ನವದೆಹಲಿ, ಮೇ ೨,ಆರೋಗ್ಯ ಸೇತು ಆಪ್ ಸಂಪೂರ್ಣ ವೈಜ್ಞಾನಿಕ ಸಾಧನವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ. ಸಮೀಪದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಇದ್ದರೆ ಈ ಸಾಧನ ಎಚ್ಚರಿಸುತ್ತದೆ. ಈ ಸಾಧನದಲ್ಲಿ ಸಂಗ್ರಹಿಸಲಾಗುವ ಖಾಸಗಿ ಅಂಶಗಳ ಗೌಪ್ಯತೆಯ ಬಗ್ಗೆ ಜನರು ಯಾವುದೇ ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.ಆಪ್‌ನಲ್ಲಿ ಖಾಸಗಿ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಇದು ವೈಯಕ್ತಿಕ ಗೌಪ್ಯತೆಗೆ ಧಕ್ಕೆ ಒದಗಲಿದೆ ಎಂಬ ಮಜ್ಲಿಸ್ ಪಕ್ಷದ ಸಂಸದ ಅಸದುದ್ದೀನ್ ಒವೈಸಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾವಡೇಕರ್, ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಈ ಅಪ್ಲಿಕೇಶನ್ ಅನ್ನು ಇಡೀ ಜಗತ್ತು ಬಳಸುತ್ತಿದೆ ಎಂದು ಹೇಳಿದರು.
ಸೋಂಕಿತ ವ್ಯಕ್ತಿ ಸಮೀಪದಲ್ಲಿದ್ದರೆ, ಸಾಧನ ಎಚ್ಚರಿಸಲಿದೆ. ಇದೊಂದು ಅತ್ಯುತ್ತಮ ವೈಜ್ಞಾನಿಕ ಸಾಧನ ಎಂದು ಅವರು ಹೇಳಿದರು. ವಾಸ್ತವವಾಗಿ, ಇದರಲ್ಲಿ ಬಳಕೆದಾರರ ಮಹತ್ವದ ಮಾಹಿತಿ ಸಂಗ್ರಹಿಸುವುದಿಲ್ಲ. ಕೆಮ್ಮು, ಶೀತ ಅಥವಾ ರೋಗ ನಿರ್ಧರಣೆ ಆದರೆ ಮಾತ್ರ ಆ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು. ಮುಂದಿನ ಒಂದರೆಡು ವರ್ಷಗಳ ಕಾಲ ಈ ಅಪ್ಲಿಕೇಶನ್ ಮುಂದುವರಿಯಲಿದೆ. ಲಾಕ್‌ಡೌನ್ ಶೀಘ್ರದಲ್ಲೇ ಕೊನೆಗೊಳ್ಳುವ ನಿರೀಕ್ಷೆಯಿದೆ, ಆದರೆ ಆಪ್ ಮಾತ್ರ ಕೋವಿಡ್ -೧೯ ವಿರುದ್ದ ಶಾಶ್ವತ ವಿಜಯ ಸಾಧಿಸುವವರೆಗೆ ಜನರಿಗೆ ಸಹಕಾರಿಯಾಗಿ ಮುಂದುವರಿಯಲಿದೆ ಹೇಳಿದರು. ಅಪ್ಲಿಕೇಷನ್ ನಲ್ಲಿ ಜನರ ವ್ಯಕ್ತಿಗತ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ, ಇದರಿಂದ ಖಾಸಗಿತನಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಸಂಸದ ಅಸದದ್ದೀನ್ ಒವೈಸಿ ಹೇಳಿಕೆಗೆ ಜಾವೇಡಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.