ಬೆಂಗಳೂರು, ನ 26: ರಾಜ್ಯದಲ್ಲಿರುವ ಎಲ್ಲಾ ಕಾರಾಗೃಹಗಳಲ್ಲಿರುವ ಸಿಬ್ಬಂದಿ ಮತ್ತು ಸೌಲಭ್ಯಗಳ ಕುರಿತು ಸಮಗ್ರ ವರದಿಯನ್ನು ಡಿಸೆಂಬರ್ 16ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಜೊತೆಗೆ, ಈ ಹಿಂದೆಯೇ ಜೈಲಿನಲ್ಲಿರುವ ಸೌಲಭ್ಯಗಳ ಕುರಿತು ವರದಿ ಸಲ್ಲಿಸುವಂತೆ ನೀಡಿದ್ದ ಆದೇಶ ಪಾಲಿಸದ ಸರ್ಕಾರದ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕಳೆದ ಸೆ. 24ರಂದು ನ್ಯಾಯಾಲಯ, ಕಾರಾಗೃಹಗಳು, ಅದರಲ್ಲಿರುವ ಶೌಚಾಲಯ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳು, ಕೈದಿಗಳ ಮಕ್ಕಳಿಗೆ ಶೈಕ್ಷಣಿಕ ನೆರವಿನಂತಹ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು.
ರಾಜ್ಯ ಸರ್ಕಾರದ ಪರ ವಕೀಲರು 2018ರ ಜುಲೈ 4ರಂದು ನ್ಯಾಯಪೀಠಕ್ಕೆ ಸಲ್ಲಿಸಿದ್ದ ವರದಿಯಲ್ಲಿ, ರಾಜ್ಯದಲ್ಲಿ ಒಟ್ಟು 13,622 ಕೈದಿಗಳಿದ್ದು, ರಾಜ್ಯಾದ್ಯಂತದ 60 ಜೈಲುಗಳಲ್ಲಿ ಇರಿಸಲಾಗಿದೆ. ಕಾರಾಗೃಹ ಮಾರ್ಗಸೂಚಿಗೆ ಹೋಲಿಸಿದರೆ ರಾಜ್ಯದಲ್ಲಿ ಕೈದಿಗಳ ಪ್ರಮಾಣದ ಪ್ರತಿ ಜೈಲಿನಲ್ಲಿ ಶೇ.11ರಷ್ಟು ಹೆಚ್ಚಿದೆ. ಅಂದರೆ 1,365 ಹೆಚ್ಚುವರಿ ಕೈದಿಗಳಿದ್ದಾರೆ ಎಂದು ಮಾಹಿತಿ ನೀಡಿತ್ತು.