಿಸಿದ್ದಾರೆ.

ಇಂದು  'ಅವಧಿ' ಅಂತರ್ಜಾಲ ಪತ್ರಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿ ನನಗೆ  ವಯಕ್ತಿಕವಾಗಿ ಕೊಟ್ಟ ಪ್ರಶಸ್ತಿ ಅಲ್ಲ. ಇದು ಮಹಿಳಾ ಲೋಕದ ದನಿಗೆ ಕೊಟ್ಟ ಪ್ರಶಸ್ತಿ.  ವೈದೇಹಿ ಅವರಿಗೆ ಪ್ರಶಸ್ತಿ ನೀಡಿದ 10 ವರ್ಷಗಳ ನಂತರ ಇನ್ನೊಬ್ಬ ಲೇಖಕಿಗೆ ಈ ಪ್ರಶಸ್ತಿ  ಸಿಕ್ಕಿದೆ. ಹಾಗಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದೂ ಒಂದು ಪ್ರತಿಭಟನೆಯೇ ಎಂದು  ಅವರು ತಿಳಿಸಿದರು.

ಕೇಂದ್ರ  ಸಾಹಿತ್ಯ ಅಕಾಡೆಮಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಇದು ಸರ್ಕಾರದ  ಪ್ರಶಸ್ತಿ ಅಲ್ಲ ಎಂದ ಅವರು ನಾನು ಇದುವರೆಗೂ ಸರ್ಕಾರ ನೀಡುವ ರಾಜ್ಯೋತ್ಸವ  ಪ್ರಶಸ್ತಿಯನ್ನಾಗಲೀ, ಅತ್ತಿಮಬ್ಬೆ ಪ್ರಶಸ್ತಿಯನ್ನಾಗಲೀ ಸ್ವೀಕರಿಸಿಲ್ಲ. ಆದರೆ  ಅಕಾಡೆಮಿಗಳು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ ಎಂದು  ಸ್ಪಷ್ಟಪಡಿಸಿದರು. ಈ ಕೃತಿಯಲ್ಲೂ ನಾನು ಸಂಘ ಪರಿವಾರವನ್ನೂ ಸಹ ನೇರವಾಗಿ  ಪ್ರಶ್ನಿಸಿದ್ದೇನೆ. ಈ ಪ್ರಶಸ್ತಿಗಳಿಂದ ನನ್ನ ಮಾತನ್ನು, ನನ್ನ ಹೋರಾಟವನ್ನು  ಮುಚ್ಚಿಹಾಕಲು ಸಾಧ್ಯವಿಲ್ಲ. ನಾನು ಯಾವತ್ತೂ ಹೋರಾಟದ ಅಂಗಳದಲ್ಲಿರುವವಳು ಹಾಗೂ  ನಿರ್ಭಡೆಯ ಮಾತನ್ನಾಡುವವಳು ಎಂದು ಅವರು ನೇರವಾಗಿ ತಿಳಿಸಿದರು.

ಪೌರತ್ವ  ತಿದ್ದುಪಡಿ ಕಾಯಿದೆಯ ಔಚಿತ್ಯವನ್ನು ಪ್ರಶ್ನಿಸಿದ ಅವರು ತುರ್ತು ಪರಿಸ್ಥಿತಿಯನ್ನೂ  ಮೀರಿದ ಒಂದು ಭಯಾನಕ ಪರಿಸ್ಥಿತಿ ನಮ್ಮ ಮುಂದಿದೆ. ಈ ವ್ಯವಸ್ಥೆಗೆ ಯಾರನ್ನೂ ಕೇಳುವ  ಮನಸ್ಸಿಲ್ಲ. ಇದು ಸಂಪೂರ್ಣವಾಗಿ ಸರ್ವಾಧಿಕಾರಿ ಸರ್ಕಾರ ಎಂದು ಆತಂಕ ವ್ಯಕ್ತಪಡಿಸಿದರು.