ಪ್ರಾಮಾಣಿಕತೆ ಮೆರೆದ ಆಟೋಚಾಲಕ

ಬೆಳಗಾವಿ: ಕಾರ್ಯ ನಿಮಿತ್ತ ಪ್ರವಾಸದಲ್ಲಿ ಬಸ್ಸು ಹಿಡಿದು ಬಸ್ಸು ಹತ್ತಿ ಇಳಿದು  ಆಟೋ ಹತ್ತಿ ಮನೆ ತಲುಪುವಷ್ಟರಲ್ಲಿ ಹೈರಾನಾಗಿದ್ದಾಗ ಕೈಯಲ್ಲಿದ್ದ ಬ್ಯಾಗು ಕಳೆದುಕೊಂಡರೆ ಪರಿಸ್ಥಿತಿ ಶೋಚನೀಯವೇ. 

ಅದೇ ಬ್ಯಾಗು ನಮ್ಮ ಬಳಿ ಸುರಕ್ಷಿತವಾಗಿ ವಾಪಸ್ಸಾದಾಗ ಆ ಶೋಚನೀಯ ಪರಿಸ್ಥಿತಿಯಲ್ಲಿ ಆಗುವ ಅನುಭವವೇ ಬೇರೆ. ಇಂಥದೊಂದು ಘಟನೆಗೆ ಬೆಳಗಾವಿಯ ಬಸ್ಸ್ಟ್ಯಾಂಡ್ ಆಟೋ ಚಾಲಕ ಸಾಕ್ಷಿಯಾಗಿದ್ದಾನೆ. 

ಕಾರ್ಯ ನಿಮಿತ್ತ ಪತ್ರಕರ್ತರೊಬ್ಬರು ಬೆಳಗಾವಿಗೆ ಬಂದಾಗ ಆಟೋ ಹತ್ತಿ ಮನೆ ತಲುಪಿದ್ದಾರೆ. ಆದರೆ ಅವರ ಬಳಿ ಇದ್ದ ಸಣ್ಣ ಕೈಚೀಲವೊಂದು ಆಟೋದಲ್ಲಿ ಬಿದ್ದು ಬಿಟ್ಟಿತ್ತು. ಮರು ದಿನ ಎಲ್ಲಿ ಹುಡುಕಿದರೂ ಏನು ನೆನಪುಬಾರದೆ ಕೈಚೀಲ ಕೈಬಿಟ್ಟಂತಾಗಿತ್ತು ಎಂಬ ದುಃಖದಲ್ಲಿ ದಾಖಲೆಗಳನ್ನು ಕಳೆದುಕೊಂಡು ಮತ್ತೇನು ಮಾಡುವುದೆಂಬ ಚಿಂತೆಯಲ್ಲಿ ಇದ್ದರು. ಅದೇ ಹೊತ್ತಿನಲ್ಲಿ ನಿನ್ನೆ ರಾತ್ರಿ ಮನೆಯವರೆಗೂ ಬಂದಿದ್ದ ಆಟೋ (ಆಟೋ ನಂಬರ 7888 ಬಸ್ನಿಲ್ದಾಣದ ಸ್ಟ್ಯಾಂಡ್) ಚಾಲಕ ಮೊಹಮ್ಮೊದ್ ರಸೂಲ್ ಮೊಬೈಲ್ಗೆ ಪೋನ್ ಮಾಡಿ ನಿಮ್ಮ ಕಳೆದು ಹೋದ ನಿಮ್ಮ ಕೈಚೀಲ ನನ್ನ ಕೈಯಲ್ಲಿದೆ ಎಂದ. ಅದನ್ನು ನಿಮ್ಮ ಕೈಯಲ್ಲಿ ಕೊಡುತ್ತೇನೆ ಎಲ್ಲಿದ್ದೀರಿ ಎಂದ. ಆಗ ಆ ಪತ್ರಕರ್ತರಿಗೆ ದುಃಖದಲ್ಲಿಯೂ ಆದಂತ ಆಶ್ಚರ್ಯ ಮತ್ತು ಸಂತೋಷ ಹೇಳತೀರದಾಗಿತ್ತು. 

ಮುಂದಿನ ಕೆಲವೇ ನಿಮಿಷಗಳಲ್ಲಿ ಸ್ಥಳ ತಲುಪಿ ಆ ಕೈಚೀಲವನ್ನು ಸುರಕ್ಷಿತವಾಗಿ ನೀಡಿ ಇದರಲ್ಲಿ ಎಲ್ಲ ಸಾಮಾನುಗಳು ಹಾಗೇ ಇವೆ ಎಂದು ಭರವಸೆಯನ್ನೂ ನೀಡಿದ. ಅದಕ್ಕಿಂತ ಹೆಚ್ಚಾಗಿ ಕೈಚೀಲದಲ್ಲಿದ್ದ ದಾಖಲೆಗಳು ಮತ್ತು ಆಧಾರ ಪತ್ರದ ಆಧಾರದಲ್ಲಿ ಮೊಬೈಲ್ ನಂಬರ ಗುರುತಿಸಿ ಫೋನ್ ಮಾಡಿ, ಸ್ಥಳ ತಲುಪಿದ್ದೇನೆ ಎಂದು ವಿವರಿಸಿದ. 

ಇದಕ್ಕಾಗಿ ಹಣ ಕೊಟ್ಟರೂ ಪಡೆದುಕೊಳ್ಳದೇ ಕೇವಲ ಅಲ್ಲಿಯಿಂದ ಬಂದಂತಹ ಪ್ರಯಾಣ ದರ ಮಾತ್ರ ಪಡೆದು ತನ್ನ ಪ್ರಾಮಾಣಿಕತೆ ಮೆರೆದಿದ್ದು ಆಶ್ಚರ್ಯದೊಂದಿಗೆ ಕಣ್ಣೀರು ಕೂಡ ತರಿಸಿತ್ತು. 

ಆಟೋ ಚಾಲಕರೆಂದರೆ ಮೂಗು ಮುರಿಯುವ, ಬೈಯುವ, ತಲೆ ಹರಟೆ, ತಾಪತ್ರಯ ಎಂದು ಗೊಣಗುವವರಿಗೆ ಅನೇಕರು ಎಲ್ಲರಂತಲ್ಲ ಎಂಬ ಮಾದರಿಗೆ ಮಹಮ್ಮೊದ್ ರಸೂಲ್ ಮತ್ತೊಮ್ಮೆ ಪ್ರಾಮಾಣಿಕತೆಗೆ ಸಾಮಾಜಿಕ ಜೀವನದಲ್ಲಿ ಸಾಕ್ಷಿಯಾಗಿ ನಿಲ್ಲುತ್ತಾನೆ.  ಇದನ್ನು ಕಂಡು ಸಾರ್ವಜನಿಕರು ಕರ್ತವ್ಯ ಪ್ರಜ್ಞೆಯನ್ನು ಪ್ರಶಂಸಿಸಿದರು. ಅಂತಹ ಪ್ರಾಮಾಣಿಕರು ಸಮಾಜದಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಲೋಕದರ್ಶನ ಹಾರೈಸುತ್ತದೆ.