ನಾರ್ಥಸೌಂಡ್, (ಅಂಟಿಗುವಾ) ಆ 24 ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಅತ್ಯಮೂಲ್ಯ ಅರ್ಧ ಶತಕ ಸಿಡಿಸಿದ ಬಳಿಕ ಮಾತನಾಡಿದ ಆಲ್ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ನನ್ನ ಕಡೆಯಿಂದ ಉತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 189 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕಣಕ್ಕೆ ಇಳಿದ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ತೋರಿದ್ದರು. 58 ರನ್ ಸಿಡಿಸುವ ಮೂಲಕ ಭಾರತದ ಮೊತ್ತ 297 ರನ್ ದಾಖಲಿಸಲು ನೆರವಾಗಿದ್ದರು. ಎರಡನೇ ದಿನದ ಮುಕ್ತಾಯವಾದ ಬಳಿಕ ಮಾತನಾಡಿದ ಅವರು, "ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಾಗ ದೊಡ್ಡ ಮೊತ್ತದ ಜತೆಯಾಟದ ಕಡೆ ಗಮನ ಹರಿಸುತ್ತೇನೆ. ನಾನು ಟೈಲೆಂಡರ್ಗಳೊಂದಿಗೆ ಆಟವಾಡಲು ಗಮನ ಹರಿಸುತ್ತಿದ್ದೆ. ಆದರೆ, ನನ್ನ ಆಟದ ಬಗ್ಗೆ ತಲೆಕೆಡಸಿಕೊಂಡಿದ್ದೆ. ನನ್ನ ಕಡೆಯಿಂದ ತಂಡಕ್ಕೆ ನೆರವು ನೀಡಲು ಹೆಚ್ಚು ಪ್ರಯತ್ನಿಸುತ್ತಿದ್ದೆ ಎಂದು ಹೇಳಿಕೊಂಡರು. ರಿಷಭ್ ಪಂತ್ ಔಟ್ ಆದ ಬಳಿಕ, ಜತೆಯಾದ ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಜೋಡಿ 60 ರನ್ ಜತೆಯಾಟವಾಡಿತು. ಇಶಾಂತ್ ಜತೆ ರವೀಂದ್ರ ಜಡೇಜಾ ಜತೆಯಾಟವನ್ನು ಇನ್ನಷ್ಟು ಬಲಗೊಳಿಸಲು ಹೆಚ್ಚು ಮಾತನಾಡುತ್ತಿದ್ದರು. "ದೊಡ್ಡ ಜತೆಯಾಟ ನಿರ್ಮಿಸುವ ಕಡೆ ಹೆಚ್ಚು ಗಮನಹರಿಸುತ್ತಿದ್ದೆ. ಹಾಗಾಗಿ, ಇಶಾಂತ್ ಜತೆ ಹಾಗಾಗಿ ಮಾತನಾಡುತ್ತಲೇ ಇದ್ದೆ. ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗುತ್ತದೊ ಅಲ್ಲಿಯವರೆಗೂ ನಿಲ್ಲೋಣ ಎಂದು ಮಾತನಾಡಿಕೊಂಡಿದ್ದೆವು ಎಂದು ಜಡೇಜಾ ಹೇಳಿದರು. " ಬ್ಯಾಟಿಂಗ್ ವೇಳೆ ನಾನು ಧನಾತ್ಮಕ ಮನೋಭಾವ ಹೊಂದಿದ್ದೆ. ಶಾಟ್ ಆಯ್ಕೆಗಳಲ್ಲಿಯೂ ಕೂಡ ಧನಾತ್ಮಕವಾಗಿತ್ತು. ಕೆಳ ಕ್ರಮಾಂಕವು ನಿರಂತರವಾಗಿ ರನ್ ಗಳಿಸುತ್ತಿದ್ದರೆ, ಅದು ಎದುರಾಳಿಗಳಿಗೆ ಒಳ್ಳೆಯದಲ್ಲ. ಆದ್ದರಿಂದ ಇದು ನಮ್ಮ ಕಡೆಯಿಂದ ಗೇಮ್ ಪ್ಲ್ಯಾನ್ ಆಗಿತ್ತು ಎಂದು ಹೇಳಿದರು. "ಮುಖ್ಯ ಆಟಗಾರ ಎಂದು ನಾಯಕ ನನ್ನ ಮೇಲೆ ನಂಬಿಕೆ ಇಟ್ಟಿರುವುದನ್ನು ತಿಳಿದಾಗ ತುಂಬಾ ಖುಷಿಯಾಗುತ್ತದೆ. ಹಾಗೆಯೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ನಾಯಕ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದು ಸಂತಸ ತಂದಿದೆ ಎಂದು ಜಡೇಜಾ ತಿಳಿಸಿದರು.