ಬೆಳ್ಳಂ ಬೆಳಿಗ್ಗೆ ಎಂಪಿಎಂಸಿ ಅಧಿಕಾರಿಗಳಿಗೆ ಬೆವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು
ವಿಜಯನಗರ(ಹೊಸಪೇಟೆ) 14: ಉಪ ಲೋಕಾಯುಕ್ತರಾದ ಬಿ.ವೀರ್ಪ ನೇತೃತ್ವದ ತಂಡ ಬೆಳ್ಳಂ ಬೆಳಿಗ್ಗೆ ಹೊಸಪೇಟೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳಿಗೆ ಮೈಚಳಿ ಬಿಡಿಸಿದರು.
ಪ್ರತಿ ನಿತ್ಯ ನಡೆಯುವ ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಲಭ್ಯತೆ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದನ್ನು ಕಂಡು, ನಮಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತೀಯಾ, ಉತ್ಪನ್ನಗಳ ಗುಣಮಟ್ಟ, ಕ್ರಮಬದ್ದ ವಹಿವಾಟು ಬಗ್ಗೆ ಪರೀಶೀಲನೆ ನಡೆಸುತ್ತಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿಗೆ ತರಾಟೆ ತೆಗೆದುಕೊಂಡರು. ಇದೇ ವೇಳೆ ವೀರೇಶ್ ಎಂಬಾತ ಎಪಿಎಂಸಿಯಲ್ಲಿ ರೈತರಿಂದ ಶೇ.10 ರಷ್ಟು ಕಮೀಷನ್ ಪಡೆಯುತ್ತಿದ್ದಾರೆಂದು ಆರೋಪಿಸಿದರು. ಸಂತೆಯಲ್ಲಿ ಬಟಾಣಿಗೆ ಕಲರ್ ಹಾಕಿ ಮಾರುತ್ತಿರುವುದು ಕಂಡು ಲೋಕಾಯುಕ್ತರು ಅಹಾರ ಸುರಕ್ಷತಾ ಅಧಿಕಾರಿಗೆ ಪರೀಶೀಲಿಸಲು ಸೂಚಿಸಿದರು. ಎಸ್.ಹೆಚ್.ಆರ್.ಟ್ರೇರ‌್ಸ್ನ ರಸೀತಿ ಪುಸ್ತಕವನ್ನು ಪರೀಶೀಲಿಸಿದರು. ರೈತರಿಂದ ಕಮಿಷನ್ ಸಂಗ್ರಹಿಸುವುದು ತಪ್ಪು. ಹಾಗೇನಾದರೂ ಸಂಗ್ರಹಿಸುತ್ತಿದ್ದರೇ ಕೂಡಲೇ ಕೈಬಿಡಬೇಕು ಇಲ್ಲದಿದ್ದರೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ದಲಾಲಿ ಅಂಗಡಿಗಳಿಗೆ ಹಂಚಿಕೆಯಾದ ಸಂಪೂರ್ಣ ವಿವರದೊಂದಿಗೆ ವರದಿ ನೀಡಲು ಸೂಚಿಸಿದರು. ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತ ಭವನ ಇಲ್ಲ, ರೈತರು ವಿಶ್ರಾಂತಿ ಪಡೆಯಲು ಸ್ಥಳಾವಕಾಶ ಎಲ್ಲಿದೆ? ರೈತ ಭವನ ಬಾಡಿಗೆ ನೀಡಲು ಬೈಲಾದನ್ವಯ ಅವಕಾಶ ಇದಿಯಾ? ಅವಕಾಶ ಇದ್ದಲ್ಲಿ ಆದೇಶ ಪ್ರತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಪಿಎಂಸಿ ಆಡಳಿತ ಕಚೇರಿಗೆ ತೆರಳಿ ತೂಕದ ಯಂತ್ರವನ್ನು ಪರೀಶೀಲಿಸಿದರು. ಖುದ್ದು ಉಪಲೋಕಾಯುಕ್ತರು ಯಂತ್ರದ ಮೇಲೆ ನಿಂತು ತೂಕ ಪರೀಕ್ಷಿಸಿದರು. ಆದರೆ 2 ಕೆಜಿಯಷ್ಟು ವ್ಯತ್ಯಾಸ ಕಂಡು ಬಂದಿದ್ದು, ಯಂತ್ರವನ್ನು ಸೀಜ್ ಮಾಡಿ ಪ್ರಕರಣ ದಾಖಲಿಸುವಂತೆ ತೂಕ ಮತ್ತು ಅಳತೆ ಅಧಿಕಾರಿ ಅಮೃತ್ ಚೌವ್ಹಾಣ್‌ಗೆ ವರದಿ ನೀಡಲು ಆದೇಶಿಸಿದರು. ಬಳಿಕ ಅಪೂರ್ಣ ಹಾಜರಾತಿ ಪುಸ್ತಕ, ಬೈಲಾ ನಮೂನೆ 16 ನಮೂದಾಗಿರುವುದಿಲ್ಲ. ನಮೂನೆ 24(9) ಉಲ್ಲಂಘನೆ, ಎಪಿಎಂಸಿ ಅಧಿಕಾರಿಗಳ ಪೋನ್‌ಪೇ, ಗೂಗಲ್‌ಪೇ ಪರೀಶೀಲಿಸಿದರು. ಚಲನವಲನ ಪುಸ್ತಕ ನಮೂದು ಆಗದಿರುವುದನ್ನು ಕಂಡು ಗರಂ ಆದ ಉಪಲೋಕಾಯುಕ್ತ ಬಿ.ವೀರ್ಪ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಮತ್ತು ಲೆಕ್ಕ ಪರೀಕ್ಷಕ ಕೆ.ರಾಜು ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.
ಬಳಿಕ ಹೊಸಪೇಟೆ ಸಮೀಪದ 88 ಮುದ್ಲಾಪುರ ಗ್ರಾಮದಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರೀಶೀಲಿಸಲಾಯಿತು. ಕೊಳಚೆ ಚರಂಡಿ ನೀರನ್ನು ನೇರ ಕೃಷಿ ಬಳಕೆ ಹರಿಸುತ್ತಿರುವುದನ್ನು ಗಮನಿಸಿದ ಲೋಕಾಯುಕ್ತರು ಇಂತಹ ಕಲುಷಿತ ನೀರಿನಿಂದ ಬೆಳೆದ ಬೆಳೆಯಿಂದ ಜನಸಾಮಾನ್ಯರಿಗೆ ಆಹಾರ ವಿಷಕಾರಿಯಾಗಲಿದೆ. ಸಂಸ್ಕರಣಾ ಘಟಕದಲ್ಲಿ ನೀರಿನ ಶುದ್ಧಿಕರಣ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ನದಿ ನೀರು ಮಲೀನಗೊಳ್ಳಲಿದೆ. ಪರಿಸರ ಅಧಿಕಾರಿ ಯಾವ ಪ್ರಕರಣವನ್ನು ದಾಖಲಿಸಿಲ್ಲ, ನಗರಸಭೆ ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದರು.
ನಂತರ ಹೊಸಪೇಟೆ ನಗರದಲ್ಲಿರುವ ಎಲ್‌ಎಲ್‌ಸಿ ಕಾಲುವೆ ಬಳಿ ಭೇಟಿ ನೀಡಿ ಮಹಿಳೆಯರು ಕಾಲುವೆಯಲ್ಲಿ ಬಟ್ಟೆ ತೊಳೆಯುವುದನ್ನು ಗಮನಿಸಿ, ನೀರಿನ ರಭಸಕ್ಕೆ ಮಹಿಳೆಯರಿಗೆ ಪ್ರಾಣಾಪಾಯ ಹಾಗೂ ನದಿ ನೀರು ಮಲೀನವಾಗುವುದನ್ನು ತಡೆಗಟ್ಟಲು ಬಟ್ಟೆ ತೊಳೆಯಲು ಕಾಲುವೆ ಪಕ್ಕದಲ್ಲಿ ಪ್ರತ್ಯೇಕ ಜಾಗ ಗುರುತಿಸಿ ಅಲ್ಲಿ ಪೈಪ್‌ಲೈನ್ ಹಾಗೂ ಶೆಲ್ಟರ್ ಅಳವಡಿಸಿ ವ್ಯವಸ್ಥೆ ಕಲ್ಪಿಸಬೇಕೆಂದು ನಗರಸಭೆ ಆಯುಕ್ತ ಮನೋಹರ್‌ರಿಗೆ ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೆಚ್ಚುವರಿ ಪೊಲೀಸರ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಎಂ.ಶೃತಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಾಜರಿದ್ದರು.