ಸಿಎಎ ವಿರೋಧಿಸಿ ಬೃಹತ್ ಸಮಾವೇಶ, ಬೆಂಗಳೂರಿನಲ್ಲಿ ಭಾರಿ ಭದ್ರತೆ

ಬೆಂಗಳೂರು,  ಡಿ. 23, ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಂ ಶಾಂತಿ ಸೌಹಾರ್ದ  ಸಭೆಯ ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಪುಲಿಕೇಶಿ ನಗರದ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ 1 ಲಕ್ಷ ಜನ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ  ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ  60  ಸಿಎಆರ್, 53 ಕೆಎಸ್ಆರ್ ಪಿ ತುಕಡಿ ಹಾಗೂ  1 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ನಿಗಾ ವಹಿಸುತ್ತಿದೆ. ನಗರದ  ಕಂಟೋನ್ಮೆಂಟ್ ನಿಂದ ಆರಂಭವಾಗಲಿರುವ ಜಾಥಾ ಸೌಂತ್ ಎಂಡ್ ಸರ್ಕಲ್, ಮಿನರ್ವ್ ಸರ್ಕಲ್,  ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಜಯಮಹಲ್, ಚಿಕ್ಕಬಾಣಾವರ, ಬಾಗಲಗುಂಟೆ,  ಯಶವಂತಪುರ ಸರ್ಕಲ್, ಓಲ್ಡ್ ಏರ್ ಪೋರ್ಟ್ ರಸ್ತೆ ಸೇರಿ ಬನ್ನೇರುಘಟ್ಟ ರಸ್ತೆಯಲ್ಲಿ  ಜಾಥಾ ನಡೆಯಲಿದೆ. ಈಗಾಗಲೇ  ಜಯಮಹಲ್ ರಸ್ತೆ, ಹಜ್ ಕ್ಯಾಂಪ್, ನಂದಿದುರ್ಗ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ  ಹೇರಲಾಗಿದೆ. ಅಲ್ಲದೇ, ಜಯಮಹಲ್ ರಸ್ತೆಯ ಚಾಮರ ಮಂಟಪ, ಫನ್ ವರ್ಲ್ಡ್‌, ಅಮಾನುಲ್ಲಾ ಖಾನ್  ಮೈದಾನ್, ಸರ್ಕಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ  ಡಿಜಿ  ಮತ್ತು ಐಜಿಪಿ  ನೀಲಮಣಿ ರಾಜು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ  ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಗರದಲ್ಲಿನ ಬಿಗಿ ಭದ್ರತೆ ಕುರಿತು  ಮಾಹಿತಿ ನೀಡಿದ್ದಾರೆ. ಸುಮಾರು  35 ಕ್ಕಿಂತ ಹೆಚ್ಚು ಸಂಘಟನೆಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ  ಮಂಗಳೂರಿನಂತೆ ಯಾವುದೇ ಅಹಿತಕರ ಘಟನೆ‌ ಮರುಕಳಿಸಬಾರದು ಎಂದು ಮುಖ್ಯಮಂತ್ರಿ  ಯಡಿಯೂರಪ್ಪ  ಅವರು ನೀಲಮಣಿ ರಾಜು ಅವರಿಗೆ ಸೂಚನೆ ನೀಡಿದ್ದಾರೆ. 12 ಗಂಟೆಯಿಂದ 4 ಗಂಟೆವರೆಗೆ ಸಂಚಾರ ವ್ಯತ್ಯಯ ಆಗಲಿದೆ.ಜಾಥಾ ಸಂದರ್ಭದಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರುವುದು  ಮಾಡಿದ್ದರೇ ಅಂತಹವರ ವಿರುದ್ಧ. ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಎನ್  ಭಾಸ್ಕರ್ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದರೇ, ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇಂದು ನಗರದಲ್ಲಿ ಯಾವುದೇ ನಿಷೇದಾಜ್ಞೆ  ಇರುವುದಿಲ್ಲ. ಅಲ್ಲದೇ, ಮದ್ಯ ಮಾರಾಟ ಕ್ಕೂ ನಿಷೇಧವಿಲ್ಲ ಎಂದು ಅವರು ತಿಳಿಸಿದ್ದಾರೆ.