ಬೆಂಗಳೂರು ಜುಲೈ 8: ಎಚ್‌ಎಎಲ್‌ನ ನೋಡಲ್ ಕಲಿಕಾ ಕೇಂದ್ರವಾದ ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ (ಎಚ್‌ಎಂಎ) ಎಂಜಿನಿಯರಿಂಗ್, ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ನ ಹೊಸ ಪದವೀಧರರಿಗೆ ವಾಯುಯಾನ ಮತ್ತು ಉತ್ಪಾದನಾ ನಿರ್ವಹಣೆಯಲ್ಲಿ ಎರಡು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿದೆ.
ಎರಡು ವರ್ಷದ ಕೋರ್ಸ್ ಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮೋದನೆ ನೀಡಿದೆ.
ವೈಮಾನಾಂತರಿಕ್ಷ ಕ್ಷೇತ್ರಕ್ಕೆ ತರಬೇತಿ ಪಡೆದ ಮಾನವಶಕ್ತಿಯನ್ನು ಒದಗಿಸಲು ಅಪಾರ ಅನುಭವ ಮತ್ತು ಪರಿಣತಿಯನ್ನು ಬೆರೆಸುವ ನಿರ್ದಿಷ್ಟ ಕೋರ್ಸ್‌ಗಳನ್ನು ಎಚ್‌ಎಂಎ ರೂಪಿಸಿದೆ. ಈಗಾಗಲೇ, ಪರಿಣಿತರಿಗಾಗಿ ಕಳೆದ ಮೂರು ವರ್ಷಗಳಿಂದ ವಾಯುಯಾನ ನಿರ್ವಹಣೆಯಲ್ಲಿ ಕಾರ್ಯನಿರ್ವಾಹಕ ಸ್ನಾತಕೋತ್ತರ ಡಿಪ್ಲೊಮಾವನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಅಕಾಡೆಮಿಯು ಕಳೆದ 50 ವರ್ಷಗಳಿಂದ ವಾಯುಯಾನ ವೃತ್ತಿಪರರಿಗಾಗಿ ಏರೋಸ್ಪೇಸ್ ಟೆಕ್ನಾಲಜಿ ಮತ್ತು ಮ್ಯಾನೇಜ್‍ಮೆಂಟ್ ಕೇಂದ್ರವಾಗಿ ಹೊರಹೊಮ್ಮಿದೆ.
ಏರೋಸ್ಪೇಸ್ ಕ್ಷೇತ್ರ, ವಾಯುಯಾನ ನಿರ್ವಹಣೆ ಮತ್ತು ಉತ್ಪಾದನಾ ನಿರ್ವಹಣೆಯಲ್ಲಿ ಅನುಭವಿ ಅಧ್ಯಾಪಕರು, ವೃತ್ತಿಪರರು ಮತ್ತು ಉದ್ಯಮ ತಜ್ಞರು ರೂಪಿಸಿದ ಅಧ್ಯಯನಗಳು ಎಚ್‍ಎಂಎ ಕೋರ್ಸ್ ಗಳಲ್ಲಿ ಒಳಗೊಂಡಿರುತ್ತವೆ ಎಂದು ಸಂಸ್ಥೆ ತಿಳಿಸಿದೆ.