ಬೆಳಗಾವಿ, ಆ 3 ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಕಾರಣ ರಾಜ್ಯದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಆಲಮಟ್ಟಿ ಅಣೆಕಟ್ಟಿನ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಅಂತಾರಾಜ್ಯ ಸಭೆಯ ನಿರ್ಣಯದಂತೆ ಆಲಮಟ್ಟಿ ನೀರಿನ ಮಟ್ಟ ಕಾಯ್ದುಕೊಳ್ಳುವಂತೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲಾಧಿಕಾರಿ ಕರ್ನಾಟಕಕ್ಕೆ ಮನವಿ ಮಾಡಿದ್ದಾರೆ. ನೆರೆಯ ಕೊಯ್ನಾ, ವರಣಾ ಇತರ ಜಲಾಶಯಗಳು ಬಹುತೇಕ ತುಂಬಿದ್ದು, ಇದರಿಂದ ಕೃಷ್ಣಾ ಕೊಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೂಡಲೇ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ 518 ಮೀ. ಇಲ್ಲವೇ 518.5 ಕ್ಕೆ ಮಿತಿಗೊಳಿಸಬೇಕು ಎಂದು ಮಹಾರಾಷ್ಟ್ರ ಸರಕಾರದ ಪರವಾಗಿ ಸಾಂಗಲಿ ಜಿಲ್ಲಾಧಿಕಾರಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 519.60 ಮೀ.ಎತ್ತರದ ಆಲಮಟ್ಟಿ ಜಲಾಶಯ ಮೈದುಂಬಲು ಕೇವಲ 25 ಸೆಂಟಿ ಮೀಟರ್ ಮಾತ್ರ ಬಾಕಿ ಇದೆ. ಈಗಾಗಲೇ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್ ನೀರು ನಾರಾಯಣಪುರ ಬ್ಯಾರೇಜ್ಗೆ ಹರಿಬಿಡಲಾಗುತ್ತಿದ್ದು, ರಾಯಚೂರು, ಯಾದಗಿರಿ ಪ್ರದೇಶಗಳಲ್ಲೂ ಪ್ರವಾಹದ ಭೀತಿ ಉಂಟಾಗಿದೆ. ಮಹಾರಾಷ್ಟ್ರದಿಂದ ಸತತವಾಗಿ ಹರಿದುಬರುತ್ತಿರುವ ನೀರಿನಿಂದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೃಷ್ಣಾ, ಭೀಮಾ ನದಿಗಳಲ್ಲಿ ನೆರೆಹಾವಳಿಯ ಭೀತಿ ಎದುರಾಗಿದೆ. ಮಹಾರಾಷ್ಟ್ರದ ತುರ್ತ ಸಂದೇಶದಂತೆ ಕರ್ನಾಟಕ ಸರಕಾರ 518.5 ಮೀಟರ್ ಗೆ ಸಂಗ್ರಹವನ್ನು ಮಿತಿಗೊಳಿಸಿದರೆ ಇನ್ನೂ ಐವತ್ತು ಸಾವಿರ ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು. ಇದರಿಂದ ರಾಯಚೂರು,ಯಾದಗಿರಿ ಜಿಲ್ಲೆಗಳಲ್ಲಿ ನೆರೆಹಾವಳಿ ಪ್ರಮಾಣ ಹೆಚ್ಚುವ ಸಾಧ್ಯತೆಯೂ ಇದೆ. ಇಂದು ಸತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ 10,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ನೀರಾವರಿ ಅಧಿಕಾರಿಗಳು ಕರ್ನಾಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 105 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಕೊಯ್ನಾ ಅಣೆಕಟ್ಟು ಶೇಕಡಾ 80 ರಷ್ಟು ಭರ್ತಿಯಾಗಿದೆ. 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಯ ಒಳ ಹರಿವು ಇದ್ದು, ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ. ಇದರಿಂದ ಬೆಳಗಾವಿಯ 37 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬಳ್ಳಾರಿಯ ಕೆಲವು ಭಾಗಗಳಲ್ಲಿ ಕೃಷ್ಣಾ ನದಿಯ ನೆರೆ ನೀರು ಜಮೀನುಗಳಿಗೆ ನುಗ್ಗಿ ಭಾರೀ ಹಾನಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳು ಜಲಾವೃತವಾಗಿವೆ.