ಬೆಂಗಳೂರು, ನ.29-ಜನಪ್ರತಿನಿಧಿಗಳ ಹನಿಟ್ರ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ ಎಂಬ ವಿಷಯ ಇದೀಗ ಬಯಲಿಗೆ ಬಂದಿದೆ.
ಕಾಂಗ್ರೆಸ್ ನ ಇಬ್ಬರು ಶಾಸಕರು, ಇಬ್ಬರು ಅನರ್ಹ ಶಾಸಕರು, ಬಿಜೆಪಿ ಶಾಸಕರೂ ಹನಿಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುದು ಪೊಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಿರುತೆರೆ ನಟಿಯರನ್ನು ಬಳಸಿಕೊಂಡು 10ಕ್ಕೂ ಹೆಚ್ಚು ರಾಜಕಾರಣಿಗಳಿಗೆ ಹನಿಟ್ರ್ಯಾಪ್ ಬಲೆ ಬೀಸಲಾಗಿತ್ತು ಎಂಬುದು ಕೂಡ ಬೆಳಕಿಗೆ ಬಂದಿದ್ದು, ಈ ವಿಷಯ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.
ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗದೆ ಅಲೆದಾಡುತ್ತಿದ್ದ ನಟಿಯರನ್ನು ಆರೋಪಿ ರಘು ಗುರಿಯಾಗಿಸಿಕೊಳ್ಳುತ್ತಿದ್ದ. ಅವರಿಗೆ ಹಣದ ಆಮಿಷವೊಡ್ಡಿ ರಾಜಕಾರಣಿಗಳ ಪರಿಚಯ ಮಾಡುತ್ತಿದ್ದ. ಅವರ ಕೈಗೆ ವ್ಯಾನಿಟಿ ಬ್ಯಾಗ್ ಕೊಟ್ಟು ಅದರಲ್ಲಿ ಕ್ಯಾಮೆರಾ ಇಟ್ಟು ಆ ನಟಿಯರ ಜೊತೆಗೆ ರಾಜಕಾರಣಿಗಳು ನಡೆಸುತ್ತಿದ್ದ ರಾಸಲೀಲೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಆ ವಿಡಿಯೋಗಳನ್ನು ತೋರಿಸಿ ರಾಜಕಾರಣಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ತಮ್ಮ ಮಾನ ಉಳಿಸಿಕೊಳ್ಳಲು ರಘು ಗ್ಯಾಂಗ್ಗೆ ಕೋಟಿ-ಕೋಟಿ ರೂ. ಹಣ ಕೊಟ್ಟು ರಾಜಕಾರಣಿಗಳು ಸುಮ್ಮನಾಗುತ್ತಿದ್ದರು ಎಂಬುದು ತಿಳಿದುಬಂದಿದೆ.
ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಬಿಡುಗಡೆ ಮಾಡಬಹುದು ಎಂಬ ಆತಂಕ ಕರ್ನಾಟಕದ ರಾಜಕಾರಣಿಗಳಿಗೆ ಎದುರಾಗಿತ್ತು. ಧಾರಾವಾಹಿಗಳಲ್ಲಿ ಮೇಕಪ್ ಮಾಡುತ್ತಿದ್ದ ಪುಷ್ಪಾ ಎಂಬ ಯುವತಿಯನ್ನು ಮುಂದಿಟ್ಟುಕೊಂಡು ಆರೋಪಿ ರಘು ಕಿರುತೆರೆ ನಟಿಯರನ್ನು ಹನಿಟ್ರ್ಯಾಪ್ ಮಾಡಲು ಬಳಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಹೈದರಾಬಾದ್ ಕರ್ನಾಟಕದ ಇಬ್ಬರು ಶಾಸಕರು, ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಶಾಸಕ, ಕಾಂಗ್ರೆಸ್ ಮೇಲ್ಮನೆಯ ಓರ್ವ ಸದಸ್ಯ ಸೇರಿ ಅನೇಕ ಮಂದಿಯ ವಿಡಿಯೋಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹನಿಟ್ರ್ಯಾಪಿಂಗ್ನ ವಿಡಿಯೋಗಳನ್ನು ಆರೋಪಿಗಳು ಎಲ್ಲಿ ಇಟ್ಟಿದ್ದಾರೆ ಎನ್ನುವ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ. ಸಿಸಿಬಿ ಬಳಿಯಿರುವ ಪೆನ್ ಡ್ರೈವ್ನಲ್ಲಿ ವಿಡಿಯೋಗಳು ಲಭ್ಯವಾಗಿವೆ. ಆದರೆ, ಆ ವಿಡಿಯೋಗಳ ನಕಲಿ ಪ್ರತಿಗಳನ್ನು ಎಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವಾಗ ಬೇಕಿದ್ದರೂ ಆರೋಪಿಗಳು ಆ ವಿಡಿಯೋಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಸಿಸಿಬಿ ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ ಹೆಚ್ಚಾಗುತ್ತಿದೆ.
ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಶಾಸಕರನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ಟ್ರ್ಯಾಪ್ ಗೆ ಒಳಗಾದ ಉಳಿದ ಶಾಸಕರ ಸಹಿತ ದೂರು ನೀಡಿದರೆ ತನಿಖೆಗೆ ಅನುಕೂಲವಾಗುತ್ತದೆ ಎಂದು ಸಿಸಿಬಿ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ವಿಚಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೈಗೊಳ್ಳಲಾಗುತ್ತದೆ. ಆದರೆ, ತಮ್ಮ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ.
ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಪೆನ್ಡ್ರೈವ್, ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. 6 ಮೊಬೈಲ್ಗಳಲ್ಲಿ ಹನಿ ಟ್ರ್ಯಾಪ್ಗೆ ಒಳಗಾದ ಶಾಸಕರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹನಿಟ್ರ್ಯಾಪಿಂಗ್ಗೆ ದಾಳವಾಗಿದ್ದ ಯುವತಿಯರ ಜೊತೆ ಶಾಸಕರು ಮಾತನಾಡಿದ ಆಡಿಯೋಗಳು ಕೂಡ ಲಭ್ಯವಾಗಿವೆ. 200ಕ್ಕೂ ಹೆಚ್ಚು ಕಿರುತೆರೆ ನಟಿಯರನ್ನು ಬಳಸಿಕೊಂಡು ರಘು ರಾಜಕಾರಣಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹನಿಟ್ರ್ಯಾಪಿಂಗ್ ದಂಧೆಯನ್ನು ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಶಾಸಕರು ಧೈರ್ಯವಾಗಿ ಮುಂದೆ ಬಂದು ದೂರು ಕೊಟ್ಟರೆ ಅವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಿಸಿಬಿ ಪೊಲೀಸರು ಹನಿಟ್ರ್ಯಾಪಿಂಗ್ಗೆ ಒಳಗಾದ ಶಾಸಕರಿಗೆ ಭರವಸೆ ನೀಡಿದ್ದಾರೆ. ಆದರೂ ಯಾರೂ ಬಹಿರಂಗವಾಗಿ ಈ ವಿಚಾರವನ್ನು ಒಪ್ಪಿಕೊಂಡು ದೂರು ನೀಡಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.