ಹುಣಸೂರು,ನ 28- ನನ್ನದು ನಾಟಕದ ಕಣ್ಣೀರಲ್ಲ.ಕಣ್ಣೀರು ಹಾಕುವುದು ನಮ್ಮ ಕುಟುಂಬ ಪೇಟೆಂಟ್ ಪಡೆದಿದೆ ಎಂದು ಹೇಳಿದರೂ ಪರವಾಗಿಲ್ಲ.ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ.
ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರ ಧರ್ಮಾಪುರದಲ್ಲಿ ಎಚ್.ಡಿ.ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು.ಈ ವೇಳೆ ಮಾತನಾಡಿದ ಅವರು,ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ. ನಿಮ್ಮ ಯೋಗ್ಯತೆಗೆ ಎಷ್ಟು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೀರಾ.?. ನಮ್ಮ ಮನೆ ಮುಂದೆ ಎಷ್ಟು ಬಡವರು ಬಂದು ನಿಲ್ಲುತ್ತಾರೆ? ನಿಮ್ಮ ಮನೆ ಮುಂದೆ ಎಷ್ಟು ಜನ ಕಷ್ಟ ಹೇಳಿಕೊಂಡು ಮನೆಗೆ ಬರುತ್ತಾರೆ ಹೇಳಿ? ನಮ್ಮ ಕಣ್ಣೀರು ಭಾವನಾತ್ಮಕ. ಬಡವರ ಕಷ್ಟ ನೋಡಿದ ತಕ್ಷಣ ಕಣ್ಣೀರು ಬರುತ್ತದೆ ಎಂದು ತಿರುಗೇಟು ನೀಡಿದರು.
ನಿನ್ನೆ ಕೆ.ಆರ್.ಪೇಟೆಯ ಕಿಕ್ಕೇರಿಯಲ್ಲಿ ಅಭ್ಯರ್ಥಿಪರ ಪ್ರಚಾರ ಸಭೆಯಲ್ಲಿ ಮಗನ ಸೋಲನ್ನ ಕಂಡು ಕಣ್ಣೀರು ಹಾಕಿದ್ದಕ್ಕೆ ಟೀಕಿಸಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕುರುಬ ಸಮಾಜದ ವಿಚಾರದಲ್ಲಿ ಯಾವತ್ತೂ ಅಗೌರವವಾಗಿ ಮಾತಾಡಿಲ್ಲ ಹಾಗೆ ಮಾತನಾಡುವುದೂ ಇಲ್ಲ.ವಿಶ್ವನಾಥ್ ಅವರು ಹೇಳಿದಂತೆ ನಾನು ನಡೆದುಕೊಂಡಿದ್ದರೆ ನನ್ನ ಬಾಯಿಗೆ ಹುಳ ಬೀಳಲಿ ಎಂದ ಅವರು,ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ವಿಶ್ವನಾಥ್ ಯಾವತ್ತೂ ನನ್ನ ಬಳಿ ಚರ್ಚೆ ಮಾಡಿಲ್ಲ. ಹತ್ತಾರು ಬಾರಿ ನನ್ನ ಜೊತೆ ಊಟ ತಿಂಡಿ ತಿಂದಿದ್ದಾರೆ.ಆದರೆ ಈ ಬಗ್ಗೆ ಚಕಾರವೆತ್ತಿಲ್ಲ.ಅವರು ಕೆಎಸ್ಆರ್ ಟಿಸಿ ಸ್ಕ್ರಾಪ್ ಪದಾರ್ಥ ಖರೀದಿಗಾಗಿ ಅರ್ಜಿ ಹಿಡಿದುಕೊಂಡು ತಮ್ಮಬಳಿ ಬಂದಿದ್ದರು. ಮುಂಬಯಿಯವರಿಗೆ ಕೊಡಿಸಲು ಶಿಪಾರಸ್ಸು ಮಾಡುವಂತೆ ತಮಗೆ ಮನವ ಮಾಡಿದರು.ಅದನ್ನ ಹೊರತು ಪಡಿಸಿದರೆ ನನ್ನ ಬಳಿ ಮತ್ಯಾವ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಎಂಎಲ್ಎ ಸಿಕ್ಕಿಬಿದ್ದಿದ್ದಾರಲ್ಲ,ಆ ವಿಚಾರ ಯೋಚಿಸಲೂ ಅಸಹ್ಯ ಆಗುತ್ತದೆ.ಅರವಿಂದ ಲಿಂಬಾವಳಿ ವಿಚಾರದಲ್ಲಿ ಸ್ಟೇ ತಂದರು.ಇದೀಗ ಮತ್ತೊಬ್ಬ ಶಾಸಕನ ರಾಸಲೀಲೆ ಹೊರಬಂದಿದೆ.ನಾವು ಇದನ್ನೆಲ್ಲಾ ಸಹಿಸಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.