ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು

ಆಕ್ಲೆಂಡ್, ನ 29, ಕಠಿಣ ಹೋರಾಟದ ನಡುವೆಯೂ ಭಾರತ ಹಾಕಿ ಮಹಿಳಾ ತಂಡ  ನ್ಯೂಜಿಲೆಂಡ್ ವಿರುದ್ಧ 0-1 ಅಂತರದಲ್ಲಿ ಸೋಲು ಒಪ್ಪಿಕೊಂಡಿತು.ಇದಕ್ಕೂ ಮುನ್ನ ಮೊದಲನೇ ಹಣಾಹಣಿಯಲ್ಲಿ 4-0 ಅಂತರದಲ್ಲಿ ಗೆದ್ದು ನ್ಯೂಜಿಲೆಂಡ್ ಪ್ರವಾಸದಲ್ಲಿ ಶುಭಾರಂಭ ಮಾಡಿದ್ದ ರಾಣಿ ರಾಂಪಾಲ್ ಪಡೆಗೆ ಇದೀಗ ಎರಡನೇ ಸೋಲು ಅನುಭವಿಸಿತು. ಕಳೆದ ಪಂದ್ಯದಲ್ಲಿ 1-2 ಅಂತರದಲ್ಲಿ ಸೋಲು ಒಪ್ಪಿಕೊಂಡಿತ್ತು.ಪಂದ್ಯದ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದಿದ್ದ ಭಾರತದ  ಗೋಲು ಹೊಡೆಯುವ ಪ್ರಯತ್ನವನ್ನು ನ್ಯೂಜಿಲೆಂಡ್ ಅಡ್ಡಿಪಡಿಸಿತು. ಇದಾದ ಬಳಿಕ ಎದುರಾಳಿ ಎರಡು ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಭಾರತದ ರಕ್ಷಣಾ ಕೋಟೆ ಗೋಲು ತಡೆಯುವಲ್ಲಿ ಸಫಲವಾಯಿತು.ಎರಡನೇ ಕ್ವಾರ್ಟರ್ ನಲ್ಲಿ ಮತ್ತೊಮ್ಮೆ ಭಾರತದ ಪೆನಾಲ್ಟಿ ಕಾರ್ನರ್ ಅನ್ನು ಎದುರಾಳಿ ತಂಡ ವಿಫಲಗೊಳಿಸಿತು. ಗೋಲು ರಹಿತವಾಗಿ ಉಭಯ ತಂಡಗಳು ಮೊದಲಾರ್ಧವನ್ನು ಮುಗಿಸಿದವು.ನಂತರ, ಪುಟಿದೆದ್ದ ಆತಿಥೇಯರು ಆಕ್ರಮಣಕಾರಿ ಪ್ರದರ್ಶನ ತೋರಿದರು. ಇದರ ಫಲವಾಗಿ 37 ನಿಮಿಷದಲ್ಲಿ ಹೋಪ್ ರಾಲ್ಫ್ ನ್ಯೂಜಿಲೆಂಡ್ ಗೆ ಮೊದಲನೇ ಗೋಲು ತಂದುಕೊಟ್ಟರು.ಕೊನೆಯ ಕ್ವಾರ್ಟರ್ ನಲ್ಲಿ ಉಭಯ ತಂಡಗಳು ಪೆನಾಲ್ಟಿ ಕಾರ್ನರ್ ಪಡೆದವು. ನ್ಯೂಜಿಲೆಂಡ್ ಎರಡು ಬಾರಿ ಪಡೆದರೆ, ಭಾರತ ಒಂದು ಬಾರಿ ಪೆನಾಲ್ಟ್ ಕಾರ್ನರ್ ಪಡೆಯಿತು. ಆದರೆ, ಗೋಲು ಗಳಿಸುವಲ್ಲಿ ಎರಡೂ ವಿಫಲವಾದವು. ಅಂತಿಮವಾಗಿ ಏಕೈಕ ಗೋಲಿನ ನೆರವಿನಿಂದ ನ್ಯೂಜಿಲೆಂಡ್ ಎರಡನೇ ಗೆಲುವು ಸಾಧಿಸಿತು. ಆ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತ  ವನಿತೆಯರು ಫೆಬ್ರುವರಿ 4 ರಂದು ಗ್ರೇಟ್ ಬ್ರಿಟನ್ ವಿರುದ್ಧ ಸೆಣಸಲಿದೆ.