ಮುಂಬೈ,
ಡಿ28, ನಗರದ ಘಾಟ್ಕೋಪರ್ ನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಹಿಳೆಯೊಬ್ಬರು
ಸೇರಿದಂತೆ ಇಬ್ಬರು ಮೃತಪಟ್ಟಿರುವುದಾಗಿ ವರದಿಯೊಂದು ಶನಿವಾರ ತಿಳಿಸಿದೆ. ಕಳೆದ ಮಧ್ಯರಾತ್ರಿ ದುರಂತ
ಸಂಭವಿಸಿದ್ದು, ಮಾಹಿತಿ ತಲುಪಿದ ತಕ್ಷಣ ಸುಮಾರು 15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು
ನಂದಿಸಿವೆ. ಬೆಂಕಿಯ ತೀವ್ರ ಸ್ವರೂಪದ್ದಾಗಿದ್ದು,
ಜ್ವಾಲೆಗಳ ತೀವ್ರತೆ ನಾಲ್ಕರ ಮಟ್ಟದಲ್ಲಿತ್ತು ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ದುರಂತದಲ್ಲಿ
ಗಾಯಗೊಂಡ ಇಬ್ಬರನ್ನು ಹೊರತುಪಡಿಸಿ ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ವ್ಯಕ್ತಿಯ ಪತ್ತೆಯ
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬೆಂಕಿಗೆ ಕಾರಣವನ್ನು ತಿಳಿಯಲು
ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಪ್ರತ್ಯೇಕ
ಕಾರ್ಖಾನೆಗಳಲ್ಲಿ ನಡೆದ ಪ್ರತ್ಯೇಕ ಬೆಂಕಿ ದುರಂತಗಳಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ
ಗಮನಿಸಬಹುದಾಗಿದೆ.