ಗದಗ 08: ಮಾನವರ ನಡೆ-ನುಡಿಗಳಲ್ಲಿ ಹೊಂದಾಣಿಕೆ, ಹೃದಯ-ಮನಸ್ಸುಗಳಲ್ಲಿ ಸಮನ್ವಯತೆ, ಪರಸ್ಪರರ ಮಧ್ಯೆ ಆತ್ಮೀಯತೆ ಬೆಳೆಸುವ ಸೌಹಾರ್ದ ಸಂಬಂಧ ಸಂಘಟಿಸುವ ಸಾತ್ವಿಕ ರೀತಿ-ನೀತಿಗಳೇ ಮೌಲ್ಯಗಳಾಗಿವೆ. ಮಾನವರು ‘ನೀನೂ ಬದುಕು, ಇತರರನ್ನೂ ಬದುಕಲು ಬಿಡು' ಎಂಬ ಲೋಕಕಲ್ಯಾಣ ಧ್ಯೇಯವಾಕ್ಯಕ್ಕೆ ಬದ್ಧರಾಗಿ ಸಾಮರಸ್ಯವಾಗಿ ಬದುಕುವಾಗ ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು ಮತ್ತು ಅನುಸರಿಸಬೇಕಾದ ನೀತಿ-ನಿಯಮಗಳು ‘ಮಾನವೀಯ ಜೀವನ ಮೌಲ್ಯಗಳು' ಎಂದೆನಿಸಿವೆ ಎಂದು ಕನ್ನಡ ಪ್ರಾಧ್ಯಾಪಕ ಪ್ರೊ. ಕರಿಯಪ್ಪ ಕೊಡವಳ್ಳಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜೀವನ ಮೌಲ್ಯಗಳು’ ಕುರಿತು ಮಾತನಾಡುತ್ತ, ಯಾವುದೇ ದೇಶ, ಕಾಲ, ಜನಾಂಗ, ಸಮಾಜದ ಜೀವನ ಮೌಲ್ಯಗಳ ತಳಹದಿಯಾಗಿರುವ ಹಾಗೂ ಸರ್ವಪ್ರದೇಶಕ್ಕೂ, ಸರ್ವಕಾಲಕ್ಕೂ, ಸರ್ವರಿಗೂ ಅನ್ವಯಿಸುವ ಕ್ಷಮೆ, ಸತ್ಯ, ಅಹಿಂಸೆ, ಶೀಲ, ದಯೆ, ಅನುಕಂಪ, ಸಮಾನತೆ, ಸಹಿಷ್ಣುತೆ, ದಾನ, ನಂಬಿಕೆ, ವಿಶ್ವಾಸ, ಸಹನೆ, ಸೇವೆ, ಸ್ವಾಭಿಮಾನ, ವಿಚಾರಶೀಲತೆ, ಮನೋವೈಶಾಲ್ಯತೆ ಮೊದಲಾದ ಮಾನವೀಯ ಗುಣಗಳೆಲ್ಲವೂ ‘ಆದರ್ಶಗಳು' ಎಂದೆನಿಸುತ್ತವೆ. ಈ ಆದರ್ಶಗಳೇ ಜೀವನ ಮೌಲ್ಯಗಳಾಗಿದ್ದು, ಇವುಗಳನ್ನು ಜೀವನದುದ್ದಕ್ಕೂ ಪ್ರಜ್ಞಾಪೂರ್ವಕವಾಗಿ ಪಾಲಿಸುವವರು ಮತ್ತು ಇವುಗಳಿಂದ ತಮ್ಮ ವ್ಯಕ್ತಿತ್ವವನ್ನು ಸಂಪನ್ನಗೊಳಿಸಿಕೊಳ್ಳುವವರು ಅಳಿವಿನ ನಂತರವೂ ಅಮರರಾಗಿರುತ್ತಾರೆ. ಸಮಾಜವು ಅವರನ್ನು ಸರ್ವಕಾಲಕ್ಕೂ ಗುಣಗಾನ ಮಾಡುತ್ತಿರುತ್ತದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಧಾ ಕೌಜಗೇರಿ ಅವರು ಆದರ್ಶಗಳು ಎಷ್ಟೇ ಪ್ರಯತ್ನಿಸಿದರೂ ಇಡಿಯಾಗಿ ಸಾಧ್ಯವಾಗುವುದಿಲ್ಲ. ಆದರೆ ಮೌಲ್ಯಗಳು ಪ್ರಯತ್ನಬಲದಿಂದ ಇಡಿಯಾಗಿ ಸಾಧ್ಯವಾಗುತ್ತವೆ. ಈ ಶಿಬಿರದ ಮೂಲಕ ತಾವು ಕೈಗೊಳ್ಳುತ್ತಿರುವ ‘ಸೇವೆ’ಯೂ ಅತ್ಯುತ್ತಮ ಜೀವನ ಮೌಲ್ಯವಾಗಿದ್ದು, ಇದು ತಮ್ಮನ್ನು ಬೌದ್ಧಿಕವಾಗಿ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಂಪಾದಿಸಲು ಸಹಕರಿಸುತ್ತದೆಂದು ಹೇಳಿದರು.
ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಅಪ್ಪಣ್ಣ ಹಂಜೆ ಅತಿಥಿ ಮಹನೀಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜನ ಅಧಿಕಾರಿಗಳಾದ ಪ್ರೊ. ವಿಜಯಕುಮಾರ ಎಸ್. ಮತ್ತು ಆಂಗ್ಲ ಪ್ರೊ. ನವೀನ ತಿರ್ಲಾಪುರ ಉಪಸ್ಥಿತರಿದ್ದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.