ಲೋಕದರ್ಶನ ವರದಿ
ಹೊಸಪೇಟೆ 28: ದೇವಸ್ಥಾನ, ಮಸೀದಿ, ಚರ್ಚ ಹಾಗೂ ಗುರುದ್ವಾರಗಳಲ್ಲಿ ನಡೆಸುವ ದಾಸೋಹಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಕಡ್ಡಾಯ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತೆ ಮಂಜುಶ್ರೀ ತಿಳಿಸಿದರು.
ನಗರದ ಶ್ರೀಕೊಟ್ಟೂರುಸ್ವಾಮಿ ಮಠದಲ್ಲಿ ಬೆಂಗಳೂರು ಆಯುಕ್ತಾಲಯ ಹಾಗೂ ಬಳ್ಳಾರಿ ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬುಧವಾರ ಹಮ್ಮಿಕೊಂಡಿದ್ದ ನಿತ್ಯ ದಾಸೋಹ ದೇವಸ್ಥಾನಗಳ ಅಧಿಕಾರಿಗಳಿಗೆ ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆಹಾರ ತಯಾರಿಕೆ ನೈರ್ಮಲ್ಯದಿಂದ ಕೂಡಿರಬೇಕು. ಪ್ರಸಾದ ತಯಾರಕರು ಮತ್ತು ದೇವಸ್ಥಾನದ ಟ್ರಸ್ಟಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಪ್ರಾಧಿಕಾರದಿಂದ ಪರವನಾಗಿ ಪಡೆದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಉಪ ಆಯುಕ್ತೆ ಡಾ.ಲತಾ ಪ್ರಮೀಳಾ ಮಾತನಾಡಿ, ಗುಣಮಟ್ಟದ ಆಹಾರ ತಯಾರಿಸುವ ಧಾಮರ್ಿಕ ಕೇಂದ್ರಗಳಿಗೆ ಪ್ರಾಧಿಕಾರದಿಂದ ಭೋಗ್ ಪ್ರಮಾಣಪತ್ರ ನೀಡಲಾಗುವುದು. ಇದು ಅಲ್ಲಿಯ ಸ್ವಚ್ಛತೆ ಮತ್ತು ಗುಣಮಟ್ಟ ಪ್ರಮಾಣೀಕರಿಸಲಿದೆ. ಎಲ್ಲಿ ಭೋಗ್ ಪ್ರಮಾಣಪತ್ರ ಇರುತ್ತದೆಯೋ ಅಲ್ಲಿ ಶುದ್ಧ ಮತ್ತು ಆರೋಗ್ಯಕರ ಪ್ರಸಾದವಿರುತ್ತದೆ ಎಂಬ ಭಾವನೆ ಜನರಲ್ಲಿ ಬರಲಿದೆ. ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ ಸಕರ್ಾರದ ನಿಯಾಮಾನುಸಾರ ಕ್ರಮವಹಿಸಲಾಗುವುದು.
ಬಳ್ಳಾರಿ, ಕೊಪ್ಪಳ, ಗದಗ, ಕಲಬುರಗಿ ಜಿಲ್ಲೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಹಾಗೂ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳಿಗೆ, ಪವರ್ ಪ್ರಸೆಂಟೇಷನ್ ಮೂಲಕ ಅಡುಗೆ ಮನೆಯ ಸ್ವಚ್ಛತೆ ಮತ್ತು ಆಹಾರ ತಯಾರಿಕೆ ಕುರಿತು ಮಾರ್ಗದರ್ಶನ ನೀಡಲಾಯಿತು. ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿಗಳು, ದೇವಸ್ಥಾನ ನಿರ್ವಹಣೆಯ ಅಧಿಕಾರಿಗಳು ಇದ್ದರು.