ನವದೆಹಲಿ ಜ 9 ದೀಪಿಕಾ ಪಡುಕೋಣೆ ನಟನೆಯ 'ಛಪಕ್' ಚಿತ್ರದಲ್ಲಿ, ಆ್ಯಸಿಡ್ ಸಂತ್ರಸ್ತೆ ಪರ ಕಾನೂನು ಹೋರಾಟ ನಡೆಸಿದ ವಕೀಲೆಯ ಹೆಸರನ್ನೂ ಉಲ್ಲೇಖಿಸುವಂತೆ ದೆಹಲಿ ನ್ಯಾಯಾಲಯ ಸೂಚಿಸಿದೆ.
ವಕೀಲರಾದ ಅಪರ್ಣಾ ಭಟ್ ಎಂಬುವರು ಪಟಿಯಾಲ ಹೌಸ್ ಕೋರ್ಟ್ ಮೊರೆ ಹೋಗಿದ್ದರು. 'ಛಪಕ್' ಚಿತ್ರವನ್ನು ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನದ ಕಥೆಯನ್ನು ಆಧರಿಸಿ ನಿರ್ಮಿಸಲಾಗುತ್ತಿದೆ. ತಾವು ಲಕ್ಷ್ಮೀ ಪರ ಹಲವು ವರ್ಷಗಳ ಕಾಲ ವಾದ ಮಂಡಿಸಿದ್ದು, ಚಿತ್ರಕಥೆ ರಚಿಸುವಲ್ಲೂ ನೆರವಾಗಿದ್ದೇನೆ. ಆದರೆ, ನಿರ್ದೇಶಕರು ನೀಡಿದ ಭರವಸೆಯಂತೆ ಚಿತ್ರದಲ್ಲಿ ತಮಗೆ ನೀಡಬೇಕಾದ ಗೌರವ ನೀಡಿಲ್ಲ ಎಂದು ಆಕ್ಷೇಪಿಸಿದ್ದರು.
ತಮಗೆ ಯಾವುದೇ ಹಣದ ಅಗತ್ಯವಿಲ್ಲ. ಬದಲಿಗೆ ಚಿತ್ರದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿ ಗೌರವ ಸೂಚಿಸಬೇಕು ಎಂದು ನಿರ್ದೇಶಕರಿಗೆ ಸೂಚನೆ ನೀಡಿ ಎಂದು ಅರ್ಜಿದಾರರ ಮನವಿ ಮಾಡಿದ್ದರು. ಚಿತ್ರ ನಿರ್ದೇಶಕರು ತಮ್ಮ ನೆರವಿನ ಕುರಿತು ಹಲವು ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರಾದರೂ, ಚಿತ್ರದಲ್ಲಿ ಮಾತ್ರ ಗೌರವ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು.
2005ರಲ್ಲಿ 15 ವರ್ಷದ ಲಕ್ಷ್ಮೀ ಅಗರ್ ವಾಲ್ ಮೇಲೆ ಭಗ್ನಪ್ರೇಮಿಯೋರ್ವನು ಆ್ಯಸಿಡ್ ದಾಳಿ ನಡೆಸಿದ್ದನು. ಇದರಿಂದ ಆಕೆಯ ಮುಖ ಸಂಪೂರ್ಣ ಸುಟ್ಟು ಹೋಗಿತ್ತು. ನಂತರ ಆಕೆ ಏಳು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.
ಚೇತರಿಸಿಕೊಂಡ ನಂತರ ಆಕೆ ಆ್ಯಸಿಡ್ ದಾಳಿಯ ಸಂತ್ರಸ್ತರಿಗಾಗಿ ಕೆಲಸ ಮಾಡಲಾರಂಭಿಸಿದಳು ಮತ್ತು ಇಂತಹ ಹೀನ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸಿದ್ದಳು.
ಛಪಕ್ ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದು, ಶುಕ್ರವಾರ ತೆರೆಗೆ ಬರಲಿದೆ.