ಸಾಮಾಜಿಕ ಪಿಡುಗು ಹೋಗಲಾಡಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು

ಲೋಕದರ್ಶನ ವರದಿ

ಬೈಲಹೊಂಗಲ 11: 'ಯುವಕರು, ಮಕ್ಕಳು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು' ಎಂದು ನೇಗಿನಹಾಳ ಗುರು ಮಡಿವಾಳೇಶ್ವರಮಠದ ಬಸವಸಿದ್ಧಲಿಂಗ ಸ್ವಾಮೀಜಿ ಹೇಳಿದರು.

     ತಾಲ್ಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರಮಠದಲ್ಲಿ ಬಸವ ಕೇಂದ್ರ ವತಿಯಿಂದ ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಸ್ಮರಣೆ ಅಂಗವಾಗಿ ನಡೆದ ವಚನ ತತ್ವಾನುಭವ, ಚನ್ನಬಸವೇಶ್ವರ ವಚನ ವಿಚಾರಧಾರೆ, ಚಿಂತನೆ ಕುರಿತ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, 'ಶರಣರ ಜೀವನ, ವಚನಗಳು ಸಮಾಜದ ಪರಿವರ್ತನೆಗೆ ಸಹಕಾರಿಯಾಗಿವೆ. ವಚನ ಸಾಹಿತ್ಯದ ಪಿತಾಮಹ ಎನಿಸಿಕೊಂಡಿರುವ ಚನ್ನಬಸವೇಶ್ವರರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಚನಗಳ ಸಾರವನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಜೀವನ ಸಾಗಿಸಬೇಕು. ದೇಶಕ್ಕೆ ಅನ್ನ ನೀಡುವ ರೈತ, ಗಡಿ ಕಾಯುವ ಯೋಧರನ್ನು ನಿತ್ಯ ಸ್ಮರಣೆ ಮಾಡಿ ಗೌರವ ಸ್ಥಾನದಲ್ಲಿ ಕಾಣಬೇಕು' ಎಂದರು. 

     ಶಿಕ್ಷಕ ಮಂಜುನಾಥ ಮಡಿವಾಳರ, ಬಸವರಾಜ ಹುಬ್ಬಳ್ಳಿ ಚನ್ನಬಸವೇಶ್ವರ ವಿಚಾರಧಾರೆ, ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು.  ಇದೇ ವೆಳೆ ಹೊಸದಾಗಿ ಸೈನ್ಯ ಸೇರಿದ ಯುವಕರಾದ ಗಂಗಾಧರ ಬೆಳಗಾವಿ, ಬಸವರಾಜ ಆಲದಕಟ್ಟಿ, ಆಶೀಂ ಕಿಲಾರಿ, ರವಿ ಚನ್ನಪ್ಪಗೌಡರ, ಬಸವರಾಜ ಮೆಳವಂಕಿ, ನಿಂಗಪ್ಪ ತಪರಿ ಅವರನ್ನು ಸತ್ಕರಿಸಲಾಯಿತು. ಗ್ರಾಮದ ಗುರು, ಹಿರಿಯರು, ಬಸವ ಸಂಘಟನೆ, ಬಸವ ಕೇಂದ್ರ ಸದಸ್ಯರು ಭಾಗವಹಿಸಿದ್ದರು. ಸಚಿನ ಪಾಟೀಲ ನಿರೂಪಿಸಿದರು. ಶ್ರೀಶೈಲ ತೋರಣಗಟ್ಟಿ ವಂದಿಸಿದರು.