ನವದೆಹಲಿ, ಜ 9, ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೊನೆಗೂ 'ಕಾಫಿ ವಿತ್ ಕರಣ್' ವಿವಾದದ ಬಗ್ಗೆ ಮಾತನಾಡಿದ್ದು, ಓರ್ವ ಕ್ರಿಕೆಟಿಗನಾಗಿ ಇಂತಹ ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.ಖಾಸಗಿ ಟಿವಿ ಚಾನೆಲ್‌ವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಇದರಿಂದ ಅವರು ತಾತ್ಕಾಲಿಕ ನಿಷೇಧಕ್ಕೂ ಒಳಗಾಗಿ ನಂತರ, ಇವರ ಮೇಲೆ ಬಿಸಿಸಿಐ ದಂಡ ವಿಧಿಸಿತ್ತು."ನಾವು ಕ್ರಿಕೆಟಿಗರಾಗಿ ಮುಂದೇನು ನಡೆಯಲಿದೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಚೆಂಡು ನನ್ನ ಅಂಗಳದಲ್ಲಿಲ್ಲ. ಅದು ಬೇರೊಬ್ಬರ ಬಳಿಯಿದ್ದು, ಅವರೇ ಶಾಟ್ ಹೊಡೆಯಬೇಕಿತ್ತು. ಅಂದು ನಾವು ಬಯಸದ ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ" ಎಂದರು.
ಆ ಘಟನೆ ಬಳಿಕ ಹಾರ್ದಿಕ್ ಪಾಂಡ್ಯ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ, ಪದೇ-ಪದ ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬೆನ್ನು ನೋವಿಗೊಳಗಾಗಿರುವ ಹಾರ್ದಿಕ್ ಪಾಂಡ್ಯ ಶಸ್ತ್ರ ಚಿಕಿತ್ಸೆಗೊಳಗಾದರು. ಇದೀಗ ಪುನಶ್ಚೇತನ ಹಂತದಲ್ಲಿರುವ ಅವರು, ಕಮ್‌ಬ್ಯಾಕ್ ಮಾಡುವ ಹಾದಿಯಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ," ಪ್ರತಿ ಬಾರಿಯೂ ಇಂತಹ ಪರಿಸ್ಥಿತಿಗಳು ಎದುರಾದಾಗ ಕಮ್ ಬ್ಯಾಕ್ ಮಾಡಲು ಸಾಧ್ಯವಾಗಿರುವುದು ನನ್ನ ಅದೃಷ್ಟವಾಗಿದೆ. ಮಗದೊಂದು ಬಾರಿ ಪುನರಾಗಮನವನ್ನು ಎದುರು ನೋಡುತ್ತಿರುವುದಾಗಿ," ತಿಳಿಸಿದರು.ಮುಂಬರುವ ನ್ಯೂಜಿಲೆಂಡ್ ಸರಣಿಗೆ ಪಾಂಡ್ಯ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಭಾರತ ಎ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಪಾಂಡ್ಯ, ನ್ಯೂಜಿಲೆಂಡ್ ಎ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಪಾಲಿಗೆ ಫಿಟ್ನೆಸ್ ಪರೀಕ್ಷೆಯಾಗಿರಲಿದೆ.