ಬೆಂಗಳೂರು, ಡಿ 17 : ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಎಫ್ಐಆರ್ ದಾಖಲಿಸುವಾಗ ಪೊಲೀಸ್ ಠಾಣೆ ವ್ಯಾಪ್ತಿ ಕೇಳದಂತೆ (ಝೀರೋ ಎಫ್ ಐ ಆರ್) ಎಲ್ಲ ಪೊಲೀಸ್ ಠಾಣೆಗಳಿಗೆ ನಿದರ್ೆಶಿಸುವಂತೆ ನೀಡಿದ್ದ ಆದೇಶ ಪಾಲಿಸದ ಪೊಲೀಸ್ ಮಹಾ ನಿದರ್ೆಶಕರಾದ ನೀಲಮಣಿ ರಾಜು ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.
ವಕೀಲರಾದ ಉಮಾಪತಿ ಎಸ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಿದ ನೀಲಮಣಿ ರಾಜು, ಈ ಸಂಬಂಧ ನ. 26ರಂದೇ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿದಂರಾಜು ನೇತೃತ್ವದ ವಿಭಾಗೀಯ ಪೀಠ ಪ್ರಕರಣವನ್ನು ಕೈಬಿಟ್ಟಿತು.
ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಪ್ರತಿ ತಮಗೆ ನ.19ರಂದು ದೊರಕಿತ್ತು. ಅದರಂತೆ ನಾವು ನ.26ರಂದು ಸುತ್ತೊಲೆ ಹೊರಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.
ಪ್ರತಿ ಪೊಲೀಸ್ ಠಾಣೆಯಲ್ಲೂ ತಮ್ಮ ವ್ಯಾಪ್ತಿಯನ್ನು ಮೀರಿದ ಪ್ರಕರಣಗಳ ಎಫ್ ಐಆರ್ ಕೂಡ ದಾಖಲಿಸಿಕೊಳ್ಳಬೇಕು ಮತ್ತು ನಂತರ ಅದನ್ನು ಸೂಕ್ತ ಪೊಲೀಸ್ ನಿಲ್ದಾಣಗಳಿಗೆ ವರ್ಗಾಯಿಸಬೇಕು. ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಅದನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.