ನೈರ್ಮಲ್ಯ ನಮ್ಮ ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಡಿಪಾಯ: ಶಿಫಾ ಜಮಾದಾರ

Hygiene is the foundation of our mental, physical health: Shifa Jamadar

 

ನೈರ್ಮಲ್ಯ ನಮ್ಮ ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಡಿಪಾಯ: ಶಿಫಾ ಜಮಾದಾರ 

ವಿಜಯಪುರ 01: ನೈರ್ಮಲ್ಯ ನಮ್ಮ ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಡಿಪಾಯ, ಅದೇ ತೆರನಾಗಿ ಆಧ್ಯಾತ್ಮಿಕ ಉನ್ನತಿ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಸ್ವಚ್ಛತೆಯ ಮೂಲಮಂತ್ರ ಅಗತ್ಯ ಎಂದು ಲಾಡಲಿ ಫೌಂಡೇಷನ್ ರಾಯಭಾರಿ ಕುಮಾರಿ ಶಿಫಾ ಜಮಾದಾರ ಹೇಳಿದರು. 

ವಿಜಯಪುರ ನಗರದ ರಿಮ್ಯಾಂಡ್ ಹೋಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಲಾಡಲಿ ಫೌಂಡೇಷನ್ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಆಯ್ದ 31 ಶಾಲೆಗಳ ವಿದ್ಯಾರ್ಥಿಗಳಿಗೆ ಐದು ಸಾವಿರ ಸಾವಿರ ಬ್ಯಾಗ್, ಜಾಮಿಟ್ರಿ ಬಾಕ್ಸ್‌ ಸಹಿತ ಲೇಖನ ಸಾಮಗ್ರಿ ಹಾಗೂ ಸ್ವಚ್ಛತಾ ಅರಿವು ಕೈಪಿಡಿ ವಿತರಣಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಉನ್ನತ ಸಾಧನೆಗೆ ಉತ್ತಮ ಆರೋಗ್ಯ ಅಗತ್ಯ, ಉತ್ತಮ ಆರೋಗ್ಯಕ್ಕೆ ನೈರ್ಮಲ್ಯ ಅಗತ್ಯ ಎಂದರು. ನೈರ್ಮಲ್ಯದ ವಿಷಯವಾಗಿ ನಿರ್ಲಕ್ಷಸಲ್ಲ, ನೈರ್ಮಲ್ಯ ಇಲ್ಲದಿದ್ದರೆ ಅನೇಕ ರೋಗಗಳು ನಮ್ಮ ಜೀವನಕ್ಕೆ ಕಾಡುತ್ತವೆ, ರೋಗಗಳು ಬಾಧಿಸಿದರೆ ತರಗತಿಗಳಿಂದ ವಿಮುಖವಾಗಬೇಕಾಗುತ್ತದೆ,  

ದೊಡ್ಡ ದೊಡ್ಡ ರೋಗಗಳು ಕಾಡಿದರೆ ಹಲವಾರು ವರ್ಷಗಳ ಕಾಲ ತರಗತಿ, ಶೈಕ್ಷಣಿಕ ಚಟುವಟಿಕೆಗಳಿಂದ ವಿಮುಖವಾಗಬೇಕಾಗುತ್ತದೆ ಇದು ನಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ. ಹೀಗಾಗಿ ರೋಗಗಳೇ ಬಾರದಂತೆ ತಡೆಗಟ್ಟಲು ನೈರ್ಮಲ್ಯವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಶಿಫಾ ಕರೆ ನೀಡಿದರು.  

ಅನೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇದೆ, ಈ ವಿಷಯವಾಗಿಯೇ ಹಿಂಜರಿಕೆ, ಆತಂಕದ ಕಾರಣದಿಂದಾಗಿ ಅನೇಕ ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಅಧ್ಯಯನವನ್ನೇ ಕಡಿತಗೊಳಿಸಿಕೊಳ್ಳಬೇಕಾದ ಗಂಭೀರ ಸಮಸ್ಯೆಯೂ ಇದೆ, ಹೀಗಾಗಿ ಲಾಡಲಿ ಫೌಂಡೇಷನ್ ವಿಜಯಪುರ ಜಿಲ್ಲೆಯನ್ನು ದತ್ತು ಸ್ವೀಕರಿಸಿ ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸುತ್ತಿದೆ ಎಂದರು. 

ಈಗ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅತ್ಯಂತ ಉತ್ಕೃಷ್ಟ ಗುಣಮಟ್ಟದ ಬ್ಯಾಗ್, ಜಾಮಿಟ್ರಿ ಬಾಕ್ಸ್‌ ಒಳಗೊಂಡ ಲೇಖನ ಸಾಮಗ್ರಿ ಹಾಗೂ ಸ್ವಚ್ಚತೆ ಅನುಸರಿಸುವ ಕೈಪಿಡಿಗಳನ್ನು ವಿತರಿಸಲು ಮುಂದಾಗಿದ್ದು, 5 ಸಾವಿರ ಮಕ್ಕಳಿಗೆ ಈ ಬ್ಯಾಗ್ ವಿತರಿಸುವ ಸಂಕಲ್ಪ ಮಾಡಲಾಗಿದೆ ಎಂದರು. 

ಲಾಡಲಿ ಫೌಂಡೇಷನ್ ರಾಷ್ಟ್ರೀಯ ಸಲಹೆಗಾರ ಡಾ.ಜಾವೀದ ಜಮಾದಾರ ಮಾತನಾಡಿ, ಸ್ವಚ್ಚತೆ ಜೀವನದ ಭಾಗವಾಗಬೇಕು, ಸ್ವಚ್ಚತೆಯ ಬಗ್ಗೆ ನಾಳಿನ ನಾಗರಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ, ಹೀಗಾಗಿಯೇ ಲಾಡಲಿ ಫೌಂಡೇಷನ್ ರಾಷ್ಟ್ರದಾದ್ಯಂತ ನೈರ್ಮಲ್ಯದ ದೊಡ್ಡ ಅಭಿಯಾನವನ್ನು ಆಂದೋಲನ ರೂಪದಲ್ಲಿ ಸಾಕಾರೊಗಳಿಸುತ್ತಿದ್ದು, 3.5 ಕೋಟಿ ರೂ. ಮೊತ್ತದಲ್ಲಿ ವಿವಿಧ ರೀತಿಯ ನೈರ್ಮಲ್ಯಾಧಿರತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದರು. ವಿಜಯಪುರದಲ್ಲಿ ಈಗಾಗಲೇ 7 ಅತ್ಯಾಧುನಿಕ ಶೌಚಾಲಯಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸಲಾಗಿದ್ದು, ಇನ್ನೂ 12 ಹೊಸ ಶೌಚಾಲಯಗಳ ನಿರ್ಮಾಣ ಹಾಗೂ 12 ಶೌಚಾಲಯಗಳ ನವೀಕರಣಕ್ಕೆ ಲಾಡಲಿ ಫೌಂಡೇಷನ್ ಕಾರ್ಯಯೋಜನೆ ರೂಪಿಸಿದೆ ಎಂದು ವಿವರಿಸಿದರು.  

ಬಿಆರ್‌ಸಿ ಮುನೀರ ಗುರಡ್ಡಿ, ಲಾಡಲಿ ಫೌಂಡೇಷನ್ ಜಿಲ್ಲಾ ವ್ಯವಸ್ಥಾಪಕ ಯೂಸೂಫ್ ಕೊಟ್ಟಲ್, ಸಂಯೋಜಕ ಸರಿತಾ ಚಕ್ರಸಾಲಿ, ಪ್ರೀತಿ ಪತ್ತಾರ, ಯುವ ಮುಖಂಡರಾದ ಶೋಯೆಬ್ ಮೋಮಿನ್, ಯಾಸೀನ್ ಸಿಂದಗೀಕರ, ಶಿಕ್ಷಕರಾದ ರಾಜು ರಾಠೋಡ, ಎಲ್‌.ಎನ್‌. ಹಿರೇಕುರುಬರ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.