ಬಿ.ಎಲ್‌.ಡಿ.ಇ ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ; ಸುನೀಲಗೌಡ ಪಾಟೀಲ

Honest effort for the progress of BLDE; Sunil Gowda Patil

ಬಿ.ಎಲ್‌.ಡಿ.ಇ ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ; ಸುನೀಲಗೌಡ ಪಾಟೀಲ 

ವಿಜಯಪುರ 15: ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರ ಆಶಯದಂತೆ ಬಿ.ಎಲ್‌.ಡಿ.ಇ ಸಂಸ್ಥೆಯನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಮತ್ತು ವಿಶ್ವಾಸದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. 

ಇಂದು ಶನಿವಾರ ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾತನಾಡಿದರು.  

ನಾನು ಬಾಲ್ಯದಿಂದಲೇ ಸಂಸ್ಥೆಯ ಏಳಿಗೆಯನ್ನು ಗಮನಿಸುತ್ತ ಬಂದಿದ್ದೇನೆ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರಿಂದ ಪ್ರಾರಂಭವಾದ ಸಂಸ್ಥೆಯನ್ನು ಬಂಥನಾಳ ಶ್ರೀಗಳು ಮತ್ತು ನಂತರ ದಿ. ಬಿ. ಎಂ. ಪಾಟೀಲರು, ಎಂ. ಬಿ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ. ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರವಾಗಿದ್ದ ಅಂದಿನ ದಿನಗಳಲ್ಲಿ ಬಿ. ಎಂ. ಪಾಟೀಲರು ತಮ್ಮ ಆಸ್ತಿಯನ್ನು ಒತ್ತೆಯಿಟ್ಟು ಸಾಲ ಪಡೆದು ಸಂಸ್ಥೆ ಮತ್ತು ಸಿಬ್ಬಂದಿಯ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಇಲ್ಲಿಯೇ ದೊರೆಯಲು ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ನಾನಾ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ. ನಾನು ಕೂಡ ಸಂಸ್ಥೆಯ ಪ್ರಾತಃ ಸ್ಮರಣೀಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಅವರು ಹೇಳಿದರು. 

ಸಂಸ್ಥೆಯ ವತಿಯಿಂದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ಬಿ.ಎಸ್‌.ಇ ಮತ್ತು ಐ.ಸಿ.ಎಸ್‌.ಇ ಪ್ರಾರಂಭಿಸಲಾಗಿದ್ದು, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಲೆನ್ ಕರಿಯರ್ ಅಕಾಡೆಮಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಷ್ಟದಲ್ಲಿದ್ದ ಎ.ವಿ.ಎಸ್ ಆಯುರ್ವೇದ ಕಾಲೇಜನ್ನು ಬಿ.ಎಲ್‌.ಡಿ.ಇ ಗೆ ಸೇರಿಸಿಕೊಳ್ಳಲಾಗಿದ್ದು, 60ಕ್ಕೆ ಸಿಮೀತವಾಗಿದ್ದ ಪ್ರವೇಶಾತಿಯನ್ನು 100ಕ್ಕೆ ಹೆಚ್ಚಿಸಿ, ಸ್ನಾತಕೋತ್ತರ ಮತ್ತು ಪಿ.ಎಚ್‌.ಡಿ ಮಾಡಲು ಅನುಮತಿ ಪಡೆಯಲಾಗಿದೆ. ಇದರಿಂದಾಗಿ ನಮ್ಮ ಕಾಲೇಜು ರಾಜ್ಯದ ಟಾಪ್‌- 10 ಕಾಲೇಜುಗಳಲ್ಲಿ ಒಂದು ಎಂದು ಹೆಸರು ಮಾಡಿ ಪುನಶ್ಚೇತನಗೊಳಿಸಲಾಗಿದೆ. ಆಯುರ್ವೇದ ಕಾಲೇಜಿನ ಆವರಣದಲ್ಲಿ ನವ್ಯೋದ್ಯಮಗಳಿಗಾಗಿ ಸ್ಟಾರ್ಟಪ್ ಕೇಂದ್ರ ಪ್ರಾರಂಭಿಸಲಾಗುವುದು. ಇದರಿಂದ ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಉದ್ಯಮ ಪ್ರಾರಂಭಿಸಲು ಅನುಕೂಲ ಮಾಡುವ ಮೂಲಕ ನಾವಿಣ್ಯತೆಗೆ ವೇದಿಕೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಸಂಸ್ಥೆಯ ಉಪಾಧ್ಯಕ್ಷ ಜಿ. ಕೆ. ಪಾಟೀಲ ಮಾತನಾಡಿ, ಸುನೀಲಗೌಡರು ಸಂಸ್ಥೆಯ ಘನತೆ ಮತ್ತು ಕೀರ್ತಿಯನ್ನು ಹೆಚ್ಚಿಸಿ ಎತ್ತರಕ್ಕೆ ಬೆಳಸುವ ವಿಶ್ವಾಸವಿದೆ ಎಂದು ಹೇಳಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಸುನೀಲಗೌಡ ಪಾಟೀಲರು ಎಲ್ಲರೊದಿಗೆ ಬೆರತು ಯಶಸ್ವಿ ಉದ್ಯಮೆದಾರರು ಮಾತ್ರವಲ್ಲ ಎರಡನೇ ಬಾರಿಗೆ ವಿಧಾನ ಪರಿಷತ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಸವಾಲುಗಳನ್ನು ಸಮರ್ಥವಾಗಿ ಮುನ್ನಡೆಸುವ ವ್ಯಕ್ತಿತ್ವ ಹೊಂದಿದ್ದಾರೆ. ಸಂಸ್ಥೆಯ ಪ್ರತಿಯೊಬ್ಬರು ಅವರ ಜೊತೆಗೆ ನಿಂತು ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಹೇಳಿದರು. 

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಶೋಕ ಜಿ. ವಾರದ, ಕುಮಾರ ದೇಸಾಯಿ, ಅಮಗೊಂಡ ಪಾಟೀಲ, ಕಲ್ಲನಗೌಡ ಪಾಟೀಲ, ಸಂಗನಬಸಪ್ಪ ಸಜ್ಜನ, ಡಾ. ಅನಿಲಕುಮಾರ ಪಾಟೀಲ(ಲಿಂಗದಳ್ಳಿ), ಬಾಪುಗೌಡ ಪಾಟೀಲ(ಶೇಗುಣಸಿ), ಸಿದ್ದರಾಮಯ್ಯ ಮಠ, ಮಹೇಶ ಪಾಟೀಲ, ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಸಮಕುಲಾಧಿಪತಿ ವೈ. ಎಂ. ಜಯರಾಜ, ಕುಲಪತಿ ಡಾ. ಆರ್‌. ಎಸ್‌. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವ್ಯದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನೂಟಗಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ. ಬಿ. ಆರ್‌. ಪಾಟೀಲ, ಐ ಎಸ್‌. ಕಾಳಪ್ಪನವರ, ಅರುಣಕುಮಾರ ಶಹಾ, ದೈಹಿಕ ನಿರ್ದೇಶಕ ಎಸ್‌. ಎಸ್‌. ಕೋರಿ, ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಕೃಷ್ಣ ಕೋಲ್ಹಾರಕುಲಕರ್ಣಿ, ನಿರ್ದೇಶಕ ಎಂ. ಎಸ್‌. ಮದಬಾವಿ ಆಡಳಿತ ಮಂಡಳಿ ಮಾಜಿ ಸದಸ್ಯ ಬಿ. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.  

ಡೀಮ್ಡ್‌ ವಿವಿ ರಜಿಸ್ಟ್ರಾರ್ ಡಾ. ಆರ್‌. ವಿ. ಕುಲಕರ್ಣಿ ನಿರೂಪಿಸಿದರು. ಆಡಳಿತಾಧಿಕಾರಿ ವಿಲಾಸ ಬಗಲಿಪಾಟೀಲ ವಂದಿಸಿದರು.