ಕೊರೋನಾ ವೈರಸ್ ನಿಯಂತ್ರಣಕ್ಕೆ ಮನೆಯಲ್ಲಿ ತಯಾರಿಸಿದ ಮಾಸ್ಕ್ ಗಳು ಪರಿಣಾಮಕಾರಿ: ತಜ್ಞರ ಅಭಿಮತ

ನವದೆಹಲಿ, ಏ 4, ಕೊರೋನಾ ವೈರಾಣು ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್  ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಿಂದ ಮಾಸ್ಕ್ ಗಳ ಬೃಹತ್ ಉತ್ಪಾದನೆ ಆರಂಭಿಸಲು ತೀರ್ಮಾನಿಸಲಾಗಿದೆ. ಅಂದಾಜು 1.32 ಕೋಟಿ ಮಾಸ್ಕ್ ಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸ್ವಸಹಾಯ ಸಂಘಗಳ ನೆರವು ಪಡೆಯಲಾಗುತ್ತಿದೆ. ೨೪ ರಾಜ್ಯಗಳ ಸ್ವಸಹಾಯ ಗುಂಪುಗಳು ಈ ಬೃಹತ್ ಪ್ರಕ್ರಿಯೆಗೆ ಕೈಜೋಡಿಸಲಿವೆ. ಮನೆಗಳಲ್ಲಿ ಮಾಸ್ಕ್ ಗಳನ್ನು ಸಿದ್ಧಪಡಿಸುವ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಪ್ರಧಾನ ವೈದ್ಯಕೀಯ ಸಲಹೆಗಾರರ ಸೂಚನೆಯಂತೆ ನಿಯಮಾವಳಿಯನ್ನು ಬಿಡುಗಡೆ ಮಾಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ವೈಯಕ್ತಿಕ ಶುಚಿತ್ವ ಮಹತ್ವದ ಪಾತ್ರ ವಹಿಸಲಿದ್ದು, ಇದಕ್ಕಾಗಿ ಮನೆಗಳಲ್ಲಿ ತಯಾರಿಸುವ ಮುಖಗವಸು ತಯಾರಿಸಲು ಒತ್ತು ನೀಡಲಾಗಿದೆ. ಶುಭ್ರ ಬಟ್ಟೆಯಿಂದ ಮನೆಯಲ್ಲೇ ತಯಾರಿಸುವ ಮುಖಗವಸು ಸೋಂಕು ತಡೆಯಬಲ್ಲದು. ಜತೆಗೆ ಇದನ್ನು ಮರು ಬಳಕೆ ಮಾಡಬಹುದಾಗಿದೆ ಎಂದು ಹೇಳಿದೆ.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಉಸಿರಾಟದ ತೊಂದರೆ ಇರುವವರು ಮನೆಯಲ್ಲೇ ತಯಾರಿಸಿದ ಮುಖಗವಸು ಧರಿಸಬೇಕು. ಅದರಲ್ಲೂ ಪ್ರಮುಖವಾಗಿ ಮನೆಯಿಂದ ಹೊರಗಡೆ ತೆರಳುವಾಗ ಮಾಸ್ಕ್ ಧರಿಸಿದರೆ ಸಮುದಾಯದ ಆರೋಗ್ಯ ರಕ್ಷಣೆಗೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಸಲಹೆ ಮಾಡಿದೆ. ಪ್ರತಿಯೊಬ್ಬರು ಎರಡು ಜೊತೆ ಮಾಸ್ಕ್ ಗಳನ್ನು ಹೊಂದಿರಬೇಕು. ಒಂದನ್ನು ಬಳಸಿದ ನಂತರ ಮತ್ತೊಂದನ್ನು ಒಗೆದು ಮರು ಬಳಕೆ ಮಾಡಬೇಕು ಎಂದು ಹೇಳಿದೆ.  ಬಹುತೇಕ ರಾಷ್ಟ್ರಗಳು ಮನೆಯಲ್ಲಿ ತಯಾರಿಸುವ ಮುಖಗವಸು ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಈ ಸಂಬಂಧ ಸಲಹೆ ಮಾಡಿದೆ.