ಭರತ ಖಂಡವನ್ನು ತುಂಡರಿಸುವ ಭಂಡತನವನ್ನು ತೋರಿದ ರಾಜರುಗಳು ಭಾರತ ದೇಶದ ಮೇಲೆ ದಂಡೆತ್ತಿ ಬಂದರು. ಇಲ್ಲಿನ ಸಿರಿ ಸಂಪತ್ತಿಗೆ ಮರುಳಾದ ಅದೆಷ್ಟೋ ಜನ ರಾಜರುಗಳು ಲೂಟಿಕೋರರಾಗಿ ಮಾರ್ಪಟಟರು. ಇಲ್ಲಿನ ಧರ್ಮ ಸಹಿಷ್ಣುತೆಯನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ನಡೆದುಕೊಳ್ಳುವ ಬದಲು ಮಥಾಂದರಾದ ರಾಜರುಗಳು ಹಿಂಸೆಯ ಮಾರ್ಗವನ್ನನುಸರಿಸಿ ಮಣ್ಣಾಗಿ ಹೋದರು. ಕೈಚಾಚಿ ಕೇಳಿದವರನ್ನು ಕೈ ಹಿಡಿದು ಕರೆದ ದೇಶವನ್ನೇ ಕಿತ್ತು ತಿನ್ನುವ ಹುನ್ನಾರ ಮಾಡಿದರು. ಆದರು ದೇಶ ಹಣ್ಣಾಗಲಿಲ್ಲ, ಮಣ್ಣಾಗಲಿಲ್ಲ, ಕಳೆದುಕೊಂಡಿದ್ದಕ್ಕಾಗಿ ಕಣ್ಣೀರಿಡಲಿಲ್ಲ. ಈ ರೀತಿ ಮೇಲಿಂದ ಮೇಲೆ ವಿದೇಶಿಯ ಆಕ್ರಮಣಕ್ಕೆ ಹಾಗೂ ದಾಳಿಗೆ ಯಾವುದಾದರೂ ದೇಶ ತುತ್ತಾಗಿದ್ದೇ ಆದಲ್ಲಿ ಜಗತ್ತಿನ ಭೂಪಟದಲ್ಲಿ ಅದರ ಹೆಸರು ಮಾತ್ರವಲ್ಲ ಅದರ ಅವಶೇಷಗಳು ಉಳಿಯುತ್ತಿರಲಿಲ್ಲವೋ ಏನೊ? ಆದರೆ ಪ್ರತಿಭಾರಿಯ ದಾಳಿಗೊಮ್ಮೆ ಮೈಗೊಡವಿ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ನಿಂತ ಜಗತ್ತಿನ ಏಕೈಕ ರಾಷ್ಟ್ರ ಎಂದರೆ ಅದು ಭಾರತವಲ್ಲದೇ ಮತ್ಯಾವುದು ಆಗಲೂ ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ನಮ್ಮವರಲ್ಲಿನ ದೂರದೃಷ್ಠಿ ಹಾಗೂ ನಮ್ಮ ಪೂರ್ವಜರ ಇಚ್ಛಾಶಕ್ತಿ ಮಾತ್ರ. ದಂಡಯಾತ್ರೆಗಳನ್ನು ಮಾಡುವುದೇ ಒಂದು ದಂಡ ಎಂದು ನಂಬಿದವರು ನಾವು. ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಅಸ್ಥಿತ್ವ, ತನ್ನದೇ ಆದ ಸಂಸ್ಕೃತಿ, ತನ್ನದೇ ಆದ ಪರಂಪರೆ ಇರುತ್ತದೆ. ಅದನ್ನು ಹಾಳು ಮಾಡುವ ಅಧಿಕಾರ ಬೇರೊಂದೊ ರಾಷ್ಟ್ರಕ್ಕೆ ಇರುವುದಿಲ್ಲ. ಹಾಗೇ ಹಾಳು ಮಾಡುವುದು ವೀರನಾದವನ ಗುಣವೂ ಅಲ್ಲ ಎನ್ನುವುದನ್ನು ನಂಬಿದವರು ನಮ್ಮವರು. ಅದಕ್ಕಾಗಿಯೇ ನಮ್ಮ ದೇಶದ ಎಲ್ಲೆಯಲ್ಲಿಯೇ ಬದುಕು ಕಟ್ಟಿಕೊಂಡವರೇ ಹೊರತು ಬೇರೊಬ್ಬರ ಭೂಮಿಗೆ ಆಸೆ ಪಡಲಿಲ್ಲ. ಬೇರೆ ದೇಶದಿಂದ ಬಂದವರನ್ನು ಅತಿಥಿಗಳಾಗಿ ಸತ್ಕರಿಸಿದ ಉದಾಹರಣೆಯನ್ನು ಇತಿಹಾಸದುದ್ದಕ್ಕೂ ನಾವು ನೋಡಿದ್ದೇವೆ. ಹಾಗೆಂದು ನಮ್ಮಲ್ಲಿ ಹೋರಾಟದ ಛಾತಿ ಇರಲಿಲ್ಲ ಎಂದೇನಲ್ಲ. ಯಾವತ್ತೂ ತಾನಾಗೇ ತಾನು ಬೇರೊಬ್ಬರ ಮೇಲೆ ಯುದ್ಧಕ್ಕೆ ಹೋಗದ ನಮ್ಮವರು ನಮ್ಮ ಮೇಲೆ ದಂಡೆತ್ತಿ ಬಂದಾಗ ಕೈ ಕಟ್ಟಿಯೂ ಕೂರಲಿಲ್ಲ. ಅನ್ಯಾಯ ಮಾಡಲು ಬಂದವರಿಗೂ ಸಹ ಅನ್ನ ನೀರು ಕೊಟ್ಟು ಉಪಚರಿಸಿ, ಅದನ್ನು ಅರಿಯದೇ ತಪ್ಪು ಹೆಜ್ಜೆ ಇಟ್ಟವರನ್ನು ಸಂಹರಿಸಿದ ದೇಶ ಇದು. ಹೀಗಾಗಿ ಜಗತ್ತಿನ ರಾಷ್ಟ್ರಗಳನ್ನು ನೋಡಿದಾಗ ಭಾರತಕ್ಕೆ ಒಂದು ವಿಶೇಷ ಸ್ಥಾನಮಾನ ಲಭಿಸುತ್ತದೆ.
ಇಷ್ಟೆಲ್ಲ ಯಾಕೆ ಭಾರತ ದೇಶದ ಬಗ್ಗೆ ಬರೆಯುತ್ತಿದ್ದೇನೆ ಎನ್ನುವ ಕುತುಹಲ ನಿಮ್ಮನ್ನು ಕಾಡುತ್ತಿದೆ ಅಲ್ಲವೇ. ಅದಕ್ಕೆ ಕಾರಣವೂ ಇದೆ. ಅದನ್ನು ಹೇಳಬೇಕಾದ ಅನಿವಾರ್ಯತೆಯೂ ಇದೆ. ಪರಾಕ್ರಮಿಗಳಾದ ಭಾರತೀಯರಲ್ಲಿ ಇಂದು ವೀರತ್ವದ ಗುಣ ಕಡಿಮೆಯಾಗುತ್ತಿದೆ. ಮೌಲ್ಯಗಳೆಲ್ಲ ಮಾಯವಾಗಿ ಸ್ವಾರ್ಥ ಮನೆ ಮಾಡುತ್ತಿದೆ. ಮೋಸ ಹೊಗೆಯಾಡುತ್ತಿದೆ. ದ್ವೇಶ ದಹಿಸುತ್ತಿದೆ. ಇದು ಭಾರತವನ್ನು ಕಟ್ಟಬೇಕಾದ ಯುವಜನತೆಯ ಮೇಲೆಯೂ ಗಂಭೀರವಾದ ಪರಿಣಾಮ ಬೀರುತ್ತಿದೆ. ಅಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು “ಸತ್ಯ ಪವಿತ್ರತೆ ಮತ್ತು ನಿಸ್ವಾರ್ಥತೆ ಇವು ಯಾರಲ್ಲಿವೆಯೋ ಆ ವ್ಯಕ್ತಿಯನ್ನು ಹತ್ತಿಕ್ಕಬಲ್ಲ ಶಕ್ತಿಯು ಈ ಜಗತ್ತಿನಲ್ಲೇ ಇಲ್ಲ. ಪವಿತ್ರತೆ ಹಾಗೂ ನಿಸ್ವಾರ್ಥತೆಗಳ ಕವಚ ತೊಟ್ಟವನಿಗೆ ಇಡೀ ವಿಶ್ವವೇ ತಿರುಗಿ ಬಿದ್ದರು ಅದನ್ನು ಏಕಾಂಗಿಯಾಗಿ ಎದುರಿಸಬಲ್ಲ” ಎನ್ನುವುದು ಅದೆಷ್ಟು ಸತ್ಯವಾಗಿತ್ತು. ಅದಕ್ಕಾಗಿಯೇ ಭಾರತೀಯರು ಯಾರಿಗೂ ಕೇಡು ಬಯಸಲಿಲ್ಲ. ಹಾಗೆಂದು ಮಂಡಿಯೂರಿಯು ಕುಳಿತುಕೊಳ್ಳಲಿಲ್ಲ. ಆದರೆ ಇಂದು ಸ್ವಾಮಿಜಿಯವರ ಮಾತಿನಲ್ಲಿ ಮೂಡಿದ ವಿಚಾರಗಳ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತಿದೆ ಮಾತ್ರವಲ್ಲ; ಬೆಂಬಿಡದೆ ಕಾಡುತ್ತಿದೆ. ನನಗೆ ಇತಿಹಾಸದ ಒಂದು ಘಟನೆ ಜ್ಞಾಪಕಕ್ಕೆ ಬರುತ್ತಿದೆ. ಸಂಪತ್ಭರಿತವಾದ ಭಾರತವನ್ನು ಕಂಡು ಅದೆಷ್ಟೋ ಜನ ಭಾರತದ ಮೇಲೆ ದಂಡೆತ್ತಿ ಬಂದರು. ಹಾಗೆ ದಂಡೆತ್ತಿ ಬಂದ ಭಂಡರಲ್ಲಿ ಮಹ್ಮದ್ ಘೋರಿ ಕೂಡ ಒಬ್ಬ. ಯಾರ ಮೇಲೂ ದ್ವೇಷ ಸಾಧಿಸದ ಭಾರತೀಯ ಅರಸರುಗಳು ತಮ್ಮ ದೇಶದಲ್ಲಿ ತಮಗೆ ದೊರೆತಷ್ಟು ಭೂಮಿಯನ್ನಿಟ್ಟುಕೊಂಡು ಆಡಳಿತ ಮಾಡುತ್ತಿದ್ದರು. ಆದರೂ ಸಹ ಆಸೆ ಬುರಕತನ ಮೈಗೂಡಿಸಿಕೊಂಡ ಘೋರಿಯಂತವರು ಭಾರತಕ್ಕೆ ಮಗ್ಗಲು ಮುಳ್ಳಾಗಿ ಕಾಡುವುದಕ್ಕೆ ಸಿದ್ಧವಾಗಿದ್ದರು. ಆ ಸಮಯದಲ್ಲಿ ದೆಹಲಿಯನ್ನು ಆಳುತ್ತಿದ್ದ ದೊರೆ ಎಂದರೆ ಪೃತ್ವಿರಾಜ ಚೌಹಾಣ. ತನ್ನ ದಕ್ಷ ಆಡಳಿತ ಹಾಗೂ ಪರಾಕ್ರಮಗಳಿಂದ ಪ್ರಸಿದ್ಧನಾಗಿದ್ದ ಆ ಅರಸನ ಮೇಲೆ ಘೋರಿಯ ಕಣ್ಣು ಬಿದ್ದಿತು. ಅವನು ತನ್ನ ಸೈನ್ಯ ಸಮೇತವಾಗಿ ದೆಹಲಿಗೆ ನುಗ್ಗಿ ದೆಹಲಿಯನ್ನು ವಶಪಡಿಸಿಕೊಂಡ ಮಾತ್ರವಲ್ಲ ಪೃತ್ವಿರಾಜನ ಕಣ್ಣುಗಳನ್ನು ಕೀಳಿಸಿದನು. ಇಷ್ಟಕ್ಕೆ ಈತನ ದಾಹ ತೀರಲಿಲ್ಲ. ಕಣ್ಣು ಕೀಳಿಸಿದ ಪೃತ್ವಿರಾಜನನ್ನು ಇನ್ನಿಲ್ಲದಂತೆ ಹಿಂಸೆ ನೀಡಲು ಮುಂದಾಗಿ ಒಂದು ಪಂದ್ಯವನ್ನು ಆಯೋಜಿಸಿದನು. ಇದರ ಮೂಲಕ ಕಣ್ಣುಕಳೆದುಕೊಂಡಿರುವ ಪೃಥ್ವಿರಾಜನ ಬಿಲ್ಲುಗಾರಿಕೆಯನ್ನು ಪರಿಕ್ಷೆಗೆ ಒಡ್ಡುವುದು ಮತ್ತು ಅವನನ್ನು ಅವಮಾನಿಸುವ ಉದ್ದೇಶವಿತ್ತು. ಕಾರಣ ಪೃಥ್ವಿರಾಜನು ಕಣ್ಣು ಕಟ್ಟಿಕೊಂಡು ಅಥವಾ ಕತ್ತಲೆಯಲ್ಲಿ ಕೇವಲ ಶಬ್ದವನ್ನು ಗುರುತಿಸಿ ಬಾಣ ಹೂಡಿ ಗುರಿ ತಲುಪಿಸುವ ಶಬ್ದವೇದಿ ವಿದ್ಯೆಯನ್ನು ಕೈವಶ ಮಾಡಿಕೊಂಡಿದ್ದನು. ಇದನ್ನು ಕಣ್ಣಾರೆ ಕಾಣಬೇಕು ಎನ್ನುವ ಕುತುಹಲದಿಂದ ಪಂದ್ಯ ನಿಗದಿ ಮಾಡಿದ್ದನು. ಉಪ್ಪರಿಗೆಯ ಮೇಲೆ ಕುಳಿತ ಘೋರಿಯು ಪ್ರದರ್ಶನ ಆರಂಭವಾಗಲಿ ಎಂದು ಹೇಳುತ್ತಿದ್ದಂತೆ ಧ್ವನಿ ಬಂದ ದಿಕ್ಕನ್ನು ಗುರುತಿಸಿದ ಪೃಥ್ವಿರಾಜನು ಬಾಣ ಹೂಡಿ ಘೋರಿಯನ್ನು ಕೊಂದು ಅಡ್ಡಡ್ಡ ಮಲಗಿಸಿದನು. ಇದು ನಮ್ಮ ರಾಜರುಗಳಲ್ಲಿದ್ದ ಪರಾಕ್ರಮ. ಆದರೆ ಅಕ್ಷರಶಃ ನಾನು ಹೇಳಲು ಹೊರಟ ವಿಷಯ ಇದಲ್ಲ. ಬದಲಿಗೆ ಒಬ್ಬ ವಿದೇಶಿ ದೊರೆ ನಮ್ಮ ದೇಶಕ್ಕೆ ನುಗ್ಗಿ ಗೆಲುವು ಸಾಧಿಸಿದ್ದಾದರೂ ಹೇಗೆ? ಇವನಿಗೆ ಇಂಥ ಶಕ್ತಿಯಾದರೂ ಎಲ್ಲಿಂದ ಬಂತು ಎನ್ನುವ ಕುರಿತು. ಹೌದು ಇದರ ಹಿಂದೆ ಒಂದು ರೋಚಕವಾದ ಸತ್ಯ ಅಡಗಿದೆ. ಹಾಗೂ ನೋವಿನ ಸಂಗತಿಯೂ ಅಡಗಿದೆ.
ಆಗಿನ ಕನೌಜ ಸಂಸ್ಥಾನವನ್ನು ಆಳುತ್ತಿದ್ದ ರಾಜ ಜಯಚಂದ್ರನಿಗೆ ಸಂಯೋಗಿತೆ ಎನ್ನುವ ಮಗಳಿದ್ದಳು. ಅಮವಾಸ್ಯೆಯ ಕತ್ತಲಲ್ಲಿ ನಿಂತರೂ ಹಾಲು ಬೆಳದಿಂಗಳು ಉಕ್ಕಿದಂತಾ ಮೈಬಣ್ಣ, ನವಿಲಿನ ಶರಿರ, ಕೋಗಿಲೆಯ ಶಾರೀರ, ಜಿಂಕೆಯ ಕಣ್ಣು, ಸಂಪಿಗೆಯ ನಾಸಿಕದಿಂದ ಅತ್ಯಂತ ಸುಂದರಳಾಗಿ ಕಂಗೊಳಿಸುತ್ತಿದ್ದಳು. ಯೌವ್ವನಕ್ಕೆ ಕಾಲಿಟ್ಟ ಮಗಳನ್ನು ಮದುವೆ ಮಾಡಿಕೊಡುವ ಉದ್ದೇಶದಿಂದ ರಾಜ ಜಯಚಂದ್ರನು ಸ್ವಯಂವರವನ್ನು ಆಯೋಜನೆ ಮಾಡಿದ್ದನು. ಆದರೆ ಸ್ವಯಂವರದಲ್ಲಿ ಬಂದು ತನ್ನ ಶೌರ್ಯಪ್ರದರ್ಶನ ಮಾಡದ ಪೃಥ್ವಿರಾಜನು ನೇರವಾಗಿ ಸ್ವಯಂವರಕ್ಕೆ ನುಗ್ಗಿ ಸಂಯೋಗಿತೆಯನ್ನು ಅಪಹರಿಸಿಕೊಂಡು ಹೋದನು. ಇದೇ ಮುಂದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದ್ದು. ಅಂದರೆ ಪೃಥ್ವಿರಾಜನಿಂದ ಅವಮಾನಿತನಾದ ಜಯಚಂದ್ರನು ನೇರವಾಗಿ ಅವನೊಡನೆ ಹೋರಾಡಿ ಸೇಡು ತೀರಿಸಿಕೊಳ್ಳದೇ ಹಗೆತನಕ್ಕೆ ಬಿದ್ದು, ವಿದೇಶಿ ಶತ್ರುವಿನೊಡನೆ ಕೈಜೋಡಿಸಿ, ದೇಶದ ಇತಿಹಾಸವನ್ನು ಮಣ್ಣುಗೂಡಿಸಿ, ಕೊನೆಗೆ ತಾನೂ ಮಣ್ಣಾಗಿ ಹೋದನು. ಇವರ ಹುಚ್ಚಾಟಕ್ಕೆ ಹಾಗೂ ದ್ವೇಷಕ್ಕೆ ಅಷ್ಟು ಸ್ಪುರದ್ರೂಪಿಯಾದ ಸಂಯೋಗಿತೆ ಅಗ್ನಿಪ್ರವೇಶ ಮಾಡಿ ಕರಕಲಾದಳು. ಇಷ್ಟೆಲ್ಲ ಘಟನೆಗೆ ಕಾರಣಳಾದ ಸುರಸುಂದರಿ ಸಂಯೋಗಿತೆಯನ್ನು ತಂದೆಯು ಬದುಕಿಸಿಕೊಳ್ಳಲಿಲ್ಲ, ಹೊತ್ತುಕೊಂಡು ಬಂದ ಪೃಥ್ವಿರಾಜನು ಬದುಕಿ ಬಾಳಿಸಲಾಗಲಿಲ್ಲ. ಇದು ಇತಿಹಾಸವಾದ ನಿಜ ಘಟನೆಯೇ ಆಗಿರಲಿ ಇಲ್ಲ ದಂತಕಥೆಯೇ ಆಗಿರಲಿ ಆದರೆ ಇದರ ಹಿಂದೆ ಒಂದು ಸೂಕ್ಷ್ಮ ಅಡಗಿದೆ ಅದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಕಾರಣ ಇಲ್ಲಿ ನಮ್ಮನ್ನು ಸೋಲಿಸಿದ್ದು ವಿದೇಶಿಯನಲ್ಲ. ಬದಲಿಗೆ ನಮ್ಮವನೇ ಎನ್ನುವುದೇ ಖೇದಕರ ವಿಷಯ. ಒಂದು ಹೆಣ್ಣಿಗಾಗಿ ಪೃಥ್ವಿರಾಜ ತನ್ನ ಪೌರುಷವನ್ನು ಮರೆತದ್ದು ಒಂದೆಡೆಯಾದರೆ, ಆಂತರಿಕ ಶತ್ರುವನ್ನು ಸಂಹಾರ ಮಾಡಲು ಬಾಹ್ಯ ಶತ್ರುವಿನೊಡನೆ ಕೈಜೋಡಿಸಿ ತನ್ನ ಮೃತ್ಯುವಿಗೆ ತಾನೇ ಆಹ್ವಾನವಿಟ್ಟುಕೊಂಡ ಜಯಚಂದ್ರ ಇನ್ನೊಂದೆಡೆ. ಆದರೆ ಇಬ್ಬರದೂ ತಪ್ಪೇ ಅಲ್ಲವೆ? ಹಾಗೆ ಇಂದು ಸಹ ಜರುಗುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. “ಚರಿತ್ರೆ ನಿರ್ಮಾಣ ಮಾಡಬೇಕೆಂದರೆ ಚಾರಿತ್ರ್ಯ ಹೊಂದಿರಬೇಕು” ಎನ್ನುವ ಮಾತನ್ನು ಓದಿದ್ದೇವೆ. ಆದರೆ ಇಂದು ದೇಶದ ಚರಿತ್ರೆಯನ್ನು ಓದಿದರೂ ಸಹ ಸಚ್ಚಾರಿತ್ರ್ಯವನ್ನು ನಿರ್ಮಾಣ ಮಾಡಿಕೊಳ್ಳದೇ ಯುವಶಕ್ತಿ ಅಡ್ಡದಾರಿ ಹಿಡಿಯುತ್ತಿದೆ. ಅಂದು ಪೃಥ್ವಿರಾಜ ಮಾಡಿದ ರೀತಿಯ ತಪ್ಪನ್ನೇ ಇಂದು ನಮ್ಮವರು ಸಹ ಮಾಡುತ್ತಲಿದ್ದಾರೆ. ಪೃಥ್ವಿರಾಜನಾದರೋ ಧೀರ ಉದಾತ್ತನಾಗಿದ್ದ. ಧೈರ್ಯಶಾಲಿ ಹಾಗೂ ಪರಾಕ್ರಮಶಾಲಿಯಾಗಿದ್ದ, ಕಣ್ಣು ಕಳೆದುಕೊಂಡರು ಸಹ ರಾಜ್ಯದ ಮೇಲಿನ ಅಭಿಮಾನ ಕಳೆದುಕಂಡಿರಲಿಲ್ಲ. ಅದಕ್ಕಾಗಿಯೇ ಕುರುಡನಾಗಿಯೂ ಕೂಡ ಶತ್ರುವನ್ನು ಕೊಂದು ಅಮರನಾದನು. ಆದರೆ ಆಧುನಿಕ ಭಾರತದಲ್ಲಿ ಧೀರೋದಾತ್ತ ಚಿಂತನೆಗಳೆಲ್ಲ ಮಕಾಡೆ ಮಲಗಿಕೊಂಡು ಬಿಟ್ಟಿವೆ. ದೇಶಪ್ರೇಮವೆಂಬುದು ಕೇವಲ ಮಾತನಾಡುವಾಗ ಬಳಕೆಯಾಗುವ ಸಾಮಾನ್ಯ ಪದವಾಗಿ ಬಿಟ್ಟಿದೆಯೆ ಹೊರತು ದೇಶಭಿಮಾನ ಎನ್ನುವುದು ಮೂಲೆಗುಂಪಾಗಿದೆ. ಆಧುನಿಕತೆ, ತಾಂತ್ರೀಕರಣ ಎನ್ನುವ ನೆಪದಲ್ಲಿ ಮಾನವನು ಸಹ ಯಂತ್ರ ಮಾನವನಾಗಿ ಹೊಗುತ್ತಿದ್ದಾನೆ. ಇಂಥ ಸನ್ನಿವೇಶದಲ್ಲಿ ಸದೃಢ ಭಾರತ ನಿರ್ಮಾಣದ ಕನಸು ಏನಾಗಬೇಕು ನೀವೆ ಹೇಳಿ. ಜಯಚಂದ್ರ ಹಾಗೂ ಪೃಥ್ವಿರಾಜರಂತ ಒಳ ಜಗಳವನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ ಕಾಲಿಟ್ಟ ಘೋರಿಯಂತಹ ಪಾಥಕಿಗಳು ಇಂದೂ ಸಹ ನಮ್ಮ ಮಧ್ಯದಲ್ಲಿದ್ದಾರೆ. ನಾವು ಧರ್ಮದ ಹೆಸರಲ್ಲಿ ಕಚ್ಚಾಡುತ್ತ, ಒಂದು ಧರ್ಮವನ್ನು ಓಲೈಸಲು ಇನ್ನೊಂದನ್ನು ತೆಗಳುತ್ತ, ನಮ್ಮತನವನ್ನು ಮರೆತು ಅನ್ಯರಿಗೆ ಕೆಂಪು ಹಾಸಿನ ಸ್ವಾಗತವನ್ನು ನೀಡುತ್ತಿದ್ದೇವೆ. “ಮನೆಯಲ್ಲಿನ ಜಗಳ ಬೀದಿಗೆ ಬಂತೆಂದರೆ ಮತ್ತೆಂದು ಆ ಮನೆ ಒಂದಾಗಲು ಸಾಧ್ಯವಿಲ್ಲ. ಹಾಗೆ ಒಂದು ದೇಶದಲ್ಲಿನ ಭಿನ್ನಮತ ಅನ್ಯದೇಶದಕ್ಕೆ ಅನ್ನವಾಗಲು ಸಿದ್ಧವಾಯಿತೆಂದರೆ ಆ ದೇಶವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ”. 1857ರ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು 1947 ರ ಸ್ವಾತಂತ್ರ್ಯ ದಿನಾಚರಣೆಯ ವರೆಗೂ ನಮ್ಮ ದೇಶಕ್ಕಾಗಿ ಮಡಿದವರ ಕನಸು ಒಂದೇ ಆಗಿತ್ತು. ಅದು ಭಾರತ ದೇಶ ಜಗತ್ತಿನಲ್ಲಿ ವಿಶ್ವಗುರು ಆಗಬೇಕು ಎನ್ನುವುದು. ಬುದ್ಧ, ಬಸವ, ಅಂಬೇಡ್ಕರ ಆದಿಯಾಗಿ ಎಲ್ಲರು ಬಯಸಿದ್ದು ಶಾಂತವಾದ ಭಾರತವನ್ನು. ಆದರೆ ಆ ಶಾಂತಿ ನೆಲೆಸುವ ನಿಟ್ಟಿನಲ್ಲಿ ನಾವು ಯಾರೂ ಯತ್ನಿಸುತ್ತಲೇ ಇಲ್ಲ. ಬರೀ ನಮ್ಮಲ್ಲಿನ ಸ್ವಾರ್ಥ ಬುದ್ಧಿಯನ್ನು ಧರ್ಮ ಎನ್ನುವ ಸಾಣೆಕಲ್ಲಿನ ಮೇಲೆ ಮಸೆದು ಮತ್ತಷ್ಟು ಹರಿತವಾಗಿಸಿ ಇನ್ನೋಬ್ಬರ ಮೇಲೆ ಪ್ರಹಾರ ಮಾಡುವುದಕ್ಕೆ ಬಳಕೆಯಾದರೆ ಆ ಮಹಾತ್ಮರ ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಅಂದು ಸ್ವಾಮಿ ವಿವೇಕಾನಂದರಂತಹ ಧಿಮಂತರೂ “ಆಧ್ಯಾತ್ಮಿಕತೆಯ ಅಡಿಯಲ್ಲಿ ನವಭಾರತ ನಿರ್ಮಾಣವಾದರೆ; ಇಡೀ ಜಗವೇ ಭಾರತಕ್ಕೆ ನತಮಸ್ತಕವಾಗುತ್ತದೆ” ಎನ್ನುವ ಕನಸನ್ನು ಕಂಡರು. ಕನಸು ನನಸಾಗುವ ದಾರಿಯ ಆವಿಷ್ಕಾರ ಕೇವಲ ಯುವಕರಲ್ಲಿ ಮಾತ್ರ ಸಾಧ್ಯ ಎನ್ನುವ ಸತ್ಯವನ್ನು ಊಹಿಸಿ ವಿದ್ಯತ್‌ವಾಣಿಯನ್ನು ಹೇಳಿ ಹೋದರು. ಆದರೆ ಆ ಮಾತುಗಳು ಕೇಳಿಸಿಕೊಳ್ಳುವ ಪರಿವೆಯನ್ನು ಇಂದಿನ ಯುವಶಕ್ತಿ ಕಳೆದುಕೊಂಡಿದೆ. ಶೋಕಿ ಬದುಕಿನಲ್ಲಿ ಕಳೆದು ಹೋಗುವ ಬಯಕೆಯಲ್ಲಿ ತನ್ನತನವನ್ನು ಮಾರಿಕೊಂಡಿದೆ. ಯಾರಿಗೇನಾದರೆ ನನಗೇನು? ನಾನು ಮಾತ್ರ ಚನ್ನಾಗಿದ್ದರೆ ಸಾಕು ಎನ್ನುವ ಮಟ್ಟಕ್ಕೆ ಬಂದು ತಲುಪಿಯಾಗಿದೆ. ದೇಶಕ್ಕಾಗಿ ಮಡಿದವರ ಹಾಗೂ ದೇಶ ರಕ್ಷಣೆಗಾಗಿ ಮಡಿಯುತ್ತಿರುವವರ ಕುರಿತು ಒಂದು ಸಣ್ಣ ಕಣ್ಣ ಹನಿಯೂ ಇವರ ಕಣ್ಣಿಂದ ಜಾರುತ್ತಿಲ್ಲ. ನಮಗಾಗಿ ಅವರು ಮಡಿದರಲ್ಲ ಎನ್ನುವ ಕೃತಜ್ಞತೆಯ ಒಂದು ಸಣ್ಣ ಮಾತು ಅವರ ಬಾಯಿಂದ ಹೊರಡುತ್ತಿಲ್ಲ. ನಮಗಾಗಿ ಮಡಿದವರ ಕುಟುಂಬವನ್ನು ಕಂಡು ಒಂದು ಸಣ್ಣದಾದ ಕನಿಕರವಾಗಲಿ, ನೋವಿನ ಉದ್ಘಾರವಾಗಲಿ ಇವರ ಬಾಯಿಂದ ಹೊರಡುತ್ತಿಲ್ಲ. ಗಂಟಲಿನ ಧ್ವನಿ ಬತ್ತಿದಂತೆ, ಕಣ್ಣಿದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ, ಮಾತಿದ್ದರು ಮೂಕರಂತೆ ಬದುಕುವುದನ್ನು ರೂಡಿಸಿಕೊಂಡಿದ್ದಾರೆ. ಅಂದೆನೋ ಹಾಗಾಯಿತು. ಅದಕ್ಕೆ ಘೋರಿಯಂತವರು ಆಗಮನವಾಯಿತು, ಘಜ್ನಿಯಂತವರಿಗೆ ಪ್ರೇರಣೆಯಾಗಿ, ಬ್ರಿಟೀಷರಂತವರಿಗೆ ರತ್ನಗಂಬಳಿ ಹಾಸಿದಂತಾಯಿತು. ಇಂದು ಸಹ ಅದೇ ಮುಂದುವರೆದರೆ ಹೇಗೆ? ಅಂದು ನಮಗಾಗಿ ಮಡಿದವರ ಕನಸ್ಸನ್ನು ಗಾಳಿಗೆ ತೂರಿ ಬಿಡೋಣವೇ? ಹೂಂ ಎನ್ನುವುದಾದರೆ ನಾವು ಭಾರತೀಯರೇ ಅಲ್ಲ. ಬೇಡ ಅನ್ನುವುದಾದರೆ ಆ ಕನಸುಗಳನ್ನು ಕೊಳ್ಳುವವರಾರು? ಅದನ್ನು ಪೋಶಿಸುವವರಾರು? ಅದನ್ನು ಈಡೇರಿಸುವರಾರು? ನಾನು...! ನಾನು...! ಎನ್ನುವವರು ಮಾತ್ರ ಆ ಕನಸ್ಸುಗಳನ್ನು ಕೊಳ್ಳಲು ಮನಸ್ಸು ಮಾಡಿ. ಅದರ ಬೆಲೆ ಕೇವಲ ನಿಮ್ಮ ದೇಶಾಭಿಮಾನ, ನನ್ನ ದೇಶ ನನ್ನದು ಎನ್ನುವ ಸ್ವಾಭಿಮಾನ ಮಾತ್ರ. ಇಚ್ಚೆ ಉಳ್ಳವರು ಬಿಟ್ಟುಕೊಡಬೇಡಿ. ಖರಿದಿಸುವವರು ಅದನ್ನು ಶೋಕಿಗಿಡಬೇಡಿ.
- * * * -