ನವದೆಹಲಿ, ಜ 29, ಕಳೆದ ಭಾನುವಾರ ಹೆಲಿಕಾಪ್ಟರ್ ದುರಂತದಲ್ಲಿ ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬಿ ಬ್ರಯಾಂಟ್ ಹಾಗೂ ಅವರ ಪುತ್ರಿ ಸೇರಿದಂತೆ ಸಾವಿಗೀಡಾಗಿದ್ದ ಒಟ್ಟು ಒಂಬತ್ತು ಮಂದಿ ಮೃತದೇಹಗಳನ್ನು ಕ್ಯಾಲಿ ಪೋರ್ನಿಯದ ತನಿಖಾ ಸಿಬ್ಬಂದಿ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಕ್ಯಾಲಿಪೋರ್ನಿಯಾ ಕಾಲಬಸಾಸ್ ಸಮೀಪ ಹೆಲಿಕಾಪ್ಟರ್ ಅಪಘಾತದಲ್ಲಿ ಯಾರೊಬ್ಬರು ಬದುಕುಳಿದಿರಲಿಲ್ಲ. ಲಾಸ್ ಏಂಜಲೀಸ್ ನಿಂದ 30 ಮೈಲಿ ದೂರದಲ್ಲಿ ಸಂಭವಿಸಿದ್ದ ದುರ್ಘಟನೆ ಕುರಿತು ತನಿಖೆ ಮುಂದುವರಿದಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದ ಎಲ್ಲ ಮೃತದೇಹಗಳನ್ನು ತೆಗೆಯಲಾಗಿದೆ. ಭಾನುವಾರ ಮೂರು ಮೃತ ದೇಹಗಳನ್ನು ಪಡೆದುಕೊಳ್ಳಲಾಗಿತ್ತು. ಬಳಿಕ, ಸೋಮವಾರ ಇನ್ನುಳಿದ ಆರು ಮೃತದೇಹಗಳನ್ನು ಪತ್ತೆ ಹಚ್ಚಿ ತೆಗೆದುಕೊಳ್ಳಲಾಗಿದೆ ಎಂದು ಲಾಸ್ ಏಂಜಲೀಸ್ ಪರಿಷತ್ತಿನ ಕಚೇರಿ ಸ್ಪಷ್ಟಪಡಿಸಿದೆ.ಸಂತ್ರಸ್ತರೆಲ್ಲರನ್ನೂ ಗುರುತಿಸಲು ಮೃತದೇಹಗಳೆಲ್ಲವನ್ನೂ ವಿಧಿ ವಿಜ್ಞಾನ ಇಲಾಖೆಗೆ ಕೊಂಡೊಯ್ಯಲಾಗಿದೆ. ಮಂಗಳವಾರ ಕೋಬ್ ಬ್ರಯಾಂಟ್ ಸೇರಿದಂತೆ ನಾಲ್ವರು ಮೃತದೇಹಗಳನ್ನು ಗುರುತಿಸಲಾಗಿತ್ತು.ಕಾಲೇಜು ಬೇಸ್ ಬಾಲ್ ಕೋಚ್ ಜಾನ್ ಅಲ್ಟೊಬೆಲ್ಲಿ (56) (ಬ್ರಯಾಂಟ್ ಪುತ್ರಿ ಗಿಯನ್ನಾ ಅವರ ಬ್ಯಾಸ್ಕೆಟ್ ಬಾಲ್ ಸಹಆಟಗಾರ್ತಿ ಅಲಿಸ್ಸಾ ಅಲ್ಟೊಬೆಲ್ಲಿ ತಂದೆ), ಸಾರಾಹ್ ಚೆಸ್ಟರ್ (45) ಹಾಗೂ ಪೈಲಟ್ ಅರಾ ಝೋಬಯಾನ್(50) ಮೃತ ದೇಹಗಳನ್ನು ಈಗಾಗಲೇ ಗುರುತಿಸಲಾಗಿದೆ.