ಆರೋಗ್ಯ ಸೇವೆಯಲ್ಲಿ ಪ್ರಾಮಾಣಿಕತೆ, ಕಳಕಳಿ ಬಹು ಮುಖ್ಯ: ಶಿವಾನಂದ ಗುರೂಜಿ
ಬೆಳಗಾವಿ 23: ಪೂರ್ವಜನ್ಮದ ಪುಣ್ಯವಿದ್ದವರಿಗೆ ಮಾತ್ರ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿರುತ್ತದೆ. ಅನೇಕ ಜನ ಹಲವಾರು ರೋಗಗಳಿಂದ ಬಳಲುತ್ತಾ ಜೀವನದಲ್ಲಿ ತೊಂದರೆ ಅನುಭವಿಸುತ್ತಿರುವವರು ಬಡ ಜನರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಈಗಿನ ದಿನಗಳಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಆರೋಗ್ಯ ಸೇವೆ ಅತ್ಯಂತ ದುಬಾರಿಯಾಗಿದ್ದು ಸರಕಾರಿ ಆಸ್ಪತ್ರೆಗೆ ಬರುವ ಬಡವ ಬಲ್ಲಿದ ಜನರಿಗೆ ಆರೋಗ್ಯ ಇಲಾಖೆಯವರು ಪ್ರಾಮಾಣಿಕತೆಯಿಂದ ಕಳಕಳಿಯನ್ನಿಟ್ಟುಕೊಂಡು ಸೇವೆ ನೀಡಿದಾಗ ಮಾತ್ರ ನಮ್ಮ ಸಮಾಜ ಸಂತೋಷದಿಂದ ಇರಲು ಸಾಧ್ಯವೆಂದು ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶಿವಾನಂದ ಗುರೂಜಿ ಆರ್ಶಿವಚನ ನೀಡುತ್ತಾ ಅಭಿಪ್ರಾಯಪಟ್ಟರು.
ನಿಲಜಿಯ ಅಲೌಕಿಕ ಧ್ಯಾನ ಮಂದಿರದಲ್ಲಿ ಯುಕ್ತಿ ಪೌಂಡೇಶನ್, ಆಶ್ರಯ ಪೌಂಡೇಶನ್ ಮತ್ತು ಅಲೌಕಿಕ ಧ್ಯಾನ ಮಂದಿರ ನಿಲಜಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಸಾಪ ಖಾನಾಪೂರ ತಾಲೂಕಾ ಗೌರವಕಾರ‌್ಯದರ್ಶಿ ಕಿರಣ ಸಾವಂತನವರ ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಆರೋಗ್ಯ ಮತ್ತು ಕು.ಕ ಇಲಾಖೆ ಬೆಂಗಳೂರು ನಿರ್ದೇಶನಾಲಯದ ಕಛೇರಿ ಅಧೀಕ್ಷಕ ರಮೇಶ ಪಿ.ಎಂ. ರವರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ರಾಜ್ಯಪರಿಷತ್ ಸದಸ್ಯರಾಗಿ ಬಹುಮತದಿಂದ ಜಯಗಳಿಸಿದ ಹಿನ್ನಲೆಯಲ್ಲಿ ಗೌರವ ಸನ್ಮಾನ ಮತ್ತು ಗುರುಕುಲ ವಿದ್ಯಾರ್ಥಿಗಳು ಆಶ್ರಯ ಪೌಂಡೇಶನ್ ಬೆಳಗಾವಿಯ ವಿಶೇಷ ಮಕ್ಕಳ ಜೊತೆಗೂಡಿ ಗೋವು ಸೇವೆಯ ಕಾರ‌್ಯಕ್ರಮದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕ.ರಾ.ಸ.ನೌ ಸಂಘದ ರಾಜ್ಯಪರಿಷತ್ ಸದಸ್ಯ ರಮೇಶ ಪಿ.ಎಂ. ನೌಕರ ಸಂಘದ ಮುಖಾಂತರ ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ನಿರಂತರವಾಗಿ ಅನ್ಯಾಯದ ವಿರುದ್ಧ ಹೋರಾಟದೊಂದಿಗೆ ಸಾರ್ವಜನಿಕ ಸೇವೆಗೂ ಹೆಚ್ಚಿನ ಮಹತ್ವ ನೀಡುವುದಾಗಿ ಹೇಳಿದರು.
ಆಶ್ರಯ ಪೌಂಡೇಶನ್ ಬೆಳಗಾವಿ ಅಧ್ಯಕ್ಷೆ ನಾಗರತ್ನಾ ರಾಮಗೌಡ ರವರನ್ನೂ ಅವರ ಸಾಮಾಜಿಕ ಸೇವೆಯನ್ನು ಗಣನೆಗೆ ತೆಗೆದುಕೊಂಡು ಸನ್ಮಾನಿಸಲಾಯಿತು.
ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಹೆಚ್.ಐ.ವಿ ಪೀಡಿತ 18 ವರ್ಷ ಮೆಲ್ಪಟ್ಟ ಯುವತಿಯರನ್ನು ಆಶ್ರಯ ಪೌಂಢೇಶನ್ ವತಿಯಿಂದ ಶಿಕ್ಷಣ ವಸತಿಯೊಂದಿಗೆ ಸಂಪೂರ್ಣ ಜವಾವ್ದಾರಿಯನ್ನು ವಹಿಸಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ. ಈ ಕಾರ‌್ಯಕ್ಕೆ ಸಾರ್ವಜನಿಕರ ಸಹಾಯ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಸವದತ್ತಿ ತಾಲೂಕಿನ ನಿರ್ದೇಶಕರುಗಳಾದ ಸುಭಾಸ ಹುಜರತ್ತಿ, ಶಶಿಧರ ಉಪ್ಪೀನ, ಹನಮಂತ ಪಚ್ಚಿನವರ, ಮಂಜುನಾಥ ಜಡಗನ್ನವರ, ಆರೋಗ್ಯ ಇಲಾಖೆಯ ನಿರ್ದೇಶನಾಲಯದ ನಂದೀಶಕುಮಾರ, ಸುಮಂತಕುಮಾರ, ರಮೇಶ, ನಾಗೇಂದ್ರ, ಇನ್ನೀತರರು ಉಪಸ್ಥಿತರಿದ್ದರು.
ಮೊದಲಿಗೆ ಕಿರಣ ಸಾವಂತನವರ ಸ್ವಾಗತಿಸಿದರು. ಎಸ್.ಬಿ.ಮೇಳೆದ ವಂದಿಸಿದರು. ಆಕಾಶ ಥಬಾಜ ನಿರೂಪಿಸಿದರು.