ಹೊಸಪೇಟೆ: ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲು ಐಎಎಸ್ ಅಶ್ವಿಜಾ ಕರೆ

ಲೋಕದರ್ಶನ ವರದಿ

ಹೊಸಪೇಟೆ 08: ಮೊಬೈಲ್ ಹಾಗೂ ತಂತ್ರಜ್ಞಾನದ ಗೀಳಿನಿಂದಾಗಿ ಮಾನವೀಯ ಸಂಬಂಧಗಳು  ಜಾಳುಜಾಳಾಗುತ್ತಿದ್ದು, ಸಾಮಾಜಿಕ ಹಾಗೂ ಮಾನವೀಯ ಕಳಕಳಿ ಬೆಳೆಸಿಕೊಳ್ಳುವುದು ಹಿಂದೆಂದಿಗಿಂತ ಅವಶ್ಯವಾಗಿದೆ ಎಂದು ಐಎಎಸ್ ಟಾಪರ್ ಕು.ಅಶ್ವಿಜಾ ಬಿ.ವಿ. ಯುವಜನತೆಗೆ ಕರೆ ನೀಡಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರದಂದು ನಡೆದ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ 'ಶುಭಾರಂಭ' ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಆಡಳಿತ ಸೇವೆಗೆ ಸಾಮಾಜಿಕ ಕಳಕಳಿ ಅವಶ್ಯ, ಸಾಮಾಜಿಕ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕಾದರೆ ಜನ-ಸಾಮಾನ್ಯರ ಜೊತೆಗಿನ ಸಂಪರ್ಕ ಅತ್ಯವಶ್ಯವಾದುದು ಹಾಗೂ ಸಮಸ್ಯೆಯ ಜಟಿಲತೆಯನ್ನು ಪರಿಹರಿಸುವಲ್ಲಿ ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮೆಟ್ರೋದಲ್ಲಿ ಬಸುರಿ ಹೆಂಗಸು ನಿಂತುಕೊಂಡು ಪ್ರಯಾಣಿಸುತ್ತಿದ್ದರೂ ಗಮನಿಸದೇ ಸೀಟು ಬಿಟ್ಟುಕೊಡದೆ ಮೊಬೈಲಿನಲ್ಲಿ ಮುಳುಗಿದ್ದ ಯುವಕರನ್ನು ತಾವು  ನೋಡಿದ್ದನ್ನು ಉದಾಹರಿಸಿದ ಅವರು ಮನುಷ್ಯ-ಮನುಷ್ಯರ ನಡುವೆ ಮಾನವೀಯ ಸಂಬಂಧ, ಸಂವೇದನೆಗಳು ಬೆಳೆಯಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ.ಡಿ.ಐ.ಟಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ್ ಮಾತನಾಡಿ "ಪೋಷಕರ ಆಸೆಯನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು" ಹೇಳಿದರು. ಪ್ರಾಚಾರ್ಯರಾದ ಡಾ.ಎಸ್.ಎಂ. ಶಶಿಧರ್ ಮಾತನಾಡಿ "ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಪರಿಣಿತಿಯೊಂದಿಗೆ ಆಡಳಿತ ಸೇವೆಯ ಅವಕಾಶ ಪಡೆದರೆ ದೇಶದ ಪ್ರಗತಿ ಪಯಣದಲ್ಲಿ ಮುಖ್ಯ ಪಾತ್ರ ವಹಿಸಬಹುದು" ಎಂದು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಏಕಾಮರೇಶ ತಾಂಡೂರ, ಡಾ.ನಿಜಲಿಂಗಪ್ಪ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ.ಕೆ.ಶರಣಬಸಮ್ಮ ಸ್ವಾಗತ ಭಾಷಣ ಮಾಡಿದರು. ಪ್ರೋ.ಜೀವಿತಾ ನಿರೂಪಿಸಿದರು, ಭುವನೇಶ್ವರಿ ಹಾಗೂ ಮೇಘಾ ಪ್ರಾರ್ಥಿಸಿದರು. ಡಾ. ಎನ್. ಪ್ರಭುದೇವ್ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.