ಪಾಕಿಸ್ತಾನದಲ್ಲಿ ಮಸೀದಿ ಬಳಿ ಕಾರ್ ಬಾಂಬ್ ಸ್ಫೋಟ: 15 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಪಾಕಿಸ್ತಾನದಲ್ಲಿ ಮಸೀದಿ ಬಳಿ ಕಾರ್ ಬಾಂಬ್ ಸ್ಫೋಟ: 15 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ Car Bomb Blast at Mosque in Pakistan Kills 15, Injures Over 50

ಇಸ್ಲಾಮಾಬಾದ್, ಸೆಪ್ಟೆಂಬರ್ 18 : ಶುಕ್ರವಾರದ ನಮಾಜ್ ವೇಳೆ ಖೈಬರ್ ಪಖ್ತುಂಖ್ವಾದ ಕೊಹಾಟ್‌ನಲ್ಲಿ ಮಸೀದಿ ಸಮೀಪ ಸ್ಫೋಟಕಗಳಿಂದ ತುಂಬಿದ್ದ ಕಾರೊಂದು ಸ್ಫೋಟಗೊಂಡ ಪರಿಣಾಮ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೈಬರ್ ಪಖ್ತುಂಖ್ವಾ ಪೊಲೀಸ್ ಮುಖ್ಯಸ್ಥ ಜುಲ್ಫಿಕರ್ ಹಮೀದ್ ಅವರು, ವಾಹನವು ಮಸೀದಿ ಆವರಣದ ಹೊರಗೋಡೆಗೆ ಡಿಕ್ಕಿ ಹೊಡೆದ ಬಳಿಕ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ದೊಡ್ಡ ಗುಂಡಿ ಉಂಟಾಗಿದ್ದು, ಮಸೀದಿಯ ಹೊರಭಾಗಕ್ಕೆ ಹಾನಿಯಾಗಿದೆ. ಗೋಡೆಯ ಒಂದು ಭಾಗವೂ ಕುಸಿದಿದೆ.

ಪೊಲೀಸರ ಪ್ರಕಾರ, ಪೊಲೀಸ್ ಕಚೇರಿಗಳ ಪಕ್ಕದಲ್ಲಿರುವ ಈ ಮಸೀದಿಯಲ್ಲಿ ಪೊಲೀಸ್ ಸಿಬ್ಬಂದಿ, ಅವರ ಕುಟುಂಬ ಸದಸ್ಯರು ಹಾಗೂ ಇತರ ನಾಗರಿಕರು ನಮಾಜ್ ಸಲ್ಲಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.

ಸ್ಫೋಟದ ಬಳಿಕ ಗುಂಡಿನ ದಾಳಿ ನಡೆದಿರುವ ಬಗ್ಗೆಯೂ ವರದಿಗಳು ಬಂದಿವೆ. ಆದರೆ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದು ನಿರಾಕರಿಸಿದೆ.

ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಹಾಗೂ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಿವೆ.