ಕಾಲೇಶ್ವರಂ ಏತ ನೀರಾವರಿ ಹರಿಹಾರ ಪ್ರಕಾಶ್ ರಾವ್ ವೀರಮಲ್ಲ ಅವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ

ಬೆಂಗಳೂರು, ಜ.8 ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಿಂದ ಜ.14ರ ಸಂಕ್ರಾಂತಿ ಹಬ್ಬದಂದು 2020ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ ಕೃಷಿಗೆ ಪೂರಕವಾಗಿ ಕೆಲಸ ಮಾಡಿದವರಿಗೆ 2011ರಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಸಲಹೆ ಮೇರೆಗೆ ಕೃಷಿ ಹೆಸರಿನಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ವಿಶ್ವದ ಅತಿದೊಡ್ಡ ಕಾಲೇಶ್ವರಂ ಏತ ನೀರಾವರಿ ಯೋಜನೆಯ ಹರಿಕಾರ ಎಂದೇ ಹೆಸರಾಗಿರುವ ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್ ರಾವ್ ವೀರಮಲ್ಲ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ಪ್ರಶಸ್ತಿಯು ಒಂದು ಲಕ್ಷ ರೂ.ನಗದು ಹಾಗೂ ತಾಮ್ರ ಸ್ಮರಣಿಕೆಯನ್ನೊಳಗೊಂಡಿದೆ. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಗ್ರ ನೀರಾವರಿಗೆ ಒತ್ತಾಯಿಸಿ ಬೃಹತ್ ರೈತ ದುಂಡು ಮೇಜಿನ ಸಭೆ ಹಾಗೂ ಹತ್ತನೇ ಬಸವ ಕೃಷಿ, ಸಂಕ್ರಾಂತಿ, ಕಾರ್ಯಕ್ರಮ ನಡೆಸಲಾಗುವುದು. ಇದೇ ದಿನದಂದು ಗ್ಲೋಬಲ್ ಬಸವ ಪೀಸ್ ಸೆಂಟರ್ ಸ್ಥಾಪನೆ ಮಾಡಿ, ಇದರ ಮೂಲಕ ಬಸವ ತತ್ವಗಳನ್ನು ಜಾಗತಿಕವಾಗಿ ಪ್ರಚಾರ ಮಾಡಲಾಗುವುದು ಎಂದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ ಮೀಸಲಿಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕವನ್ನು ನೀರಾವರಿ ಯೋಜನೆಗೆ ಒಳಪಡಿಸುವ ಸಂಕಲ್ಪ ಮಾಡಲು ಹೋರಾಟದ ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಶಿಧರ್ ಹೆಬ್ಬಾಳ, ಅಪ್ಪಾಜಿ ಸಾಹೇಬ್ ಯತ್ನಾಳ್, ಡಾ.ಸಂಗಮೇಶ್, ರೈತ ಮುಖಂಡ ಸಂಜೀವ್ ರಾಜ್ ಪಾಟೀಲ್ ಮತ್ತಿತರರಿದ್ದರು.