ಈ ದೇಶಕ್ಕಾಗಿ ದುಡಿದು, ದೇಶಕ್ಕಾಗಿ ಮಡಿದು, ಕೊನೆಗೆ ದೇಶದ ಚರಿತ್ರೆಯ ಪುಟದಲ್ಲಿ ಅಮರವಾದವರನ್ನು ಹಿಡಿದೆಳೆದು ತಂದು ವಾಸ್ತವದ ಕರಾಳ ಉರುಳಿಗೆ ಸಿಕ್ಕಿಸಿ, ಮಾತಿನಲ್ಲಿಯೇ ಗುಂಡು ಹೊಡೆದು ಕೊಲ್ಲುವ ಇವರಿಗೇನು ಹೇಳಬೇಕು? ನನಗಂತೂ ಗೊತ್ತಾಗುತ್ತಿಲ್ಲ. ಇವರು ರಾಜಕಾರಣಿಗಳು, ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುವ ನಾಯಕರುಗಳು, ಅಧಿಕಾರಕ್ಕಾಗಿ ಅತ್ತಿಂದಿತ್ತ ಜಿಗಿದಾಡುವ ನಮ್ಮ ಪೂರ್ವಜರ ಕುಲದವರು. ನಾಲ್ಕಾಣೆ ಕೊಟ್ಟರೆ ನಿನ್ನ ಕಡೆ, ಎಂಟಾಣೆ ಸಿಕ್ಕರೆ ಅತ್ತೆಯ ಕಡೆ, ಬಾರಾಣೆ ನೀಡಿದರೆ ಮಾವನ ಕಡೆ ಎಂದು ಲಾಭವಿರುವ ಕಡೆಗೆ ಹೊರಟು ಬಿಡುವ ಎಡಬಿಡಂಗಿ ವ್ಯಾಪಾರಿ ಗುಣದವರು. ಇವರಿಗೆ ಬೇಕಿರುವುದು ಅಧಿಕಾರ. ಅದಕ್ಕೆಂದು ಹೆಜ್ಜೆ ಹೆಜ್ಜೆಗೂ ಲೆಕ್ಕಾಚಾರ. ಇಂಥವರು ಈ ದೇಶವನ್ನು ಆಳುತ್ತಿರುವುದೇ ನಮ್ಮೆಲ್ಲರ ಗ್ರಹಚಾರ. ಇರಲಿ ಬಿಡಿ; ಇವರ ಕುರಿತು ಎಷ್ಟು ಗುಣಗಾನ ಮಾಡಿದರೂ ಅಷ್ಟೇ ಇದೆ. ರಾಜಕೀಯ ಮಾಡುತ್ತಾರಾ? ಮಾಡಿಕೊಳ್ಳಲಿ ಬಿಡಿ; ಅವರಿಗೆ ಬೇಡ ಅಂದವರಾ್ಯರು? ಏಕೆಂದರೆ ರಾಜಕೀಯವಿಲ್ಲದೆ ರಾಜ್ಯ ನಡೆಯವುದಕ್ಕೆ ಸಾಧ್ಯವಿಲ್ಲ. ಹಾಗೆಂದು ಬಾಯಿಚಪಲದ ರಾಜಕೀಯ ಮಾಡುವುದು ಸರಿ ಅಲ್ಲ ಅಲ್ಲವೆ? ಸುಮ್ಮನಿದ್ದವರನ್ನು ಸುಖಾ ಸುಮ್ಮನೆ ಕೆಣಕುವ ಇವರ ಕೊಂಕು ಬುದ್ಧಿಗೆ ಏನು ಹೆಳಬೇಕು ಅರ್ಥವಾಗುವುದಿಲ್ಲ. ತಮ್ಮ ರಾಜಕೀಯದ ತೆವಲಿಗೆ ಸತ್ತವರನ್ನು ಎಳೆದೆಳೆದು ತಂದು, ನಾಲಿಗೆ ಚಟ ತೀರಿಸಿಕೊಂಡು, ಬಾಯಿಂದ ಬೇಧಿ ಮಾಡಿಕೊಳ್ಳುವವರಿಗೆ ಏನು ಹೇಳಬೇಕು ಹೇಳಿ? ಇವರಂತೂ ದೇಶಕ್ಕಾಗಿ ಏನು ಕಡೆದು ಗುಡ್ಡೆ ಹಾಕಿದ್ದಾರೋ ಗೊತ್ತಿಲ್ಲ. ಹೋಗಲಿ ಈ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಬೇಡ ಸ್ವಲ್ಪವಾದರೂ ತ್ಯಾಗ ಮಾಡಿದ್ದಾರಾ? ಅದೂ ಇಲ್ಲ. ಅದೂ ಬೇಡ ಕನಿಷ್ಠ ಈ ದೇಶದ ಇತಿಹಾಸವನ್ನಾದರೂ ಪೂರ್ಣ ಅರ್ಥ ಮಾಡಿಕೊಂಡಿದ್ದಾರಾ? ಊಹೂಂ ಅದೂ ಇಲ್ಲ. ಅದೂ ಇಲ್ಲ ಇದೂ ಇಲ್ಲ ಅಂದ ಮೇಲೆ ಇನ್ನು ಇರುವುದಾದರೂ ಏನು? ಬರೀ ಮಾತಿನ ಮಾರಾಟ. ಆಲೋಚನೆಯ ಸ್ಟಾಕ್ ಖಾಲಿಯಾಗಿದೆ. ಇಲ್ಲೇನಿದ್ದರೂ ಬರೀ ಮಾತಿನ ಮಾರಾಟ. ಎದುರಿಗೆ ಚಪ್ಪಾಳೆ ತಟ್ಟುವುದಕ್ಕೆ ಕೆಲವು ಪುಕ್ಕಟ್ಟೆ ಗಿರಾಕಿಗಳು ಸಿಕ್ಕವೆಂದರೆ ಸಾಕು. ಮೈಕಾಸುರರೆಲ್ಲ ಸೇರಿ ಕಂಡ ಕಂಡವರ ಕುರಿತು ದಂಡಿ ದಂಡಿಯಾಗಿ ಮಾತನಾಡಿ ತಮ್ಮ ಮಾತಿನ ತೆವಲನ್ನು ತೀರಿಸಿಕೊಳ್ಳುತ್ತಾರೆ. ಅದರಲ್ಲೂ ಬದುಕಿರುವ ಜನಗಳ ಕುರಿತು ಮಾತಾಡಿದರೆ ಕನಿಷ್ಠ ಪಕ್ಷ ಕೇಳಿಸಿಕೊಂಡ ಆ ವ್ಯಕ್ತಿಯಾದರೂ ಏಟಿಗೆ ಎದುರೇಟು ಎನ್ನುವಂತೆ ಹೇಳಿಕೆಯನ್ನು ವಿರೋಧಿಸಿ ತಾನೊಂದು ಹೇಳಿಕೆಯನ್ನಾದರೂ ಕೊಡುತ್ತಾನೆ. ಆದರೆ ಇವರು ಎಳೆದು ತರುತ್ತಿರುವುದು ಯಾರನ್ನು? ಈ ದೇಶಕ್ಕಾಗಿ ದುಡಿದು ಮಡಿದವರನ್ನು. ಚರಿತ್ರೆಯ ಪುಟಗಳಲ್ಲಿ ನೆಮ್ಮದಿಯಾಗಿ ಇದ್ದವರನ್ನು, ಭೂತಕಾಲದಲ್ಲಿದ್ದವರನ್ನು ವರ್ತಮಾನಕ್ಕೆ ಎಳೆದು ತಂದು, ಅಂದು ಅವಮಾನ ಮಾಡುವುದಕ್ಕೆ ನಾವಿದ್ದಿದ್ದಿಲ್ಲ. ಅದಕ್ಕೆ ಇಂದು ನೀವು ಹೋದರೂ ಕೂಡ ನಿಮ್ಮ ಹೆಸರನ್ನಾದರೂ ಹಾಳು ಮಾಡುತ್ತೇವೆ ಎನ್ನುವ ಫಣ ತೊಟ್ಟು ಅವನು ಹಾಗೆ, ಇವನು ಹೀಗೆ, ಅವನು ಹಾಗೆ ಮಾಡಿದ ಇವನು ಹೀಗೆ ಮಾಡಿದ ಎಂದು ಹೇಳುತ್ತ ಎಲುಬಿಲ್ಲದ ನಾಲಿಗೆಯನ್ನು ಎತ್ತಬೇಕತ್ತ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿರುವುದನ್ನು ನೋಡಿದಾಗ ಇಂಥವರಿಗಾಗಿ ಅಂದವರು ಕಡಲು ಜಿಗಿದಿರ? ಕಬ್ಬಿಣದ ಸರಳುಗಳ ಹಿಂದೆ ಸ್ವತಂತ್ರ್ಯ ಭಾರತ ಕನಸು ಕಂಡರಾ?, ಕಲ್ಲುಗೋಡೆಯ ಮೇಲೆ ಮೆಲ್ಲ ಮೆಲ್ಲನೆ ದೇಶಭಕ್ತಿಯ ಸಾಲುಗಳನ್ನು ಕೆತ್ತುತ್ತ ಬ್ರಿಟೀಷರ ಸೊಲ್ಲಡಗಿಸಿದರಾ? ಬ್ಯಾರಿಸ್ಟರ್ ಆಗಿ ಬರಬೇಕಾದವರು ಭಾರತಾಂಬೆಯ ಬಿಡುಗಡೆಗೆಂದು ಹೊರಟು ಬಂಧಿಯಾದರಾ? ಕನಸು ಕಾಣುವ ವಯಸ್ಸಿನಲ್ಲಿ ಕಾಲಾಪಾನಿಯಂತಹ ಶಿಕ್ಷೆಗೆ ಗುರಿಯಾಗಿ ಅನುಭವಿಸಬಾರದ ನೋವುಗಳನ್ನು ಅನುಭಸಿದರಾ? ಕೊನೆಗೆ ಯಾರೋ ಮಾಡಿದ ಆರೋಪಕ್ಕೆಂದು ಕಲ್ಲೇಟು ತಿಂದಿರಾ? ಎನ್ನುವ ಪ್ರಶ್ನೆಗಳು ನನ್ನನ್ನು ಈಟಿಯಂತೆ ತಿವಿಯುತ್ತಿವೆ. ಅದಕ್ಕೆ ಹೇಳುತ್ತಿದ್ದೇನೆ. ಬದುಕಿರುವಾಗಲಂತೂ ಅವರನ್ನು ನೆಮ್ಮದಿಯಾಗಿರಲು ಬಿಡಲಿಲ್ಲ. ಕನಿಷ್ಠಪಕ್ಷ ಅವರು ಸತ್ತ ಮೇಲಾದರೂ ನೆಮ್ಮದಿಯಾಗಿರಲು ಬಿಡಿ. ಇಲ್ಲದೇ ಹೋದಲ್ಲಿ ತಮ್ಮ ಈ ಹದ್ದುಮೀರಿದ ಬಾಯಿಚಪಲವನ್ನು ಕಂಡು ಆ ಆತ್ಮಗಳು ಕಣ್ಣೀರಿಟ್ಟರೂ ಇಡಬಹುದು.
ಹೌದು ಮೊದಲೇ ದೇಶ ಹಾಗೂ ರಾಜ್ಯ ರಾಜಕಾರಣವನ್ನು ನೋಡಿದರೆ ಒಂದು ತರಹದ ವಾಕರಿಕೆ ಬರುತ್ತದೆ. ಒಂದೆಡೆ ಭಾರತ ಜೋಡೊ, ಮತ್ತೊಂದೆಡೆ ಗುಮ್ಮಟ್ ತೋಡೋ, ಇನ್ನೊಂದೆಡೆ ಓಟ್ ಬ್ಯಾಂಕ್ ಕೇಲಿಯೇ ಭಾರತೀಯೋಂಕಾ ಧರ್ಮ ಫೋಡೋ, ಕ್ಯಾ ಹೋತಾ ಹೈ ಹೋನೆ ದೋ ಅಧಿಕಾರ್ ಪಕಡ್ ಕರ್ ಹೀ ಚೋಡೊ, ಇಸ್‌ಕೆಲಿಯೇ ಅನ್ಯಾಯ ಕೆ ಪೀಚೆ ದೌಡೋ ನಡೆದಿದೆ. ಇದರ ಮಧ್ಯದಲ್ಲಿ ಯಾರನ್ನೋ ಓಲೈಸುವುದಕ್ಕಾಗಿ, ಇನ್ಯಾರನ್ನೋ ಮೆಚ್ಚಿಸುವುದಕ್ಕಾಗಿ, ಮತ್ಯಾರಿಂದಲೋ ಶಭ್ಭಾಶ ಎನ್ನಿಸಿಕೊಳ್ಳುವುದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು, ಮಹಾತ್ಮರನ್ನು ಸಂತ ಮಹಾಂತ ಋಷಿಮುನಿಗಳನ್ನು ಮುಂದೆ ಮಾಡಿಕೊಂಡು ರಾಜಕಾರಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೆಂಪೆಗೌಡರ ಪ್ರತಿಮೆಯ ಅನಾವರಣಕ್ಕೆ ಪ್ರಧಾನಮಂತ್ರಿಗಳು ಆಗಮಿಸಿದರೆ ಅದನ್ನು ವಿರೋಧಿಸಿದ ಮನಸ್ಸುಗಳಿವೆ. ಕನದಾಸ ಹಾಗೂ ವಾಲ್ಮಿಕಿ ಮೂರ್ತಿಗಳಿಗೆ ಮಾಲೆ ಹಾಕಿದರೆ ಅದನ್ನು ಲೇವಡಿ ಮಾಡಿದ ಮನಸ್ಸುಗಳಿವೆ. ಕೆಂಪೇಗೌಡರ ಮೂರ್ತಿ ನಿರ್ಮಾಣಕ್ಕೆ ಸರ್ಕಾರ ಏಕೆ ದುಡ್ಡು ಕೊಡಬೇಕು? ಎಂದು ಪ್ರಶ್ನೆ ಮಾಡಿದ ಮನಸ್ಸುಗಳಿವೆ. ಈ ರೀತಿ ಬಂದು ಮೂರ್ತಿಗಳಿಗೆ ಹಾರ ಹಾಕಿದ ಮಾತ್ರಕ್ಕೆ ಆ ಜಾತಿಯ ಜನಗಳು ಅವರ ಹಿಂದೆ ಹೋಗುತ್ತಾರೆನ್ನುವುದು ಭ್ರಮೆ ಎಂದು ಹೇಳಿದ ಮನಸ್ಸುಗಳೂ ಇಲ್ಲಿವೆ. ಈಗ ಸಾರ್ವಕರ್, ನೆಹರು ಅಂತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಾಯಕರುಗಳ ಕುರಿತು ಹಗುರವಾಗಿ ಮಾತನಾಡುವ ಮೂಲಕ ಅವರ ಹೆಸರುಗಳ ಮೇಲೂ ರಾಜಕಾರಣ ಮಾಡುತ್ತಿರುವುದು ಹೇಸಿಗೆ ತಂದಿದೆ. ಹೇಣಗಳ ಮೇಲೆ ಹಣ ಮಾಡುವವರನ್ನು ಕಂಡಿದ್ದೇನೆ. ಆದರೆ ಸತ್ತವರ ಹೆಸರುಗಳ ಮೇಲೆ ರಾಜಕಾರಣ ಮಾಡುವುದನ್ನು ನಾನು ಇತೀಚೆಗೆ ನೋಡಿದ್ದೇನೆ. ಇದು ಇವಿಚಿತ್ರ ಆದರೂ ಸತ್ಯ. ಏಕೆಂದರೆ ದೇಶದ ಪ್ರಧಾನಿ ರಾಜ್ಯಕ್ಕೆ ಬಂದಾಗ ಅಲ್ಲಿ ಮೂರ್ತಿಗಳಿಗೆ ಹೂಮಾಲೆ ಹಾಕಿದಾಗ ಅದಕ್ಕೆ ರಾಜಕೀಯ ಬಣ್ಣ ಬಳಿಯುವುದರ ಮೂಲಕ ನಿಜಕ್ಕೂ ಆ ಮಹಾತ್ಮರನ್ನು ಜಾತಿಯಿಂದಲೇ ಅಳೆದು ತೂಗುತ್ತಾರಲ್ಲ ಅದರಾಚೆ ಅವರು ಮಾನವೀಯತೆಗಾಗಿ ಮಾಡಿದ ತ್ಯಾಗಕ್ಕೆ ಅರ್ಥವೇ ಇಲ್ಲವೆ? ಒಬ್ಬ ಮಹಾತ್ಮನನ್ನು ಆತನ ಕಾರ್ಯಗಳಿಂದ ಅಳೇಯಬೇಕೆ ಅಥವಾ ಅವರ ಜಾತಿಯಿಂದ ಅಳೆಯಬೇಕೆ? ಈ ಪ್ರಶ್ನೆಗೆ ನಮ್ಮ ನಾಯಕರು ನೀಡುವ ಉತ್ತರ ಎಂಥದು ಎನ್ನುವುದು ಮೊನ್ನೆ ಬೆಂಗಳೂರಿನ ಘಟನೆ ನಮಗೆ ಅರ್ಥ ಮಾಡಿಸಿದೆ. ಆದರೆ ಇಂದು ದೇಶವನ್ನು ಆಳಬೇಕು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ದೊಡ್ಡ ದೊಡ್ಡ ಕನಸು ಹೊತ್ತಿರುವ ದಡ್ಡ ಶಿಖಾಮಣಿಗಳು ಪದೇ ಪದೇ ಸಾವರ್ಕರ ಹೆಸರನ್ನು ಎಳೆದು ತರುವುದು ಏಕೋ ಗೊತ್ತಾಗುತ್ತಿಲ್ಲ. ನಾಲಿಗೆ ಒಳ್ಳೇಯದಾದರೆ ನಾಡೆಲ್ಲ ಒಳ್ಳೆಯದು ಎನ್ನುವ ಗಾದೆಯನ್ನು ಕೇಳಿ ಬೆಳೆದವರು ನಾವೆಲ್ಲ. ಆದರೆ ಇಂದು ಸಾವರ್ಕರ ಅವರನ್ನು ದೇಶದ್ರೋಹಿ ಎನ್ನುವ ಮಟ್ಟದಲ್ಲಿ ಬಿಂಬಿಸಿ ಮಾತನಾಡುವ ಜನಗಳ ನಾಲಿಗೆಗೆ ಏನೆನ್ನಬೇಕೋ ಅರ್ಥವಾಗುತ್ತಿಲ್ಲ. ಸ್ವಾತಂತ್ರ್ಯ ಹೋರಾಟ ಎನ್ನುವುದನ್ನು ತಮ್ಮ ಪಕ್ಷವೇ ಗುತ್ತಿಗೆ ಪಡೆದಿದೆ ಏನೋ ಎನ್ನುವ ಮಟ್ಟದಲ್ಲಿ ಮಾತನಾಡುವ ರಾಜಕಾರಣಿಗಳು ಬೇರೊಬ್ಬರು ಹೀರೋ ಆಗುವುದನ್ನು ಸಹಿಸುವುದಿಲ್ಲ. ಆ ಕಾರಣಕ್ಕಾಗಿಯೇ ಇಂದು ಸಾವರ್ಕರ ಅವರನ್ನು ವಿಲನ್ ರೀತಿ ಬಿಂಬಿಸುತ್ತಾರೆ. ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಬ್ರಿಟೀಷರಿಂದ ಪಿಂಚಣಿ ಪಡೆದ ಹೇಡಿ ಎಂದು ಜರಿಯುವ ಕೆಲವು ಜನಗಳಿಗೆ ಗೊತ್ತಿದೆಯೋ ಇಲ್ಲವೋ ಸ್ವಾತಂತ್ರ್ಯ ನಂತರದಲ್ಲಿ ವಿಸರ್ಜನೆಯಾಗಬೇಕಾದ ಪಕ್ಷವನ್ನು ಹಾಗೆ ಮುಂದುವರಿಸಿಕೊಂಡು ಅಧೀಕಾರದ ಅಮಲಿನಲ್ಲಿ ತೇಲಾಡಿದವರು ಅಂದು ಬ್ರಿಟೀಷರ ಜೊತೆ ಹೇಗೆ ನಡೆದುಕೊಂಡರು ಎನ್ನುವುದಕ್ಕೆ ಇತಿಹಾಸದ ಪುಟಗಳೇ ಸಾಕ್ಷ್ಯ ನೀಡುತ್ತವೆ. ಆದರೂ ಕೂಡ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೇರೊಬ್ಬರ ಮನೆಗೆ ಕಲ್ಲು ಎಸೆಯುವ ಕಾರ್ಯ ಮಾಡುವುದು ಏತಕ್ಕೆ? ಎನ್ನುವುದೇ ಒಂದು ಯಕ್ಷ್ಯ ಪ್ರಶ್ನೆಯಾಗಿ ನನ್ನನ್ನು ಕಾಡುತ್ತಿದೆ. ಅಷ್ಟಕ್ಕೂ ಸಾವರ್ಕರ್ ಎನ್ನುವುದು ಇಂದು ಇತಿಹಾಸದ ಪುಟದಲ್ಲಿ ಅಮರವಾದ ಕಥೆ. ಆದರೆ ವಾಸ್ತವದಲ್ಲಿ ಅವರನ್ನು ಬೈಯುವುದರಿಂದ, ಹೀಯಾಳಿಸುವುದರಿಂದ ಬರುವ ಲಾಭವಾದರು ಏನು? ಅಬ್ಬಬ್ಬಾ ಎಂದರೆ ಬೈಯುವವರ ಮನಸ್ಥಿತಿಯನ್ನು ಹೋಲುವ ಜನಗಳಿಂದ ನಾಲ್ಕು ಚಪ್ಪಾಳೆ ಬರಬಹುದೇ ಹೊರತು ಬೇರೇನು ಲಾಭವಿಲ್ಲ. ಆದರೂ ಇವರ ಹೇಯ ರಾಜಕೀಯಕ್ಕೆ ಧಿಮಂತರು ಬಲಿಯಾಗಬೇಕಾಗಿರುವುದು ಈ ದೇಶದ ದೌರ್ಭಾಗ್ಯ.
ಒಂದು ಪಕ್ಷದವರು ಸಾವರ್ಕರ್ ಅವರನ್ನು ಅಭಿಮಾನಿಸುತ್ತಾರೆ. ಮತ್ತೊಂದು ಪಕ್ಷದವರು ಅವರನ್ನು ಅವಮಾನಿಸುತ್ತಾರೆ. ಒಂದು ಪಕ್ಷಕ್ಕೆ ಅವರೆಂದರೆ ದೇವರು. ಮತ್ತೊಂದು ಪಕ್ಷಕ್ಕೆ ಅವರೆಂದರೆ ದೇಶದ್ರೋಹಿ. ಆದರೆ ನಿಜಕ್ಕೂ ಇವರೀರ್ವರ ಮಧ್ಯದಲ್ಲಿ ಸಾವರ್ಕರ ಪ್ರಚಾರದ ವಸ್ತುವಾಗಿದ್ದು ಮಾತ್ರ ಸಾವರ್ಕರ ಅವರ ದೌರ್ಭಾಗ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಎರಡೆರಡು ಜೀವಾವಧಿ ಶಿಕ್ಷೆ ಅನುಭವಿಸಿ, ಕಾಲಾಪಾನಿ ಶಿಕ್ಷೆಯಿಂದಾಗಿ ಅಂಡಮಾನ್ ದ್ವೀಪದಲ್ಲಿ ಪಡಬಾರದ ಪಡಿಪಾಟಲು ಪಟ್ಟವರಿವರು. ಅಲ್ಲಿ ಅವರು ಪಟ್ಟ ಕಷ್ಟ ಇಲ್ಲಿ ಇಂದು ಅಧಿಕಾರದ ಆಸೆಗಾಗಿ ಬಾಯಿ ಚಪ್ಪಾರಿಸುತ್ತ ನಾಲಿಗೆ ಸಾರಿಸುವ ಜನಗಳಿಗೇನು ಗೊತ್ತಿದೆ ಹೇಳಿ? ಅದಕ್ಕೆ ಬಾಯಿಗೆ ಬಂದಂತೆ ಹರಟುತ್ತಾರೆ. ಇವರು ಹೇಳಿಕೊಂಡು ತಿರುಗುವುದರಿಂದ ಯುವ ಜನರ ಮನಸ್ಸಿನ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಎನ್ನುವುದು ಇವರಿಗೆ ಗೊತ್ತಿಲ್ಲ. ಸುಮ್ಮನೆ ಮಾತನಾಡಿ ಹೊರಟು ಬಿಡುತ್ತಾರೆ. ಹೀಗಾದರೆ ಹೇಗೆ?ಚುನಾವಣಾ ಪ್ರಚಾರಕ್ಕೆ ತಾವು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಇವರ ಬಳಿ ಅಂಥ ಯಾವ ಉದಾಹರಣೆಗಳು ಇಲ್ಲ. ಮತ್ತೆ ಹೇಗಾದರೂ ಮಾಡಿ ಸುದ್ದಿಯಲ್ಲಿರಬೇಕೆನಿಸಿದರೆ ಇಂಥದೇ ಕಾರ್ಯ ಮಾಡಬೇಕಲ್ಲವೇ? ಜನಗಳ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ ಸಾವರ್ಕರ್, ಟಿಪ್ಪು, ಕೆಂಪೇಗೌಡ, ಶಿವಾಜಿ, ರಾಯಣ್ಣನಂತವರ ಹೆಸರುಗಳು ಬೇಕು. ಇವರೆಲ್ಲ ಜೀವಂತವಾಗಿಲ್ಲ. ಅವರ ಹೋರಾಟದ ಹಾದಿ ಇವರಿಗೆ ಬೇಕಿಲ್ಲ. ಇನ್ನು ಇವರ ತ್ಯಾಗ ಇವರಿಗೆ ಗೊತ್ತೇ ಇಲ್ಲ. ಆ ಕಾರಣಕ್ಕಾಗಿಯೇ ಇವರ ಹೆಸರನ್ನು ಮುಂದೆ ಮಾಡಿಕೊಂಡು ಮೇಜುಕುಟ್ಟಿ ಭಾಷಣ ಮಾಡಿ ಗೆದ್ದು ಬೀಗುವ ಹುನ್ನಾರವನ್ನು ನೋಡಿದಾಗ ಅಚ್ಛರಿಯಾಗುತ್ತದೆ. ಅತ್ತ ಸಾವರ್ಕರ ಹೆಸರು ಮುನ್ನೆಲೆಗೆ ಬರುತ್ತಲೇ ಇತ್ತ ನೆಹರು ಎದ್ದು ಬರುತ್ತಾರೆ. ವಿಚಿತ್ರ ಹೇಗಿದೆ ಎಂದರೆ ಅವರು ಹಾಗೆ ಮಾಡಿದರು ಹೀಗೆ ಮಾಡಿದರು ಎಂದು ಬೊಬ್ಬೆಹಾಕುವ ಮುನ್ನ ಆಲೋಚನೆ ಮಾಡಿ ನೋಡಿ ನಾವೇನು ಮಾಡುತ್ತಿದ್ದೇವೆ? ಏಕೆಂದರೆ ಅವರು ತಪ್ಪು ಮಾಡಿದ್ದಾರೋ ಬಿಟ್ಟಿದ್ದಾರೋ ಅದು ಮುಗಿದು ಹೋದ ಕಥೆ. ಹೌದೇನಪ್ಪ ನೀವು ತಪ್ಪು ಮಾಡಿದ್ದೀರಾ? ನಿಜಕ್ಕೂ ಈ ತಪ್ಪಿನಲ್ಲಿ ತಮ್ಮ ಪಾತ್ರವಿದೆಯೇ? ಎಂದು ತಡೆದು ಕೇಳುತ್ತೇವೆ ಎನ್ನುವುದಕ್ಕೆ ಆ ವ್ಯಕ್ತಿಗಳೇ ಇಲ್ಲ. ಅಂದ ಮೇಲೆ ಅವರ ಹೆಸರಿನಲ್ಲಿ ರಾಜಕೀಯ ಮಾಡುವುದರಲ್ಲಿಯೂ ಅರ್ಥವಿಲ್ಲ. ನೆಹರು ಅವರನ್ನು ಒಂದು ಪಕ್ಷ ಹಣಿಯುತ್ತದೆ. ಅದೇ ನೆಹರು ಅವರನ್ನು ಒಂದು ಪಕ್ಷ ಆದರ್ಶ ಎನ್ನುವಂತೆ ಬಿಂಬಿಸುತ್ತದೆ. ದೇಶ ವಿಭಜನೆಯ ದುರಂತದಲ್ಲಿ ನೆಹರು ಪಾತ್ರ ದೊಡ್ಟದಿದೆ ಎಂದು ಬೈಯುವ ನಾವುಗಳು ಎರಡನೇ ಜಾಗತಿಕ ಮಹಾ ಸಮರದ ನಂತರ ಜಗತ್ತು ಎರಡು ಬಣವಾಗಿ ಒಡೆಯಿತು. ಆ ಸಂದರ್ಭದಲ್ಲಿ ನೆಹರು ಹುಟ್ಟು ಹಾಕಿದ ಆಲಿಪ್ತ ನೀತಿಯಿಂದಾಗಿ ವಿದೇಶಾಂಗ ನೀತಿಯ ಪಿತಾಮಹನೆಂಬ ಕೀರ್ತಿಗೆ ಪಾತ್ರರಾಗುತ್ತಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಂದರೆ ದೀಪದ ಕೆಳಗೆ ಕತ್ತಲಿರುತ್ತದೆ, ಆದರೆ ಕತ್ತಲನ್ನೇ ಗಮನಿಸುತ್ತಾ ಕುಳಿತರೆ ಬದುಕು ನಡೆಯುತ್ತದೆಯೇ ಹೇಳಿ? ರಾಜ್ಯದಲ್ಲಿ ಪದೇ ಪದೇ ಟಿಪ್ಪು ಹೆಸರು ಪ್ರಸ್ತಾಪವಾಗುತ್ತದೆ. ಹೋರಾಟ, ಹಾರಾಟ, ಚೀರಾಟಗಳು ಪ್ರಾರಂಭವಾಗುತ್ತವೆ. ಒಬ್ಬರು ಅವನನ್ನು ಮತಾಂದನೆನ್ನುತ್ತಾರೆ ಮತ್ತೆ ಕೆಲವರು ಅವನನ್ನು ಜಾತ್ಯತೀತ ದೊರೆ ಎಂದು ಬಿಂಬಿಸುತ್ತಾರೆ. ಒಬ್ಬರು ಅವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುತ್ತಾರೆ ಮತ್ತೆ ಕೆಲವರು ಅವನನ್ನು ಸ್ವಹಿತ ಸಾಧಕ ಎಂದು ಕರೆಯುತ್ತಾರ. ಆದರೆ ಈ ಎರಡೂ ರೀತಿಯ ಹೊಗಳಿಕೆ ಮತ್ತು ಆಪಾದನೆಗಳಿಗೂ ಇತಿಹಾಸ ಸಾಕ್ಷಿಯಾಗುತ್ತದೆಯೇ ಹೊರತು ನಾವುಗಳಲ್ಲ. ಮೇಲಾಗಿ ಇವುಗಳನ್ನು ಮುಂದಿಟ್ಟುಕೊಂಡು ವಿವಾದ ಮಾಡಿಕೊಳ್ಳುವುದರಿಂದ ಟಿಪ್ಪು ಎದ್ದು ಬರುವುದಿಲ್ಲ. ಇತಿಹಾಸ ಬದಲಾಗುವುದಿಲ್ಲ. ಆದರೂ ಏಕೆ ನಮ್ಮ ಅಧಿಕಾರದ ತೆವಲಿಗೆ ಅನ್ಯರ ನೆಮ್ಮದಿ ಹಾಳು ಮಾಡುವುದು?
ಹಿಂದಾಗಿದ್ದನ್ನು ನಮ್ಮಿಂದ ಬದಲಿಸುವುದಕ್ಕೆ ಸಾಧ್ಯವಾಗುವುದಾದರೆ ಮಾತನಾಡುವುದಕ್ಕೆ ಒಂದು ಅರ್ಥವಿರುತ್ತಿತ್ತು. ಅಥವಾ ಹಿಂದೆ ನಡೆದ ತಪ್ಪು ಒಪ್ಪುಗಳನ್ನು ತಿದ್ದುವುದಕ್ಕೆ ಅಥವಾ ಸಮರ್ಥನೆ ಮಾಡಿಳ್ಳುವದಕ್ಕೆ ಆ ವ್ಯಕ್ತಿಗಳು ಬರುತ್ತಿದ್ದರೆ ಭಾಷಣ ಬಿಗಿಯುವುದಕ್ಕೂ ಅರ್ಥವಿರುತ್ತಿತ್ತು. ಆದರೆ ಅದ್ಯಾವುದು ಅಸಾಧ್ಯ ಎಂದ ಮೇಲೆ ಮಾತನಾಡಿ, ವಿವಾದ ಮಾಡಿ, ನೆಮ್ಮದಿ ಹಾಳು ಮಾಡಿದರೆ ಏನು ಬರುತ್ತದೆ ಹೇಳಿ? ಇಂದು ಇತಿಹಾಸದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುತ್ತ ನಡೆದರೆ ಮುಂದಿನ ಸರಿ ದಾರಿ ಕಂಡುಕೊಳ್ಳುವುದಕ್ಕೆ ಎಲ್ಲಿ ಸಾಧ್ಯವಾಗುತ್ತದೆ ಹೇಳಿ? ಅಂದು ದೇಶವಿಭಜನೆಯ ಸಂದರ್ಭದಲ್ಲಿ, ಕಾಶ್ಮೀರದ ಹೋರಾಟದ ಸಂದರ್ಭದಲ್ಲಿ, ಚೀನಾ ಯುದ್ಧದ ಸಂದರ್ಭದಲ್ಲಿ ತೆಗೆದುಕೊಂಡ ಎಷ್ಟೋ ತಪ್ಪು ನಿರ್ಧಾರಗಳು ಇಂದು ಮಗ್ಗಲು ಮುಳ್ಳಾಗಿ ಕಾಡುತ್ತಿವೆ. ಹಾಗೆಂದು ಅದನ್ನೇ ಹೇಳಿಕೊಂಡು ಬದುಕಿದರೆ ಹೇಗೆ? ತಪ್ಪುಗಳನ್ನು ಸರಿ ಮಾಡುವುದಕ್ಕೆ ಅವಕಾಶ ಇದ್ದರೆ ಅದನ್ನು ಸರಿ ಮಾಡಿ. ಹಿಂದೆ ಏನಾಯಿತು ಎನ್ನುವುದನ್ನು ಬಿಟ್ಟು ಮುಂದಿನದನ್ನು ನೋಡುವುದು ಬದುಕು ಎನ್ನುವುದನ್ನು ನಮ್ಮವರೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲವೋ ಗೊತ್ತಾಗುತ್ತಿಲ್ಲ. ಇವರು ಇಂದಿಗೂ ಕೂಡ ಬರೀ ಹಿಂದಿನವರ ತಪ್ಪುಗಳನ್ನು ಎತ್ತಿ ಆಡುತ್ತ ಸಾಗುವುದನ್ನು ನೋಡಿದರೆ, ಅದು ಅಂಥ ಪಕ್ಷ, ಇದು ಇಂಥ ಪಕ್ಷ, ನಮ್ಮದು ಸ್ವಾತಂತ್ರ್ಯ ಹೋರಾಟಗಾರರ ಪಕ್ಷ, ಅವರದು ಕೋಮುವಾದಿಗಳ ಪಕ್ಷ ಎಂದು ಹೇಳಿಕೊಂಡು ಹೊರಡುವುದನ್ನು ನೋಡಿದಾಗ ಇವರಿಂದ ನಾವೇನು ನೀರೀಕ್ಷಿಸುವುದಕ್ಕೆ ಸಾಧ್ಯವಾಗುತ್ತದೆ ಅಲ್ಲವೆ? ಇವರ ಅಭಿಪ್ರಾಯವನ್ನು ನೋಡುತ್ತ ಸಾಗಿದಾಗ ಒಬ್ಬರ ಮೈ ಮೇಲಿನ ಬಟ್ಟೆಯನ್ನು ಇನ್ನೊಬ್ಬರು ಹರಿದು ಬಿಸಾಕುತ್ತ ಸ್ವಯಂ ಬೆತ್ತಾಲಾಗುತ್ತಿದ್ದಾರೇನೊ ಅನ್ನಿಸುತ್ತದೆ. ಹೀಗೆ ಬರೀ ಸತ್ತವರನ್ನು ಬೈಯುವುದರಲ್ಲಿಯೇ ಬದುಕು ಮುಗಿಸಿದರೆ ಹೇಗೆ? ಇರುವಾಗ ಅವರು ಸಾಕಷ್ಟು ದೇಶಕ್ಕಾಗಿ ದುಡಿದಿದ್ದಾರೆ. ನಾವುಗಳು ಇರುವಾಗ ಏನು ಮಾಡದೇ ಇದ್ದರೂ ಸತ್ತವರ ಹೆಸರನ್ನು ಎತ್ತಿಕೊಂಡು ಮಾತನಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಂದೆ ಭವಿಷ್ಯವಿದೆ. ಅದು ಚನ್ನಾಗಿ ಇರಬೇಕು ಎನ್ನುವುದಾದರೆ ವಾಸ್ತವವನ್ನು ಸಹ ಚನ್ನಾಗಿ ಇಟ್ಟುಕೊಳ್ಳಬೇಕು. ಬರೀ ಇಂಥಹ ಹೇಳಿಕೆಗಳಲ್ಲಿಯೇ ಬದುಕು ಸಾಗಿಸಿದರೆ ಮುಂದೆ ಯಾರಿಂದಲೂ ಏನನ್ನೂ ನೀರೀಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದಂತೂ ನೂರಕ್ಕೆ ನೂರು ಸತ್ಯವಾದ ಮಾತು. ಬದಲಾಗಬೇಕು. ಬದಲಾಯಿಸಬೇಕು. ಇಲ್ಲದೇ ಹೋದಲ್ಲಿ ಅವರ ಹೆಸರನ್ನು ಹಿಡಿದು ಬೈಯುವುದಕ್ಕೆ ನೀವಿದ್ದೀರಿ. ಮುಂದೆ ನಿಮ್ಮ ಹೆಸರು ಹಿಡಿದು ಬೈಯ್ಯುವುದಕ್ಕೆ ಲಕ್ಷಾಂತರ ಜನ ಹುಟ್ಟಿಕೊಳ್ಳುತ್ತಾರೆ. ನೆನಪಿರಲಿ.
- * * * -