ತಂಡಕ್ಕೆ ಆಯ್ಕೆಯಾಗದಿರುವ ಕಾರಣ ರಾತ್ರಿ ಪೂರ ಅತ್ತಿದ್ದೆ: ಕೊಹ್ಲಿ

ನವದೆಹಲಿ, ಏ 22 ,ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಹೊರ ಹೊಮ್ಮುವ ಮೊದಲು ತಮ್ಮ ರಾಜ್ಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಕ್ಕೆ ರಾತ್ರಿಯೆಲ್ಲಾ ಗಳಗಳನೆ ಅತ್ತಿದ್ದ ಘಟನೆಯನ್ನು ಟೀಮ್‌ ಇಂಡಿಯಾದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಸ್ಮರಿಸಿದ್ದಾರೆ.ಮಕ್ಕಳಿಗೆ ಪ್ರೋತ್ಸಾಹ ನೀಡುವ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ ಮತ್ತು ಪತ್ನಿ ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಹಲವು ಸವಾಲುಗಳ ಕುರಿತಾಗಿ ಮಾತನಾಡಿದರು."ರಾಜ್ಯ ತಂಡದ ಆಯ್ಕೆ ಸಮಿತಿಯಿಂದ ನಾನು ಮೊದಲ ಬಾರಿ ತಿರಸ್ಕೃತಗೊಂಡಿದ್ದೆ. ಈಗಲೂ ನೆನಪಿದ ಆ ದಿನ ತಡರಾತ್ರಿ ನಾನು ಗಳಗಳನೆ ಅತ್ತಿದ್ದೆ. ಬೆಳಗ್ಗೆ ಮೂರು ಗಂಟೆ ವರೆಗೂ ನಾನು ಅಳುತ್ತಲೇ ಇದ್ದೆ. ನನಗೆ ತಂಡದಲ್ಲಿ ಸ್ಥಾನ ಸಿಗದೇ ಹೋದುದ್ದನ್ನು ನಂಬಲು ಸಾಧ್ಯವಾಗಿರಲಿಲ್ಲ. ಏಕೆಂದರೆ ನಾನು ಉತ್ತಮವಾಗಿ ಸ್ಕೋರ್‌ ಮಾಡಿದ್ದೆ. ಎಲ್ಲವೂ ಅತ್ಯುತ್ತಮ ರೀತಿಯಲ್ಲಿ ಸಾಗಿತ್ತು. ಅಷ್ಟೆಲ್ಲಾ ಶ್ರೇಷ್ಠ ಪ್ರದರ್ಶನ ನೀಡಿ ಆ ಹಂತ ತಲುಪಿದ್ದಾಗ ಆಯ್ಕೆ ಸಮಿತಿ ತಿರಸ್ಕರಿಸಿದ್ದು ಬಹಳ ನೋವು ತಂದಿತ್ತು," ಎಂದು ಕೊಹ್ಲಿ ಸ್ಮರಿಸಿದ್ದಾರೆ."ಅಂದು ಎರಡು ಗಂಟೆಗೂ ಅಧಿಕ ಕಾಲ ನಾನು ನನ್ನ ಕೋಚ್‌ ಬಳಿ ಆಯ್ಕೆ ಆಗದೇ ಇರಲು ಕಾರಣವೇನು? ಎಂದು ಕೇಳುತ್ತಲೇ ಇದ್ದೆ. ನಾನು ಆಯ್ಕೆ ಆಗದೇ ಇರುವುದಕ್ಕೆ ಕಾರಣವೇ ಅರ್ಥವಾಗುತ್ತಿರಲಿಲ್ಲ. ಆದರೆ ಬದ್ಧತೆ ಮತ್ತು ಒಲವಿದ್ದರೆ ಸಾಧನೆ ಮಾಡಲೇ ಬೇಕೆಂಬ ಸ್ಫೂರ್ತಿ ಮತ್ತೆ ನಿಮ್ಮನ್ನು ಆವರಿಸುತ್ತದೆ," ಎಂದು ವಿರಾಟ್‌ ಹೇಳಿದ್ದಾರೆ.