ಲೋಕದರ್ಶನ ವರದಿ
ಕಾಗವಾಡ 22: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಾಗವಾಡ-ವಿಜಯಪುರ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿಯ ಕಾಗವಾಡ ಗ್ರಾಮದ ಹತ್ತಿರಯಿರುವ ಹಳ್ಳಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದು ಸುಮಾರು 4 ಗಂಟೆ ಸಂಚಾರ ಸೇವೆ ಕಡಿತಗೊಂಡಿತ್ತು.
ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕಾಗವಾಡದಲ್ಲಿ ಗ್ರಾಮದ ಬಳಿಯಿರುವ ದೊಡ್ಡ ಹಳ್ಳ ತುಂಬಿ ಹರಿಯಲು ಪ್ರಾರಂಭವಾಯಿತು. ಇದರಿಂದ ರಸ್ತೆ ಮೇಲಿಂದ ಸುಮಾರು 4 ಅಡಿ ನೀರು ಹರಿಯುತ್ತಿದ್ದರಿಂದ ಈ ಮಾರ್ಗದಿಂದ ಸಂಚಾರಿಸುತ್ತಿರುವ ಬಸ್ ಹಾಗೂ ಇನ್ನೀತರ ವಾಹನಗಳ ಓಡಾಟ ಸ್ಥಗೀತಗೊಂಡಿತ್ತು. ಬೆಳಿಗ್ಗೆ ಗ್ರಾಮ ಪಂಚಾಯತಿ ಆಧ್ಯಕ್ಷರು, ಸದಸ್ಯರು, ಮುಖಂಡರು ನೀರು ಹರಿದು ಹೋಗಲು ಬೇರೆ ದಾರಿ ಮಾಡಿದ್ದರಿಂದ ನೀರು ಇಳಿಮುಖವಾಗಿ ಸಂಚಾರ ಸೇವೆ ಪ್ರಾರಂಭವಾಯಿತು.
ಇದೇ ರೀತಿ ಉಗಾರ-ಶಿರಗುಪ್ಪಿ ಮಾರ್ಗದಲ್ಲಿಯ ತೆಗ್ಗು ಪ್ರದೇಶದ ಸೇತುವೆ ಮೇಲಿಂದ ನೀರು ಹರಿದು ಬಂದು ಸಂಚಾರ ಸೇವೆ ಕಡಿತಗೊಂಡಿತ್ತು. ಇಷ್ಟಲ್ಲದೇ ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ, ಉಗಾರ ಬುದ್ರುಕ, ಉಗಾರ ಖುರ್ದ ಗ್ರಾಮಗಳಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲಿಂದ ನೀರು ಹರಿಯುತ್ತಿದ್ದರಿಂದ ಜನರಿಗೆ ಇದರ ತೊಂದರೆ ಉಂಟಾಗಿತ್ತು.
ಈ ವರ್ಷದಲ್ಲಿ 700 ಮಿಮಿ ಮಳೆ ಸುರಿದ ಹೊಸ ದಾಖಲೆ:
ಕಾಗವಾಡ ತಾಲೂಕಿನಲ್ಲಿ ಕಳೇದ ಅನೇಕ ವರ್ಷಗಳ ಬಳಿಕ ಅತಿಹೆಚ್ಚು ಮಳೆ ಈ ವರ್ಷ ಸುರಿದಿರುವ ದಾಖಲೆ ನಿರ್ಮಿಸಿದೆ. ಸಂಪೂರ್ಣ ಮಳೆಗಾಲದಲ್ಲಿ ಸರಾಸರಿ 400 ಮಿ.ಮಿ ಮಳೆ ಗುರಿ ಹೊಂದಿದೆ. ಆದರೆ ಈ ವರೆಗೆ 364.85 ಮಿ.ಮಿ ಮಳೆಯಾಗಿರುವ ದಾಖಲೆ ಹೊಂದಿದೆ. ಕಳೇದ ವರ್ಷ 318 ಮಿ.ಮಿ ಮಳೆಯಾಗಿದೆ. ಆದರೆ, ಪ್ರಸಕ್ತ ಮಳೆಗಾಲದಲ್ಲಿ ಎಲ್ಲ ದಾಖಲೆಗಳನ್ನು ಮುರೆದು 700 ಮಿಮಿ ಮಳೆಯಾಗಿರುವ ದಾಖಲೆ ಉಗಾರ ಸಕ್ಕರೆ ಕಾರ್ಖಾನೆಯ ಮಳೆ ಏಣಿಕೆ ಕೇಂದ್ರದಲ್ಲಿ ನೊಂದಾಯಿಸಲಾಗಿದೆ.
ಕಳೇದ ಎರಡು ದಿನಗಳಲ್ಲಿ 100 ಮಿಮಿ ಮಳೆ ಸುರಿದಿದೆ. ಇದರಿಂದ ಕೃಷ್ಣಾ ನದಿ ತೀರದಜನರು ಎರಡು ಬಾರಿ ಮಹಾಪೂರ ನೀರಿನ ತೊಂದರೆ ಅನುಭವಿಸಿದ್ದರು. ಸತತವಾಗಿ ಆಗಸ್ಟ್ ತಿಂಗಳಿನಲ್ಲಿ 21 ದಿನ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿತ್ತು. ಸಪ್ಟೆಂಬರ್ ತಿಂಗಳಿನಲ್ಲಿ 7 ದಿನ ನೀರಿನಲ್ಲಿ ಮುಳುಗಿತ್ತು. ಈಗ 3ನೇ ಬಾರಿ ಸೇತುವೆ ನೀರಿನಲ್ಲಿ ಮುಳುಗಿದೆ. ಇದರಿಂದ ಇಲ್ಲಿಯ ಜನರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.