ಮುಂಬೈ, 20 : "ಕಾಫಿ ವಿಥ್ ಕರನ್" ಟಿವಿ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಭಾರತ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಂಬುಡ್ಸ್‌ಮನ್ ಡಿ.ಕೆ ಜೈನ್ ಅವರು 20 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಕರ್ತವ್ಯ ನಿರತ ಸಂಸತ್ ಅರೆಸೇನಾ ಪಡೆಯ 10 ಕಾನ್‌ಸ್ಟೇಬಲ್‌ಗಳ ವಿಧವೆಯರಿಗೆ ತಲಾ ಒಂದು ಲಕ್ಷವನ್ನು ಇಬ್ಬರೂ ನೀಡಬೇಕು. ಜತೆಗೆ. ಅಂಧರ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ ಅಂಧರ ಕ್ರಿಕೆಟ್ ಅಸೋಸಿಯೇಷನ್‌ಗೆ ಇಬ್ಬರೂ ತಲಾ 10 ಲಕ್ಷ ರೂ. ಗಳನ್ನು ನಾಲ್ಕು ವಾರಗಳ ಒಳಗಾಗಿ ನೀಡಬೇಕು ಎಂದು ಅವರು ಜೈನ್ ನಿರ್ದೇಶನ ನೀಡಿದ್ದಾರೆ.
ಒಂದು ವೇಳೆ ಇವರಿಬ್ಬರೂ ನಾಲ್ಕು ವಾರಗಳ ಒಳಗಾಗಿ 20 ಲಕ್ಷ ದಂಡ ಪಾವತಿಸುವಲ್ಲಿ ವಿಫಲವಾದಲ್ಲಿ ಆ ಆಟಗಾರರ ಪಂದ್ಯದ ಸಂಭಾವನೆಯಲ್ಲಿ ಕಡಿತಗೊಳಿಸಲಾಗುತ್ತದೆ. ಈ ವಿವಾದ ಉಂಟಾದ ಬೆನ್ನಲ್ಲೆ ಆಸ್ಟ್ರೇಲಿಯಾ ಪ್ರವಾಸದಿಂದ ನಿಗದಿತ ಓವರ್‌ಗಳ ಸರಣಿಯಿಂದ ತವರಿಗೆ ಮರಳಿದ್ದರಿಂದ ಹಾರ್ದಿಕ್ ಹಾಗೂ ರಾಹುಲ್ ಅವರರು ಈಗಾಗಲೇ 30 ಲಕ್ಷ ರೂ. ಪಂದ್ಯದ ಸಂಭಾವನೆ ಕಳೆದುಕೊಂಡಿದ್ದಾರೆ. ದೇಶದ ಎಲ್ಲರಿಗೂ ಕ್ರಿಕೆಟಿಗರು ಮಾದರಿ. ಹಾಗಾಗಿ, ತಾವು ಮಾತು ಹಾಗೂ ವರ್ತನೆ ಬಹಳ ಎಚ್ಚರಿಕೆಯಿಂದ ಕೂಡಿರಬೇಕು ಎಂದು ಅವರು ಹೇಳಿದರು.
ಜನವರಿ ಮೊದಲ ವಾರದಲ್ಲಿ ನಡೆದಿದ್ದ 'ಕಾಫಿ ವಿಥ್ ಕರಣ್' ಟಿವಿ ಶೋನಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಭಾಗವಹಿಸಿದ್ದರು. ಈ ಟಿವಿ ಶೋ ನಲ್ಲಿ ಇವರಿಬ್ಬರು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗಾಗಿ, ಅವರನ್ನು ಕೆಲವು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. ನಂತರ ಇವರಿಬ್ಬರು ಕ್ಷಮೆ ಕೋರಿದ್ದರು.
ಈ ಪ್ರಕರಣ ಇತ್ಯರ್ಥ ಪಡಿಸಲು ಬಿಸಿಸಿಐ, ಒಂಬುಡ್ಸಮನ್ ಆಗಿ ಡಿ.ಕೆ ಜೈನ್ ಅವರಿಗೆ ಹೆಗಲಿಗೆ ನೀಡಲಾಗಿತ್ತು. ಅದರಂತೆ ಇವರಿಬ್ಬರನ್ನೂ ಕರೆದು ವಿಚಾರಣೆ ನಡೆಸಿದ್ದ ಡಿ.ಕೆ ಜೈನ್ ಇಂದು ತಲಾ 20 ಲಕ್ಷ ದಂಡ ವಿಧಿಸಿದ್ದಾರೆ. ಹಾರ್ದಿಕ್ ಹಾಗೂ ರಾಹುಲ್ ಇಬ್ಬರು ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಮೇ 30 ರಂದು ಇಂಗ್ಲೆಂಡ್‌ನಲ್ಲಿ ಮಹತ್ವದ ಟೂರ್ನಿಗೆ ಯಾವುದೇ ಕಳಂಕವಿಲ್ಲದೆ ಇವರಿಬ್ಬರು ಭಾಗವಹಿಸಲಿ ಎಂಬ ಉದ್ದೇಶದಿಂದ ಈ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ ಎಂದು ಎಂದು ಹೇಳಬಹುದು.