ಆರೋಗ್ಯವೇ ಮಹಾಭಾಗ್ಯ: ಮೇಯರ್ ಮುಲ್ಲಂಗಿ ನಂದೀಶ್

ಆರೋಗ್ಯವೇ ಮಹಾಭಾಗ್ಯ: ಮೇಯರ್ ಮುಲ್ಲಂಗಿ ನಂದೀಶ್ Home health project launched in Bellary

ಬಳ್ಳಾರಿಯಲ್ಲಿ ಗೃಹ ಆರೋಗ್ಯ ಯೋಜನೆಗೆ ಚಾಲನೆ 

ಬಳ್ಳಾರಿ  15: ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹಳ ಮಹತ್ವದ್ದಾಗಿದ್ದು, ಎಷ್ಟೇ ಶ್ರೀಮಂತಿಕೆ ಇದ್ದರೂ ಆರೋಗ್ಯ ಇಲ್ಲವಾದಲ್ಲಿ ಅವನು ಬಡವ, ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೋಶ ಬಳ್ಳಾರಿ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ “ಗೃಹ ಆರೋಗ್ಯ ಯೋಜನೆಯ ಕಾರ್ಯಗಾರ ಮತ್ತು ಜಿಲ್ಲೆಯಾದ್ಯಂತ ಗೃಹ ಆರೋಗ್ಯ ಯೋಜನೆಯ ವಿಸ್ತರಣೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದ್ದು, ಸರ್ಕಾರವು ಗೃಹ ಆರೋಗ್ಯ ಯೋಜನೆ ಜಾರಿ ಮಾಡಿರುವುದು ಬಡವರ್ಗದ ಜನರಿಗೆ ಬಹಳ ಉಪಯುಕ್ತವಾಗಿದೆ ಎಂದರು. 

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುವಂತೆ ಮಾಡಲು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಹಂತ-ಹಂತವಾಗಿ ಜಾರಿಗೊಳಿಸಿ ಬೆಂಬಲ ನೀಡಲಾಗುವುದು ಎಂದು ಹೇಳಿದರು. 

ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಸರ್ಕಾರವು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮನೆ-ಮನೆಗೆ ಆರೋಗ್ಯ ತಪಾಸಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಯಾಗಿದೆ. ಗೃಹ ಆರೋಗ್ಯ ಯೋಜನೆಯನ್ನು ಮೊದಲು ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಾರಂಭಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು. 14 ರೋಗಗಳನ್ನು ಅಸಾಂಕ್ರಾಮಿಕ ರೋಗಗಳೆಂದು ಗುರುತಿಸಲಾಗಿದ್ದು, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈಗಿನ ಕಾಲದಲ್ಲಿ ಯುವಜನತೆಯು ಹೆಚ್ಚಾಗಿ ಹೃದಯಾಘತಕ್ಕೆ ಒಳಗಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳು ಸೇವಿಸುವ ಆಹಾರ ಮತ್ತು ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಯಲ್ಲಾ ರಮೇಶ ಬಾಬು ಅವರು ಮಾತನಾಡಿ, ಗೃಹ ಆರೋಗ್ಯ ಯೋಜನೆ ಜಿಲ್ಲೆಯಾದ್ಯಂತ ವಿಸ್ತರಣೆಯಾಗುತ್ತಿದ್ದು, ಈ ಯೋಜನೆಯಡಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ. ಖಾಸಗಿ ಆರೋಗ್ಯ ವಯಲದಲ್ಲಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ಅಸಾಂಕ್ರಾಮಿಕ ರೋಗಗಳನ್ನು ಮುಂಚಿತವಾಗಿಯೇ ತಡೆಗಟ್ಟುವುದು ಮುಖ್ಯ. ಹೀಗಾಗಿ ಜವಾಬ್ದಾರಿಯುತವಾಗಿ ಆರೋಗ್ಯ ಇಲಾಖೆಯಿಂದ ಅಸಾಂಕ್ರಾಮಿಕ ರೋಗಗಳನ್ನ ತಡೆಗಟ್ಟುವತ್ತ “ಗೃಹ ಆರೋಗ್ಯ ಯೋಜನೆ”ಯನ್ನ ಜಿಲ್ಲೆಯಾದ್ಯಂತ ವಿಸ್ತರಿಸಲಾಗುತ್ತಿದೆ. ಎಲ್ಲ ಮನೆಗಳಲ್ಲಿ 30 ವರ್ಷ ಮೇಲ್ಪಟ್ಟವರನ್ನ ತಪಾಸಣೆಗೆ ಒಳಪಡಿಸಿ, ಸೂಕ್ತ ಓಷಧಗಳನ್ನು ಅವರ ಬಳಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು. 

ಯೋಜನೆಯಲ್ಲಿ 30 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಉಚಿತವಾಗಿ ಪ್ರಮುಖ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ ಮತ್ತು ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆಯನ್ನು ನಡೆಸಲಾಗುವುದು. ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣಾ ಕಾರ್ಯಕ್ಕೆ ನೆರವಾಗುವರು. ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಓಷಧಿಗಳನ್ನ ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ ಎಂದರು. 

ಇದೇ ವೇಳೆ ಗಣ್ಯರು “ಆಶಾ ಕೈಪಿಡಿ” ಪುಸ್ತಕವನ್ನು ಅನಾವರಣಗೊಳಿಸಿದರು. 

*14 ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಮತ್ತು ಓಷಧ ವಿತರಣೆ:* 

ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬೆಟಿಕ್ ಫೂಟ್ ಮತ್ತು ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಅಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತಹೀನತೆಯ (19-29 ವರ್ಷ ವಯಸ್ಸಿನವರಿಗೆ) ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತವಾಗಿ ನಡೆಸಲಾಗುವುದು. 

*ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ:*  

ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಕಳುಹಿಸಬೇಕು. ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ (ಎಎಎಂ) ಆರೋಗ್ಯ ತಪಾಸಣೆ ನಡೆಸಿ, ಎನ್‌ಸಿಡಿ ಪೋರ್ಟಲ್‌ಗೆ ಡೇಟಾ ನಮೂದಿಸುತ್ತಾರೆ. ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಿ.ಸುಕುಂ, ಜಿಲ್ಲಾ ಪ್ರಭಾರಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಗೃಹ ಆರೋಗ್ಯ ಯೋಜನೆ ಅನುಷ್ಠಾನಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್ ಸೇರಿದಂತೆ ವೈದ್ಯರು, ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.