ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ: 3000 ಹೆಕ್ಟೇರ್ ಬೆಳೆ ನಾಶ

ಬೆಳಗಾವಿ, ಆ 5  ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು. ಶಾಲಾ-ಕಾಲೇಜುಗಳ ಕಟ್ಟಡಕ್ಕೆ ನೀರು ನುಗ್ಗಿರುವುದರಿಂದ ಜಿಲ್ಲಾಡಳಿತ ಮೂರು ದಿನಗಳ ಕಾಲ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಿದೆ. ಹಲವೆಡೆ ರಸ್ತೆಗಳಿಗೂ ನೀರು ನುಗ್ಗಿರುವುದರಿಂದ ಸಂಚಾರ  ಅಸ್ತವ್ಯಸ್ತವಾಗಿದೆ ಎಂದು ಅಧಿಕೃತ ಮೂಲಗಳು ಯುಎನ್ಐಗೆ ತಿಳಿಸಿವೆ. ಪ್ರವಾಹ ಪೀಡಿತ ಬೆಳಗಾವಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ, ಸೇನೆಯ ಸಹಾಯವನ್ನು ಕೋರಲಾಗಿದೆ ಎಂದು ತಿಳಿಸಿದರು. ಸೇನೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳೊಂದಿಗೆ ಬಳಸಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲಾಗುವುದು ಎಂದರು. ಪ್ರವಾಹದಿಂದ ರಕ್ಷಿಸಲ್ಪಟ್ಟ ಜನರಿಗೆನಿರಾಶ್ರಿತ ಕೇಂದ್ರಗಳಲ್ಲಿ ಹಾಗೂ ಜಾನುವಾರುಗಳಿಗೆ ಗೋ ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ. ಕೃಷ್ಣ ನದಿಯ ದಡದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಂದ ಇದುವರೆಗೆ ಸುಮಾರು 1000 ಜನರು ಮತ್ತು ಜಾನುವಾರುಗಳನ್ನು ರಕ್ಷಿಸಲಾಗಿದೆ. ಮಲಪ್ರಭಾ, ಘಟಪ್ರಭಾ ಜಲಾಶಯಗಳಿಗೆ ಭಾರೀ ಒಳಹರಿವು ಇದೆ. ಬೆಳೆದು ನಿಂತಿದ್ದ ಸುಮಾರು 3000 ಹೆಕ್ಟೇರ್ ಬೆಳೆ ನಾಶವಾಗಿದ್ದು, ಸಂತ್ರಸ್ತ ಜನರಿಗಾಗಿ 8 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಾವಿಯ ಮೂರು ತಾಲೂಕುಗಳಲ್ಲಿ 25 ಕ್ಕಿಂತಲೂ ಕಡಿಮೆ ತಗ್ಗು ಸೇತುವೆಗಳು ಜಲಾವೃತವಾಗಿವೆ. ಅತಿವೃಷ್ಟಿಯನ್ನು ನಿಭಾಯಿಸಲು ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರದ ಬಳಿ ಹಣದ ಕೊರತೆಯಿಲ್ಲ ಎಂದು ಹೇಳಿದ ಮುಖ್ಯಮಂತ್ರಿ, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ರಕ್ಷಿಸಿದವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮತ್ತು ರಕ್ಷಿಸಿದ ಪ್ರಾಣಿಗಳಿಗೆ ಸಾಕಷ್ಟು ಮೇವು ಮತ್ತು ನೀರನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.