ವಾಷಿಂಗ್ಟನ್, ಮೇ 15, ಚೀನಾದಲ್ಲಿ ಯುಗುರ್ಸ್ ಮತ್ತು ಇತರ ಮುಸ್ಲೀಂ ಸಮುದಾಯ ಗುಂಪುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಹೊಣೆಯಾಗಿ ಮಾಡುವ ಮಸೂದೆಯನ್ನು ಅಮೆರಿಕ ಸಂಸತ್ ಶುಕ್ರವಾರ ಅಂಗೀಕರಿಸಿದೆ.ಈ ಕ್ರಮವನ್ನು ಸರ್ವಾನುಮತದಿಂದ ಸೆನೆಟ್ ಅಂಗೀಕರಿಸಿದ್ದು, ಇದನ್ನು ಅಂಗೀಕಾರಕ್ಕೆ ಹೌಸ್ ಆಫ್ ರೆಪ್ರಸೆಂಟಿಟೀವ್ಸ್ ಗೆ ಕಳುಹಿಸಲಾಗುವುದು. ಚೀನಾ ನಗರವಾದ ಕ್ಸಿನ್‍ಜಿಯಾಂಗ್ ನಲ್ಲಿ ಅಲ್ಪಸಂಖ್ಯಾತ ಟರ್ಕಿ ಮುಸ್ಲೀಮರ ಮಾನವಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಕ್ಕೆ ಸೆನೆಟ್ ತೀವ್ರವಾಗಿ ಖಂಡಿಸಿದ್ದು, ಚೀನಾದ ಒಳಗೆ ಮತ್ತು ಹೊರಗೆ ಈ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಬಂಧನವನ್ನು ಕೊನೆಗಾಣಿಸಬೇಕು ಎಂದು ಸೆನೆಟ್ ಚೀನಾವನ್ನು ಆಗ್ರಹಿಸಿದೆ.
ಯುಗುರ್ಸ್ ಸಮುದಾಯ 1930ರಿಂದ 1940ರ ವರೆಗೂ ಚೀನಾದಿಂದ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಚೀನಾ ಸರ್ಕಾರ ಉಗ್ರವಾದ ಹೋರಾಟದ ಕಾರಣವೊಡ್ಡಿ ಈ ಸಮುದಾಯಗಳಿರುವ ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ.ಭಯೋತ್ಪಾದನೆ ವಿರುದ್ಧ ಹಾಗೂ ಧಾರ್ಮಿಕ ಉಗ್ರವಾದ ವಿರುದ್ಧದ ಹೋರಾಟದ ಹೆಸರಿನಲ್ಲಿ ಸುಮಾರು 10 ಲಕ್ಷ ಅಲ್ಪಸಂಖ್ಯಾತ ಯುಗುರ್ಸ್ ಮತ್ತು ಟರ್ಕಿ ಮುಸ್ಲೀಮರನ್ನು ವಶಕ್ಕೆ ಪಡೆದು ಶಿಬಿರಗಳಲ್ಲಿ ಇರಿಸಲಾಗಿದೆ ಎಂಬ ಆರೋಪಗಳಿಂದ ಚೀನಾ ಟೀಕೆಗೆ ಗುರಿಯಾಗುತ್ತಲೇ ಬಂದಿದೆ.