ಬೆಂಗಳೂರು, ಜು 1: ಕೊರೋನಾ ಸೋಂಕಿತ
ವ್ಯಕ್ತಿಯೋರ್ವರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲು ನಿರಾಕರಿಸಿದ 9 ಆಸ್ಪತ್ರೆಗಳಿಗೆ ರಾಜ್ಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 52 ವರ್ಷದ ಭಾವರ್ಲಾಲ್ ಸುಜನಿ ಎಂಬ ರೋಗಿಯೊಬ್ಬರು
ಚಿಕಿತ್ಸೆಗಾಗಿ 18 ಆಸ್ಪತ್ರೆಗಳಿಗೆ ಅಲೆದಾಡಿದ್ದರೂ, ಯಾವೊಂದು ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರಕದೆ
ಮೃತಪಟ್ಟಿದ್ದಾರೆ. ಅವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದರಿಂದ ಪುತ್ರ ವಿಕ್ರಮ್ ಜೈನ್ ಮತ್ತು
ಸಂಬಂಧಿ ದಿನೇಶ್ ಅವರನ್ನು ಜೂ. 30ರಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಯಾವುದೇ ಆಸ್ಪತ್ರೆಗಳು
ಹಾಸಿಗೆ, ವೆಂಟಿಲೆಟರ್‌ಗಳು ಲಭ್ಯವಿಲ್ಲ ಎಂದು ಕಾರಣ ನೀಡಿ ದಾಖಲು ಮಾಡಿಕೊಂಡಿರಲಿಲ್ಲ.
ಇದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ
ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ, 2017ರ ಕೆಪಿಎಂಸಿ ಕಾಯ್ದೆಯ ಸೆಕ್ಷನ್ 11 ಮತ್ತು 11ಎ ಅಡಿಯಲ್ಲಿ
ಯಾವುದೇ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್ -19 ಸೋಂಕಿತ ಅಥವಾ ಸೋಂಕಿನ ಲಕ್ಷಣಗಳುಳ್ಳವರಿಗೆ
ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದಿನ 24 ಗಂಟೆಗಳಲ್ಲಿ ಶೋಕಾಸ್ ನೋಟಿಸ್‌ಗೆ
ಉತ್ತರಿಸಬೇಕು ಮತ್ತು ಕಾನೂನು ಕ್ರಮಗಳನ್ನು ಎದುರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯ
ಫೋರ್ಟಿಸ್, ವಸಂತನಗರದ ಮಹಾವೀರ ಜೈನ್ ಆಸ್ಪತ್ರೆ, ರಾಜಾಜಿನಗರದ ಸುಗುಣಾ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ,
ಚಾಮರಾಜನಗರದ ಬೃಂದಾವನ ರಸ್ತೆ, ರಂಗಾದೊರೈ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ಸಕ್ರಾ ಆಸ್ಪತ್ರೆ, ಬೌರಿಂಗ್
ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.