ಹಗರಿಬೊಮ್ಮನಹಳ್ಳಿ: ನೀರಾವರಿ ಯೋಜನೆಗಾಗಿ 18 ಕಿ.ಮೀ.ಪಾದಯಾತ್ರೆ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 29: ತಾಲೂಕಿನ ತಂಬ್ರಹಳ್ಳಿಯ ರೈತರು ಸೇರಿದಂತೆ ನೆರೆ ಹೊರೆಯ ರೈತರು ತಂಬ್ರಹಳ್ಳಿ ಗ್ರಾಮದಿಂದ ಹಗರಿಬೊಮ್ಮನಹಳ್ಳಿಗೆ 18ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಎರಡನೇ ಹಂತದ ಏತನೀರಾವರಿ ಯೋಜನೆಯ ಮಂಜೂರಾತಿಗಾಗಿ ಒತ್ತಾಯಿಸಿ ಶಾಸಕ ಭೀಮಾನಾಯ್ಕ್ ಹಾಗೂ ತಾಹಶೀಲ್ದಾರರ ಮೂಲಕ ಸಣ್ಣ ನೀರಾವರಿ ಸಚಿವರಿಗೆ ಮನವಿಯನ್ನು ನೀಡಿದರು.

ಈ ಸಂಧರ್ಭದಲ್ಲಿ ಏತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳು 1952ರಲ್ಲಿ ತುಂಗಭದ್ರ ಆಣೆಕಟ್ಟು ನಿರ್ಮಿಸುವ ಸಲುವಾಗಿ ಹೊಲಮನೆಗಳನ್ನು ಕಳೆದುಕೊಂಡು ಪುನರ್ವಸತಿ ನಿವಾಸಿಗಳಗಿ  ಜೀವನ ನಡೆಸುತ್ತಿದ್ದೆವೆ,1957ರಲ್ಲಿ ತಂಬ್ರಹಳ್ಳಿ ಏತನೀರಾವರಿ ಯೋಜನೆಯು 3000 ಎಕರೆ ಭೂ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ ಪ್ರಾರಂಭಿಸಲಾಯಿತು ಆದರೆ ಸದ್ಯ 1200ಎಕರೆ ಭೂಪ್ರದೇಶಕ್ಕೆ ಮಾತ್ರ ಉಪಯೋಗವಾಗಿದೆ, ತುಂಗಭದ್ರ ನದಿ ಹತ್ತಿರವಿದ್ದರೂ ಶೇಕಡ 30ಪ್ರಮಾಣದಷ್ಟು ಪ್ರಯೋಜನ ಇಲ್ಲದಂತಾಗಿದೆ ಕೂಡಲೇ ಸಂಭಂಧಿಸಿದ ಸಚಿವರು ಇತ್ತ ಗಮನ ಹರಿಸಿ ಹಾಲಿಯಿರುವ ಏತ ನೀರಾವರಿ ಯೋಜನೆಯಲ್ಲಿ ವಂಚಿತಗೊಂಡಿರುವ 1800 ಎಕರೆ ಭೂಪ್ರದೇಶಕ್ಕೆ ಎರಡನೇ ಹಂತದ ನೀರಾವರಿ ಯೋಜನೆ ರೂಪಿಸುವಂತೆ ಮನವಿ ಮಾಡಿದರು.

ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಆಶಪ್ಪ ಪೂಜಾರ ಮಾತನಾಡಿ ತಂಬ್ರಹಳ್ಳಿ ಗ್ರಾಮ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹೊಂದಿಕೊಂಡ 1800ಎಕರೆ ಭೂ ಪ್ರದೇಶಕ್ಕೆ ಸಂಬಂಧಸಿದಂತೆ ನೀರಿನ ಸಮಸ್ಯೆಯ ಬಗ್ಗೆ ನೀಡಿದ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ತಂಬ್ರಹಳ್ಳಿ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ರೈತರು, ಸ್ತ್ರೀ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಇನ್ನು ಮುಂತಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.