ಫಾರೂಕ್ ಅಬ್ದುಲ್ಲಾ ಗೃಹ ಬಂಧನ ರದ್ದು ಶ್ರೀನಗರ, ಮಾ ೧೩ (ಯುಎನ್ಐ) ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಗೃಹ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ಹಿಂಪಡೆದಿದೆ. ಬಂಧನ ಹಿಂಪಡೆಯುವ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರಾಡಳಿತ ಪ್ರದೇಶದ ಯೋಜನಾ ಪ್ರಧಾನ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆ ೧೯೭೮ರ ಸೆಕ್ಷನ್ ೧೯(೧)ರಡಿ ಲಭ್ಯವಾಗಿರುವ ಅಧಿಕಾರ ಬಳಸಿ ಫಾರೂಕ್ ಅಬ್ದುಲ್ಲಾ ಅವರ ಗೃಹ ಬಂಧನ ಆದೇಶವನನ್ನು ರದ್ದುಪಡಿಸಿದೆ. ಈ ಸಂಬಂಧ ಶ್ರೀನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಸುಮಾರು ಏಳು ತಿಂಗಳುಗಳಿಂದ ಪಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು, ಸರ್ಕಾರದ ಮುಂದಿನ ಆದೇಶದಂತೆ ಅವರನ್ನು ಗೃಹ ಬಂಧನದಿಂದ ಬಿಡುಗಡೆಮಾಡಲಾಗುವುದು.ಕೇಂದ್ರ ಸರ್ಕಾರ ಕಳೆದ ವರ್ಷದ ಆಗಸ್ಟ್ ೫ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ವಿಧಿ ೩೭೦ ರದ್ದುಪಡಿಸಿ, ವ್ಯಾಪಕ ನಿರ್ಬಂಧಗಳನ್ನು ಜಾರಿಗೊಳಿಸಿದ ನಂತರ ಪುತ್ರ ಓಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕೀಯ ನಾಯಕರೊಂದಿಗೆ ೮೩ ವರ್ಷದ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.