ಸರ್ಕಾರದ ವಿರುದ್ಧ ಎಚ್.ಡಿ.ದೇವೇಗೌಡ ಬೇಸರ

ಬೆಂಗಳೂರು, ಅ 9:    ಪವಿತ್ರ ಆರ್ಥಿಕತೆ ಉಳಿವಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನ ಅವರನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸನ್ನ ನಾಲ್ಕೈದು ದಿನಗಳಿಂದ ಧರಣಿ ನಡೆಸುತ್ತಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ಸರ್ಕಾರ ಇತ್ತ ಗಮನವೇ ಹರಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸದುದ್ದೇಶಕ್ಕಾಗಿ ಧರಣಿ ಕೂತಿರುವವರ ಆರೋಗ್ಯವನ್ನೂ ವಿಚಾರಿಸದ ಇಂತಹ ನಿರ್ಲಕ್ಷ್ಯ ಸರ್ಕಾರವನ್ನು ತಾವು ಇದೂವರೆಗೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.  

ಸದನಗಳಿಂದ ಮಾಧ್ಯಮಗಳನ್ನು ದೂರ ಇಟ್ಟ ಸರ್ಕಾರದ ನಿರ್ಧಾರದ ವಿರುದ್ಧ ಗರಂ ಆದ ದೇವೇಗೌಡರು, ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರುದ್ಧ ಧೋರಣೆ ಎನ್ನಬಹುದೇ ವಿನಃ ಇದಕ್ಕಿಂತ  ಹೆಚ್ಚಿನದಾಗಿ ಏನೂ ತಮ್ಮಿಂದ ಹೇಳಲು ಸಾಧ್ಯವಿಲ್ಲ ಎಂದರು.