ಬೆಂಗಳೂರು, ಜ 21, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೆಪಿಸಿಸಿಯಲ್ಲಿ ವಿಭಾಗವಾರು ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ. ಎಚ್ ಕೆ ಪಾಟೀಲ್, ನಾಲ್ಕು ಕಾರ್ಯಾಧ್ಯಕ್ಷ ಸ್ಥಾನಗಳ ಅವಶ್ಯಕತೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಾಲ್ಕು ಕಾರ್ಯಾಧ್ಯಕ್ಷ ಬೇಕು ಎಂದು ಹೇಳುತ್ತಿರುವುದು ಏಕೆ? ಪ್ರಸಕ್ತ ಇರುವ ಒಂದು ಕಾರ್ಯಾಧ್ಯಕ್ಷ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ವ್ಯವಸ್ಥೆಯನ್ನೇ ಮುಂದುವರೆಸಿದರೆ ಸಾಕು. ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಅವಶ್ಯಕತೆಯೇ ಇಲ್ಲ ಎಂದರು.ತಾವು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ ಎನ್ನುವುದನ್ನು ಒತ್ತಿ ಹೇಳಿದ ಅವರು, ವಿಪಕ್ಷ ನಾಯಕ ಮತ್ತು ಶಾಸಕಾಂಗ ನಾಯಕರ ಸ್ಥಾನ ಒಬ್ಬರಿಗೆ ಸಿಗುವುದು ಬೇಡ. ಎರಡು ಹುದ್ದೆಗಳು ಪ್ರತ್ಯೇಕವಾಗಲಿ. ಮೈತ್ರಿ ಸರ್ಕಾರದಲ್ಲಿ ಹುದ್ದೆ ವಿಭಾಗವಾಗಿತ್ತು. ಕೇಂದ್ರದಲ್ಲಿ ಯುಪಿಎ ಅವಧಿಯಲ್ಲಿ
ಸೋನಿಯಾ ಗಾಂಧಿ ಅವರನ್ನೂ ಸೇರಿದಂತೆ ಹುದ್ದೆ ಹಂಚಿಕೆ ಆಗಿತ್ತು. ಮಹಾರಾಷ್ಟ್ರದಲ್ಲೂ ಹಿಂದೆ ಶಾಸಕಾಂಗ ಮತ್ತು ವಿಪಕ್ಷ ಸ್ಥಾನ ಹಂಚಿಕೆ ಆಗಿತ್ತು.ಮಹಾರಾಷ್ಟ್ರ ಮತ್ತು ಯುಪಿಎ ಸರ್ಕಾರದ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಸ್ಥಾನ ಹಂಚಿಕೆ ಆಗಲಿ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ದೇಶಕ್ಕೆ ಒಂದೇ ಮಾದರಿ ಇರಬೇಕು ಎನ್ನುವ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ ವಿಚಾರ ವಾಗಿ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್ , ಅಧ್ಯಕ್ಷ ಸ್ಥಾನದ ಆಯ್ಕೆ ಈಗಾಗಲೇ ಬಹಳಷ್ಟು ವಿಳಂಬ ಆಗಿದೆ. ಪಕ್ಷದ ಹಿತದೃಷ್ಟಿಯಿಂದ ಅಧ್ಯಕ್ಷರ ಆಯ್ಕೆ ಮುಖ್ಯ. ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯ್ತಿ ಚುನಾವಣೆಗಳು ಎದುರಾಗುತ್ತಿರುವುದರಿಂದ ಪಕ್ಷ ಸಂಘಟನೆ ಬಹಳ ಮುಖ್ಯವಾಗಿದೆ. ಹೀಗಾಗಿ ಕೂಡಲೇ ಹೈಕಮಾಂಡ್ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದರು.