ಶಿಗ್ಗಾವಿ 30 : ಸಹಜವಾಗಿಯೇ ನನಗೂ ಮುಖ್ಯಮಂತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಆಗಬೇಕೆಂಬ ಆಸೆ ಇದೆ, ರಾಜಕಾರಣದಲ್ಲಿ ಇಂತ ಆಸೆಗಳಿರುವುದು ಸಹಜ. ಆದರೆ ರಾಜ್ಯಾಧ್ಯಕ್ಷರ ಬದಲಾವಣೆ ಅಥವಾ ಮುಖ್ಯಮಂತ್ರಿಗಳ ಬದಲಾವಣೆಯನ್ನು ಮಾಡುವುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ ನಿರ್ಧಾರ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಪೂರ್ಣಾವಧಿವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ಮಂತ್ರಿ ಮಂಡಲದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹಿಂದೆ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಅಂತ ಸುದ್ದಿ ಹರಿದಾಡಿತ್ತು. ಈಗ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ನಾನು ಯಾವುದೇ ಲಾಬಿನೂ ಮಾಡಿಲ್ಲ. ಒತ್ತಡವನ್ನೂ ಹಾಕುತ್ತಿಲ್ಲಾ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ ಖುಷಿಯಿದೆ. ಈಗಾ ಮಂತ್ರಿಯಾಗಿ ರಾಜ್ಯದ ಸೇವೆ ಮಾಡುತ್ತಿರುವುದು ತೃಪ್ತಿಯಿದೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿರುವುದರ ಬಗ್ಗೆ ಮಾತನಾಡಿ, ಈ ಬಾರಿ ಆ ರೀತಿ ಆಗಿಲ್ಲ. ಈ ಬಾರಿ ಪೋರ್ಟ್‌ಫೋಲಿಯೋದಲ್ಲಿ ನಾವೇ ಇದ್ದೇವೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಒಳ್ಳೆಯ ಖಾತೆಗಳನ್ನೇ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಬಗ್ಗೆ ಮಾತನಾಡಿ, ಬಣ ಬಡಿದಾಟ ಇದೆ ಎಂದು ನಾನು ಹೇಳುತ್ತಿದ್ದೇನೆ. ನಮ್ಮ ಪಕ್ಷದಲ್ಲೂ ಇದೆ, ಬೇರೆ ಪಕ್ಷದಲ್ಲೂ ಬಣ ಬಡಿದಾಟ ಇದೆ. ಬಣಗಳು ಇರುತ್ತವೆ, ಆದರೆ ಚುನಾವಣೆ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೂತನ ಶಾಸಕ ಯಾಸೀರ್ ಖಾನ್ ಪಠಾಣ್, ಆನಂದಸ್ವಾಮಿ ಗಡ್ಡದೇವರಮಠ, ಸೋಮಣ್ಣ ಬೇವಿನಮರದ, ರಾಜೇಶ್ವರಿ ಪಾಟೀಲ, ಮಂಜುನಾಥ ಮಣ್ಣಣ್ಣವರ ಸೇರಿದಂತೆ ಕಾಂಗ್ರೇಸ್ ಮುಖಂಡರು ಇದ್ದರು.
ಶಿಗ್ಗಾವಿ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ಮೊದಲೇ ಇತ್ತು. ಲೋಕಸಭಾ ಚುನಾವಣೆಯ ನಂತರ ನಮ್ಮ ಟೀಮು ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಅಹಿಂದ ಮತಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಜೊತೆಗೆ ಇಲ್ಲಿನ ಕಾರ್ಯಕರ್ತರ ಶ್ರಮ ಬಹಳಷ್ಟು ಇರುವುದರಿಂದ ಪಕ್ಷ ಕ್ಷೇತ್ರವನ್ನು ಗೆಲ್ಲಲು ಸಹಾಯವಾಗಿದೆ. ಶಿಗ್ಗಾವಿಯಲ್ಲಿ ನಾವು ಬೊಮ್ಮಾಯಿ ಸೋಲಿಸಬೇಕು ಅಥವಾ ಬಿಜೆಪಿ ಸೋಲಿಸಬೇಕು ಎಂದು ಚುನಾವಣೆ ಮಾಡಲಿಲ್ಲ, ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರಿಂದ ಜಯ ನಮ್ಮದಾಗಿದೆ ಎಂದು ಹೇಳಿದರು.