ಗುಂಜ್

ಸಂಬಂಧಗಳಲ್ಲಿ ನನ್ನನ್ನು ಹೆಚ್ಚು ಸೆಳೆಯುವುದು ಅಣ್ಣ-ತಮ್ಮ  ಸಂಬಂಧ. ಅಕ್ಕ-ತಂಗಿ, ಅಣ್ಣ-ತಂಗಿ, ಗಂಡ-ಹೆಂಡತಿ, ಹೀಗೆ ಸಾಕಷ್ಟು ಸಂಬಂಧಗಳ ಪಟ್ಟಿಯನ್ನು ಮಾಡಬಹುದು. ಈ ಪಟ್ಟಿಯನ್ನು ನಾನು ತಯಾರಿಸಿದಲ್ಲಿ, ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲುವುದು ಅಣ್ಣ-ತಮ್ಮ ಸಂಬಂಧ. ಯಾರಾದೂ ಏನನ್ನಾದರೂ ಮಾತನಾಡುತ್ತಿರುವಾಗ ಅಣ್ಣ ತಮ್ಮಂದಿರ ವಿಷಯ ಬಂದಾಗ ಕಿವಿಗಳೆರಡೂ ಸಂಪೂರ್ಣವಾಗಿ ಆ ವಿಷಯದತ್ತ ವಾಲಿಬಿಡುತ್ತವೆ. ಬೇರೆಲ್ಲ ವಿಷಯಗಳ ತರಂಗಗಳ ಬಾಗಿಲುಗಳನ್ನು ಮುಚ್ಚಿಕೊಂಡುಬಿಡುತ್ತವೆ. ಈ ಕಾರಣದಿಂದಲೇ ಏನೋ ನನಗೆ ಮಹಾಭಾರತಕ್ಕಿಂತಲೂ ರಾಮಾಯಣವೆಂದರೆ ತುಂಬ ಅಚ್ಚುಮೆಚ್ಚು. 

ಈಗ ಪುರಾಣವನ್ನು ಬಿಟ್ಟು ಮೂಲ ವಿಷಯಕ್ಕೆ ಬರುತ್ತೇನೆ. ಇದೇನಿದು ತಲೆಬರಹ ‘ಗುಂಜ!’. ಎಂದು ಓದುಗರಾದ ನಿಮ್ಮನ್ನು ಕಾಡಬಹುದು. ಆ ಕುರಿತು ಹೇಳಬೇಕೆಂದರೆ ನನ್ನ ಸೋದರಮಾವ ರಾಮೂಮಾಮಾನ ನಡೆ ನುಡಿಯಲ್ಲಿ  ಏನಾದರೊಂದು ವಿಶೇಷತೆ ಇರುತ್ತಿತ್ತು. ನನ್ನ ತಮ್ಮನ ಹೆಸರು ಸಂಜೀವ ಅಂತ ಇದ್ದರೂ ರಾಮೂಮಾಮಾ ಆತನನ್ನು ‘ಗುಂಜ್‌’ ಎಂದು ಕರೆಯುತ್ತಿದ್ದ. ಅದು ವಿದೇಶಿಯರ ಹೆಸರುಗಳಂತೆ ನನಗನ್ನಿಸುತ್ತಿತ್ತು. ಆ ಹೆಸರು ನನ್ನನ್ನು ತುಂಬ ಆಕರ್ಷಿಸಿತ್ತಿತ್ತಾದ್ದರಿಂದ ವಿಶಿಷ್ಟವಾದ ಆ ಹೆಸರನ್ನೇ ಈ ಲಲಿತ ಪ್ರಬಂಧದಲ್ಲಿ ಬಳಸಿಕೊಂಡಿದ್ದೇನೆ.  

ಬಹುಷಃ ಇದಕ್ಕೆ ಮುಖ್ಯ ಕಾರಣವೆಂದರೆ ಜೀವನದಲ್ಲಿ ನಾನು ಮತ್ತು ನನ್ನ ತಮ್ಮ ‘ಗುಂಜ್‌’ ಇಬ್ಬರೂ ನಡೆದು ಬಂದ ರೀತಿ ಇರಬಹುದೆಂದು ನನ್ನ ಅನಿಸಿಕೆ. ಅಣ್ಣ ತಮ್ಮಂದಿರ ಕತೆಯನ್ನು ಕೇಳಿದಾಗ ಹೆಚ್ಚಾಗಿ ಬಡಿದಾಟದ ಉದಾಹರಣೆಗಳೇ ಸಿಗುತ್ತವೆ. ಒಮ್ಮೆ ಲಲಿತ ಪ್ರಬಂಧನಕಾರರಾದ ಶ್ರೀನಿವಾಸ ವೈದ್ಯರನ್ನು ಕ್ರಿಯಾಶೀಲ ಬಳಗದಿಂದ ಬೆಳಗಾವಿಗೆ ಕಾರ‌್ಯಕ್ರಮಯೊಂದಕ್ಕೆ ಆಹ್ವಾನ ಮಾಡಿದ್ದೆವು. ಅವರು ಮಾತನಾಡುತ್ತ ಹೇಳಿದ್ದರು. ಅಂದು ಅವರು ಹೇಳಿದ್ದ ಒಂದು ಮಾತು ಇಂದೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಏನೆಂದರೆ ‘ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರರಿದ್ದರು ಅವರು ಹೊಡೆದಾಡುತ್ತ ಬಡೆದಾಡುತ್ತ ಸುಖದಿಂದಿದ್ದರು!’ ಎಂದು. ಅಣ್ಣ ತಮ್ಮಂದಿರ ಕುರಿತು ವ್ಯಂಗ್ಯ ಮಾಡುತ್ತ ಅವರು ಹೀಗೆ ಹೇಳಿದ್ದರು. ಅಂದರೆ ಅಣ್ಣ  ತಮ್ಮಂದಿರರೆಂದರೇನೇ ಹೊಡೆದಾಡುವುದು, ಬಡೆದಾಡಿವುದು. ಕೋರ್ಟು ಮೆಟ್ಟಿಲನ್ನೇರುವುದು. ಬಹುಷಃ ಇಂದು ಅಣ್ಣತಮ್ಮಂದಿರು ಇದ್ದುದುದರಿಂದಲೇ ಕೋರ್ಟು ಕಚೇರಿ, ಪೊಲೀಸ ಸ್ಟೇಷನ್ನಗಳು ನಡೆದಿವೆ ಎಂದು ಹೇಳಬಹುದು. ಹಿರಿಯರು ಇದಕ್ಕೊಂದು ಮಾತನ್ನು ಹೇಳುತ್ತಾರೆ ‘ಹೋದ ಜನ್ಮದ ಬಾಗಾಧಿ(ವೈರಿ)ಗಳು ಈ ಜನ್ಮದಲ್ಲಿ ಅಣ್ಣತಮ್ಮಂದಿರಾಗಿ ಹುಟ್ಟುತ್ತಾರೆ’ ಎಂದು. 

ರಾಮಾಯಣದಲ್ಲಿ ರಾಮನಿಗಿಲ್ಲದ ರಾಜ್ಯದ ವೈಭವ ತನಗೂ ಬೇಡವೆಂದು ಸಾಮ್ರಾಜ್ಯ ಸುಖವನ್ನು ತೊರೆದು ಅಣ್ಣನ ಜೊತೆಗೆ ಹೋದ ಲಕ್ಷ್ಮಣನಂತೆಯಾಗಲಿ, ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ಎಲ್ಲರಿಗೂ ಅಣ್ಣನ ಮೇಲಿರುವ ಪ್ರೀತಿಯನ್ನು ಡಾರಾ ಡಂಗೂರ ಸಾರುವ ಭರತನಂತಾಗಲಿ ‘ಗುಂಜ್‌’ ಅಣ್ಣನ ಮೇಲಿರುವ ಪ್ರೀತಿಯನ್ನೆಂದೂ ಜಾಹೀರ ಪಡಿಸದೇ ತಾನು ಅಣ್ಣನ ಮೇಲಿರುವ ಪ್ರೀತಿ, ವಾತ್ಸಲ್ಯ, ಅಂತಃಕರಣವನ್ನು ಜೀವನಪೂರ್ತಿ ತೋರುತ್ತಲೇ ಬಂದ. 

‘ಗುಂಜ್‌’ ಹಾಗೂ ನನ್ನ ನಡುವಿನ ಸಂಬಂಧದ ಕುರಿತು ಹೇಳಬೇಕೆಂದರೆ ನಾವಿಬ್ಬರು ಎಂದೂ ಅಣ್ಣತಮ್ಮಂದಿರಂತೆ ಇಲ್ಲವೇ ಇಲ್ಲ. ಅಣ್ಣನೆಂದರೆ ನಾಟಕೀಯ ಗೌರವ, ಅತಿಯಾದ ವಿನಯತೆ ಎಂದೂ ತೋರುತ್ತಿರಲಿಲ್ಲ. ಗೊತ್ತಿದ್ದವರಿಗಷ್ಟೇ ಗೊತ್ತು ನಾವಿಬ್ಬರೂ ಅಣ್ಣತಮ್ಮಂದಿರರೆಂದು. ಪರಿಚಯವಿಲ್ಲದವರು ನಮ್ಮನ್ನು ಸ್ನೇಹಿತರೆಂದೇ ತಿಳಿದುಕೊಳ್ಳುತ್ತಿದ್ದರು. ಸ್ನೇಹಿತರ ನಡುವಿನ ನಗೆ, ಚಾಷ್ಟಿ, ಸಲುಗೆಯೇ ಅಣ್ಣತಮ್ಮಂದಿರಾದ ನಮ್ಮಿಬ್ಬರ ನಡುವಿದೆ.  

ನಾನು ವಯಸ್ಸಿನಲ್ಲಿ ಹಿರಿಯನಾದರೂ ಒಣ ಪ್ರತಿಷ್ಠೆ ತಮ್ಮನಿಂದ ಬಯಸುತ್ತಿರಲಿಲ್ಲ. ಚಿಕ್ಕವರಿರುವಾಗ ನನ್ನ ಅಪ್ಪ ‘ಗುಂಜ್‌’ನಿಗೆ ‘ಅವನು ನಿನಗಿಂತ ದೊಡ್ಡವನು ಅವನಿಗೆ "ಅಣ್ಣ" ಅನಬೇಕು ಹಾಗೆ ಒಂಟಿ ಹೆಸರಿನಿಂದ ಕರೆಯಬಾರದೆಂದು ಹಲವು ಬಾರಿ ಕರಾರು ಮಾಡಿದ್ದರು ಬಡಿದೂ ಹೇಳಿದ್ದರು. ಆದರೂ ಅವನಿಗೆ ನನ್ನನ್ನು ‘ಅಣ್ಣಾ’ ಅಂತಾಗಲಿ ‘ಮದ್ದಣ್ಣ’ ಅಂತಾ ಕರೆಯಲು ಮನಸ್ಸು ಒಪ್ಪಲಿಲ್ಲವೋ ಅಥವಾ ಮೊದಲಿಂದನಿಂದಲೂ ನನಗಿಟ್ಟ ಹೆಸರಿನಿಂದಲೇ ಕರೆಯುತ್ತ ಬಂದಿದ್ದರಿಂದ ನಾಲಿಗೆ ಹೊರಳಲಿಲ್ಲವೋ ಏನೋ ಅವನು ನನ್ನ ಹೆಸರು ಮಧುಕರವಿದ್ದುದರಿಂದ ಎಲ್ಲರೂ ಕರೆಯುವಂತೆ ‘ಮದ್ದು’ ಎಂದೇ ಕರೆಯುತ್ತಿದ್ದ.  

 ನಡೆಯುತ್ತ ಹೋಗುವಾಗ ನನ್ನ ಹೆಗಲ ಮೇಲೆ ಕೈಯನ್ನು ಹಾಕಿ ಸ್ನೇಹಿತರಂತೆ ವರ್ತಿಸುತ್ತಿದ್ದ. ನಾನು ಹಿರಿಯನೆಂಬ ಅಹಂ ನನ್ನನ್ನೆಂದೂ ಕಾಡಲಿಲ್ಲ. ಬದಲಾಗಿ ಯಾರಾದರೂ ನಮ್ಮಿಬ್ಬರ ಕುರಿತು “ನೋಡ್ರಿ ಆ ಅಣ್ಣ ತಮ್ಮಂದಿರಿಬ್ಬರೂ ಹೆಂಗ ಗೆಳೆರಂಗ ಇದ್ದಾರ!” ಎಂದಾಗ ನನಗೆ ಅಭಿಮಾನದಿಂದ ಎದೆಯುಬ್ಬುತ್ತಿತ್ತು. 

ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಇಲ್ಲವೇ ಇಲ್ಲವೆಂದಾಗಲಿ ಬಡೆದಾಡಿಯೇ ಇಲ್ಲವೆಂದಾಗಲಿ ಎಂದು ನಾನು ಹೇಳುವುದಿಲ್ಲ. ಆಗಾಗ ವಾದ ವಿವಾದಗಳಾಗುತ್ತಿದ್ದವು. ವಾದಗಳು ತಾರಕಕ್ಕೇರಿ ಜಗಳಗಳಾಗಿ ತಿರುವು ಪಡೆಯುತ್ತಿದ್ದವು. ಹೀಗೆ ಸಿಟ್ಟಿನಲ್ಲೊಮ್ಮೆ ಕೈಯಲ್ಲಿದ್ದ ಕಬ್ಬಿಣದ ವಸ್ತುವೊಂದನ್ನು ಜೋರಿನಿಂದ ತಮ್ಮನತ್ತ ಎಸೆದಿದ್ದೆ ಅದು ಜೋರಿನಿಂದ ಅವನ ಮೊಣಕಾಲಿಗೆ ಬಡೆಯಿತು. ಅವನು ‘ಅಯ್ಯೋ...’ ಎಂದು ಚೀರಿ ಮೊಣಕಾಲನನ್ನು ಹಿಡಿದುಕೊಂಡು ಮುಖ ಕಿವಿಚಿ ಕುಳಿತು ಬಿಟ್ಟ. ತನಗಾದ ನೋವು, ಸಿಟ್ಟನ್ನು ಹಿಡಿದಿಟ್ಟುಕೊಳ್ಳುವುದಷ್ಟೇ ಅಲ್ಲದೇ ಪ್ರತಿಯಾಗಿ ನನಗೇನೂ ಮಾಡಲಿಲ್ಲ. ಆತನ ಸಹನೆಯನ್ನು ಕಂಡು ಮನಕರಗಿ ಅವನು ಅಳಬೇಕಾದುದಕ್ಕಿಂತ ಹೆಚ್ಚು ನೋವಿನಿಂದ ನಾನು ಅತ್ತಿದ್ದೆ. ‘ಗುಂಜ್‌’ನೇ ನನ್ನ ಬೆನ್ನ ಮೇಲೆ ಕೈಯ್ಯಾಡಿಸಿ ಹಿರಿಯರಂತೆ ನನ್ನನ್ನು ಸಮಾಧಾನಿಸಿದ್ದ ಘಟನೆ ಕಣ್ಣಮುಂದೆ ಕಟ್ಟಿದೆ ಆಗಾಗ ಮನಸ್ಸಿನ ಪರದೆಯ ಮೇಲಿ ದಾಟುತ್ತಿರುತ್ತದೆ. ದಾಟಿದಾಗೊಮ್ಮೆ ಮನಸ್ಸಿಗೆ ತುಂಬ ನೋವಾಗುತ್ತದೆ. ಸಿಟ್ಟಿನಲ್ಲಿ ಕೊಯ್ದುಕೊಂಡ ಮೂಗು ಮುಂದೆ ಸರಿಪಡಿಸಲಾಗುವುದಿಲ್ಲ ಎಂಬ ಮಾತನ್ನು ನೆನಪಿಸುತ್ತದೆ. 

ನನಗೀಗ ಅರವತ್ತೊಂದು ವರ್ಷ ನಾನು ಮೊದಲಿನಿಂದಲೂ ಬಡಕಲು ದೇಹ ಹೊಂದಿರುವ ನನ್ನ ಮುಂದೆ ಸದೃಢ ದೇಹ ಹೊಂದಿದ್ದ ನನ್ನ ತಮ್ಮ ನನಗಿಂತ ಹಿರಿಯನಂತೆ ಕಾಣುತ್ತಿದ್ದ. ಹೆಚ್ಚಿನ ಜನ ‘ಗುಂಜ್‌’ನನ್ನೇ ಅಣ್ಣನೆಂದು ಭಾವಿಸುತ್ತಿದ್ದರು. ಮೊದ ಮೊದಲು ನಾನು ಹಾಗೆ ಕೇಳಿದವರಿಗೆ ನಾನು ವಯಸ್ಸು ಹಾಗೂ ಬುದ್ದಿಯಿಂದ ನಾನು ದೊಡ್ಡವ. ದೇಹದಿಂದ ಅವನು ದೊಡ್ಡವ! ಎಂದು ನಗೆ ಮಾಡುತ್ತ ಹೇಳಿ ನಾನೇ ಅಣ್ಣನೆಂಬ ವಾದವನ್ನು ಮಂಡಿಸುತ್ತಿದ್ದೆ. ಆದರೆ ಬರುಬರುತ್ತ ಹಾಗೇ ತಿಳಿಸಿ ಹೇಳುವುದೇ ಕಿರಿಕಿರಿಯನ್ನಿಸಲಾರಂಭಿಸಿತು. ಮುಂದೆ ಯಾರಾದರೂ ತಮ್ಮನಿಗೇ,  ಅಣ್ಣನೆಂದು ಹೇಳಿದರೆ ನಾನು ಏನನ್ನೂ ವಾದಿಸದೇ ಅವರ ಮಾತನ್ನು ಒಪ್ಪಿಕೊಂಡು ಬಿಡುತ್ತಿದ್ದೆ. ಅಣ್ಣನಾದ ನನ್ನನ್ನೇ ತಮ್ಮನೆಂದುದಕ್ಕೆ ಮನಸ್ಸಿನಲ್ಲೆ ಥ್ಯಾಂಕ್ಸ ಹೇಳುತ್ತಿದ್ದೆ. ವಯಸ್ಸಿನಲ್ಲಿ ಸಣ್ಣವನ್ನಾಗಿಸಿದ, ಯುವಕನನ್ನಾಗಿ ಮಾಡಿದವರನ್ನು ಮನಸ್ಸಿನಲ್ಲೇ ಅಭಿನಂದಿಸುತ್ತಿದ್ದೆ. 

  ತಂದೆಯವರು ತೀರಿಕೊಂಡು ನಾಲ್ಕಾರು ವರ್ಷವಾಗಿದ್ದವು. ಮೂರು ಜನ ಅಣ್ಣಂದಿರರಿದ್ದರೂ ಕಾರಣಾಂತರಗಳಿಂದ ಅವರು ನಮ್ಮೊಂದಿಗಿರಲಿಲ್ಲ. ಅದಕ್ಕೆ ಏಕೈಕ ಕಾರಣವೆಂದರೆ ಅವರದು ಮದುವೆಯಾಗಿತ್ತು! ನಮ್ಮಿಬ್ಬರದ್ದು ಮದುವೆಯಾಗಿರಲಿಲ್ಲ. ತಾಯಿ, ಅಕ್ಕ ಹಾಗೂ ತಂಗಿ ಸೇರಿದ ನಮ್ಮದೊಂದು ಪುಟ್ಟ ಸಂಸಾರವಾಗಿತ್ತು. ಈ ಸಂಸಾರದಲ್ಲಿ ಮನೆಯಲ್ಲಿರಲಿ, ಹೊರಗೆ ಹೋಗಲಿ, ಮದುವೆ, ಸಮಾರಂಭ ಎಲ್ಲಿಯೇ  ಹೋಗಲಿ ಗುಂಜ್ ಮತ್ತು ನಾನು ಇಬ್ಬರೂ ಕೂಡಿಯೇ ಹೋಗುವುದು. ಒಟ್ಟನಲ್ಲಿ ನನ್ನ ಮುಖದ ಪಕ್ಕದಲ್ಲಿ ಗುಂಜ್‌ನ ಮುಖವಿರಲೇಬೇಕು. 

 ಇದರಿಂದಾಗಿ ಎಲ್ಲಿಗೇ ಹೋದರೂ ಇಬ್ಬರೂ ಕೂಡಿಯೆ ಹೋಗುತ್ತಿದ್ದವು. ನಾವು ಎಷ್ಟೊಂದು ಜನರ ಕಣ್ಣಲ್ಲಿ ಹೀಗೆ ಕುಳಿತು ಬಿಟ್ಟಿದ್ದೇವೆಂದರೆ ಒಬ್ಬೊಬ್ಬರೇ ತಿರುಗಾಡುವಾಗ ಕೆಲವರಿಗೆ ನಮ್ಮ ಗುರ್ತೇ ಸಿಗುತ್ತಿರಲಿಲ್ಲ. ಮತ್ತೆ ನಮ್ಮನ್ನು ನಾವೇ ಪರಿಚಯ ಮಾಡಿಕೊಂಡಾಗ ನೀವು ಅಣ್ಣತಮ್ಮಂದಿರಿಬ್ಬರೂ ಕೂಡಿಯೇ ಬಂದರೆ ಮಾತ್ರ ನಮಗೆ ಪರಿಚಯ ಸಿಗುತ್ತದೆ ಎಂದು ಹೇಳುತ್ತಿದ್ದುದು ತಮಾಷೆಯನಿಸುತ್ತಿದ್ದರೂ ವಸ್ತುಸ್ಥಿತಿಯಾಗಿತ್ತು. 

ಗುಂಜ್ ತುಂಬ ಮುಗ್ಧ. ಮಗುವಿನ ಮನಸ್ಸು ಅಂತಾರಲ್ಲ ಆ ರೀತಿಯಾಗಿತ್ತು. ಅಕ್ಕನ ಮದುವೆ ಸಂದರ್ಭದಲ್ಲಿ ಅಕ್ಷತಾ ಹಾಕಿ ಆಹೇರಿ ಕೊಟ್ಟ ಜನ ಹೊರಡಲಾರಂಭಿಸಿದರು. ನನ್ನ ಅಣ್ಣನ ಸ್ನೇಹಿತರಾದ ಕುಲಕರ್ಣಿಯವರು ನನ್ನ  ತಮ್ಮನನ್ನು ಕರೆದು ಎಲ್ಲರೂ ಆಹೇರಿ ಹಾಕಿ ಹಾಗೇ ಹೋಗುತ್ತಿದ್ದಾರೆ.  ಊಟ ಮಾಡಿಕೊಂಡು ಹೋಗುವಂತೆ ಮೈಕ್‌ದಲ್ಲಿ ಹೇಳು ಎಂದರು.  ‘ಗುಂಜ್‌’ ಅವಸವಸರದಿಂದ ಓಡಿ ಹೋಗಿ ಮೈಕನ್ನು ಹಿಡಿದುಕೊಂಡು 'ಆಹೇರಿ ಹಾಕಿದ ಎಲ್ಲ ಜನ ಊಟ ಮಾಡಕೊಂಡು ಹೋಗಬೇಕು! ...ಆಹೇರಿ ಹಾಕಿದ ಎಲ್ಲ ಜನ ಊಟ ಮಾಡಕೊಂಡು ಹೋಗಬೇಕು!' ಎಂದು ಹೇಳಲಾಂಭಿಸಿದಾಗ ಆ ಮಾತಿನ ಅರ್ಥ ತಿಳಿದವರು ಮನಸ್ಸಿನಲ್ಲಯೇ ನಕ್ಕಿದ್ದರು. ನಿಮಗೂ ತಿಳಿದಿದ್ದರೆ ನಗಬಹುದು!   

ಮೊದ ಮೊದಲು ಅವನಿಗೆ ವ್ಯವಹಾರಿಕ ಜ್ಞಾನವಿರಲಿಲ್ಲ. ಪದಪ್ರಯೋಗಗಳೂ ಕೂಡ ಸರಿಯಾಗಿ ಹೇಳಲು ಬರುತ್ತಿರಲಿಲ್ಲ. ಮನೆ ಕಟ್ಟುವ ಗೌಂಡಿಗಳಿಗೇನು ಅನ್ನಬೇಕೋ ತಿಳಿಯುತ್ತಿರಲಿಲ್ಲ.  ಅವನು ಹೇಳಿದ ಪದ ಇಂದಿಗೂ ನಮ್ಮ ಬಳಗದವರೆಲ್ಲರಿಗೂ ನೆನಪಿನಲ್ಲಿ ಉಳಿದು ಬಿಟ್ಟಿದೆ. ಆಗಾಗ ನೆನಪಿಸಿಕೊಂಡು ನಗುತ್ತಿರುತ್ತೇವೆ. ಮನೆ ಕಟ್ಟುವ ಗೌಂಡಿಗಳಿಗೆ ‘ಗುಂಜ್‌’ ಬಳಿಸಿದ ಪದವೇನೆಂದರೆ "ಇಟ್ಟಂಗ್ಯಾರು!" ಹಾಗೆ ನೋಡಿದರೆ  ಅವನು ಹೇಳುವುದು ಒಂದು ರೀತಿಯಲ್ಲಿ ಸರಿಯಾಗಿಯೇ ಇದೆ.  ಇಟ್ಟಿಗೆಗಳೊಂದಿಗೆಯೇ ಹೆಚ್ಚಿನ ಜೀವನ ಕಳೆಯುವವರೆಂದು ಅದರ ಅರ್ಥ. ಇದೊಂದು ಉದಾಹರಣೆ ಅಷ್ಟೆ ಹತ್ತು ಹಲವಾರು ವಿಷಯ ಈ ತೆರನಾಗಿದ್ದವು.  ಮುಂದೆ ಎಲ್ಲಿಂದ ಆ ಜ್ಞಾನ  ಪಡೆದನೋ ಏನೋ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡತೊಡಗಿದ. ಸರಸ್ವತಿಯಿಂದ ನಾಲಿಗೆ ಮೇಲೆ ಬರೆಯಿಸಿಕೊಂಡ ಕಾಳಿದಾಸನಂತೆ ಎಲ್ಲ ವಿಷಯಗಳನ್ನೂ ಬಲ್ಲವನಾಗಿಬಿಟ್ಟಿದ್ದಾನೆ. ಮೊದಲಿನ ಗುಂಜ ಇವನೇನೆ ಎಂದು ಅಚ್ಚರಿ ಪಡುವಂತಾಗಿಬಿಟ್ಟಿದ್ದಾನೆ.  

 ಈ ಸಂದರ್ಭದಲ್ಲಿ ನನಗಿಂತಲೂ ಮೊದಲು ನನ್ನ ತಮ್ಮನಿಗೆ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲಿ ನೌಕರಿ ಸಿಕ್ಕಿತು. ಅವನಿಗಿಂತಲೂ ಸಂತೋಷ ಪಟ್ಟವನು ನಾನು. ನನಗೇ ನೌಕರಿಯಿಲ್ಲ ನನಗಿಂತ ಸಣ್ಣವನಿಗೆ ಹತ್ತಿತಲ್ಲವೆಂಬ ಅಸೂಯೆ, ಮತ್ಸರ ನನ್ನ ಯಾವ ಮೂಲೆಯಲ್ಲೂ ಕಾಣಿಸಿಕೊಂಡಿರಲಿಲ್ಲ. ಇಂದಿಗೂ ಆ ಯಾವ ಭಾವನೆ ನಮ್ಮಿಬ್ಬರಲಿಲ್ಲ.  ‘ಗುಂಜ್‌’ನಲ್ಲಿಯೇ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೆ. ಅವನಲ್ಲಿಯೇ ಖುಷಿ ಪಡುತ್ತಿದ್ದೆ. ಈ ನೌಕರಿ ಕುರಿತಂತೆ ಪರಿಚಯಸ್ತರೊಬ್ಬರನ್ನು ಭೇಟಿಯಾಗಬೇಕಾಗಿತ್ತು. ಅವರಿರುವ ಊರಿಗೆ ಹೋಗಿಬರಬೇಕೆಂದರೆ ಕೆಲ ಕಾರಣಗಳಿಂದಾಗಿ ಬಸ್ಸಿಗೆ ಕೊಡುವಷ್ಟೂ ಹಣವಿರಲಿಲ್ಲ. ನಾನು ಸ್ನೇಹಿತರೊಬ್ಬರ ಹತ್ತಿರ  ಇಸಿದುಕೊಂಡು ಹಣದ ವ್ಯವಸ್ಥೆ ಮಾಡಿದ್ದೆ. ಇಲ್ಲಿ ಹಣದ ವಿಷಯ ಮಹತ್ತರವಾದದ್ದಲ್ಲ ಆದರೆ ನಮ್ಮಿಬ್ಬರ ಸಂಬಂಧ ಅಷ್ಟು ಗಾಢವಾಗಿತ್ತು ಎಂಬುದನ್ನು ನನಗೆ ಹೇಳಬೇಕಾಗಿದೆ. 

ನನ್ನದು ಯಾವುದೇ ನಿಶ್ಚಿತ ಕೆಲಸವೆಂದು ಇರಲಿಲ್ಲ. ಭಾರತೀಯ ಜೀವ ವಿಮಾ ನಿಗಮದ ಏಜೆಂಟ್, ಪತ್ರಿಕಾ ವರದಿಗಾರ, ಟೆಲಿಫೋನ ಬೂತ್ ಮಾಲಿಕ, ಡಿಟಿಪಿ, ಪುಸ್ತಕ ಪುಟವಿನ್ಯಾಸ, ಮುಖಪುಟ ಚಿತ್ರ ವಿನ್ಯಾಸ ಹೀಗೆ ಏನೇನೋ ನಾನು ಮಾಡಿದ ವೃತ್ತಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು ಇಷ್ಟೆಲ್ಲ ವೃತ್ತಿಗಳಿದ್ದರೂ ರೊಟ್ಟಿಗಾಗುವಷ್ಟೂ ಆದಾಯವಿರಲಿಲ್ಲ. 

ಸ್ನೇಹಿತರು ಬೇರೆಯವರಿಗೆ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಇವರು ಬ್ಯಾಂಕಿನಲ್ಲಿ.... ಇವರು ಪಿಡಬ್ಲೂಡಿ... ಇವರು ಸರ್ವೆ.. ಎಂದು ಅವರ ಇಲಾಖೆಯೊಂದಿಗೆ ಪರಿಚಯ ಮಾಡಿಕೊಡುತ್ತಿದ್ದರು. ನನ್ನ ಪರಿಚಯ ಮಾಡಿಕೊಡುವುದು ಅವರಿಗೆ ಚಕ್ರವ್ಯೂಹ ಬೇಧಿಸಿ ಹೊರಬಂದ ಅನುಭವವಾಗುತ್ತಿತ್ತು ಆದ್ದರಿಂದ  ಅವರು, ನನ್ನ ವೃತ್ತಿಗಳ ಪಟ್ಟಿಯನ್ನು ಹೇಳಲಾಗದೆ ಇವರು ‘ಗುಂಡೇನಟ್ಟಿ ಮಧುಕರ’ ಎಂದಿಷ್ಟೆ ಹೇಳಿ ಮೌನವಾಗಿಬಿಡುತ್ತಿದ್ದರು!  

ಈಗ ‘ಗುಂಜ್‌’ನ ನೌಕರಿ ಪ್ರಾರಂಭವಾಯಿತು. ಅವನು ದಿನಾಲೂ ಮುಂಜಾನೆ ಹತ್ತು ಗಂಟೆಗೆ ಕಾಲೇಜಿಗೆ ಹೋದವನು ಸಾಯಂಕಾಲ ಐದು ಗಂಟೆಗೆ ಮನೆಗೆ ಮರಳಿ ಬರುತ್ತಿದ್ದ. ಪ್ರಾಮಾಣಿಕವಾಗಿ ದುಡಿಯುವ ಈತನಿಗೆ ಎಲ್ಲ ಮೈಗಳ್ಳರ ಕೆಲಸವೂ ಇವನ ಮೇಲೆಯೇ ಬಿದ್ದು ಕೆಲಸದ ಒತ್ತಡ ಬಹಳವಾಗುತ್ತಿತ್ತು. ಕೆಲಸದಿಂದ ದಣಿದು ಮನೆಗೆ ಮರಳುತ್ತಿದ್ದ.  ಕೆಲಸವಿಲ್ಲದ ನಾನು ಸಾಯಂಕಾಲದವರೆ ಹೇಗೋ ಸಮಯ ತೆಗೆದು ‘ಗುಂಜ್‌’  ಬರುವ ದಾರಿಯನ್ನೇ ಕಾಯುತ್ತ ಕೂಡುತ್ತಿದ್ದೆ. ಕಾಲೇಜಿನ ಕೆಲಸದಿ0ದ ಬೇಸತ್ತು ವಿಶ್ರಾಂತಿ ಪಡೆಯುವ ಮನಸ್ಸು ಅವನದು. ಮನೆಯಲ್ಲಿ ಕುಳಿತು ಬೇಸರದಿಂದ ಹೊರಗಡೆ ತಿರುಗಾಡಿ ಬರಬೇಕೆಂದು ಬಯಸುವ ಮನಸ್ಸು ನನ್ನದು. ಕೆಲಸದಿಂದ ಬೇಸತ್ತಿದ್ದರೂ ದಿನಾಲೂ ಸಾಯಂಕಾಲ ನನ್ನೊಡನೆ   ತಿರುಗಾಡಲು ಬರುತ್ತಿದ್ದ. ದಾರಿಯಲ್ಲಿ ಕಾಲೇಜಿನಲ್ಲಿ ತನಾಗಾದ ರಂಜನೀಯ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ.  

ಕಾಲೇಜಿನಲ್ಲಿ ಕೂಡ ಎಲ್ಲರಿಗೂ ಬೇಕಾದವನಾಗಿದ್ದ. ಕಾಲೇಜದ ಎಲ್ಲರಲ್ಲಿ ಅತ್ಯಂತ ಕಿರಿಯವವನೆಂದರೆ ‘ಗುಂಜ್‌’ನೇ. ಎಲ್ಲರೂ ಇವನನ್ನು ಏನಾದರೊಂದು ತಮಾಷೆಯ ಮಾತುಗಳನ್ನಾಡಿ ಇವನನ್ನು ಕಾಡುತ್ತಿದ್ದ ವಿಷಯಗಳನ್ನು ನನ್ನ ಮುಂದೆ ಹೇಳುತ್ತಿದ್ದ. ಮನೆಯಲ್ಲಿ ಕುಳಿತು ನಾನು ಓದಿದ ಭೈರ​‍್ಪ, ತರಾಸು, ಬೀಚಿ, ಎನ್ಕೆ ಮುಂತಾದವರ ಸಾಹಿತ್ಯ ಹಾಗೂ ನನ್ನ ಬರವಣೆಗೆಯ ಕುರಿತು ನಾನು ಹೇಳುತ್ತಿದ್ದೆ ಇದರಲ್ಲಿ ನಮಗೆ ದಾರಿ ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ. 

‘ಗುಂಜ್‌’ ಈಗೊಂದು ದ್ವೀಚಕ್ರ ವಾಹನವೊಂದನ್ನು ಕೊಂಡುಕೊಂಡ.  ಮೂವತ್ತು ವರ್ಷಗಳ ಹಿಂದಿನ ಮಾತು. ಆವಾಗ್ಯೆ ದ್ವೀಚಕ್ರ ವಾಹನವಿರುವವನೇ ವಿಶೇಷ ವ್ಯಕ್ತಿಯೆನ್ನಿಸಿಕೊಳ್ಳುತ್ತಿದ್ದ. ಎಲ್ಲರೂ ಸೈಕಲ್ ಸವಾರರೇ ಆಗಿರುತ್ತಿದ್ದ ಕಾಲವದು. ಗಾಡಿ ಸವಾರಿ ಮಾಡುತ್ತಿದ್ದ ‘ಗುಂಜ್‌’ನದು ಮುಂದಿನ ಸೀಟಾದರೆ. ಹಿಂದಿನ ಸೀಟು ನನಗಾಗಿಯೇ ರಿಸರ್ವವಾಗಿರುತ್ತಿತ್ತು ಅದರಲ್ಲೇನೂ ಎರಡು ಮಾತಿಲ್ಲ. ಹೀಗೆ ಒಮ್ಮೆ ನನ್ನನ್ನು ಆ ಗಾಡಿಯ ಮೇಲೆ ಹತ್ತಿಸಿಕೊಂಡು ಹೋಗುವುದಿಲ್ಲವೆಂದು ಹುಸಿ ಮುನಿಸು ಮಾಡಿದ.  

ನಾನು ಅವನಿಗೊಂದು ಪುರಾಣ ಕಥೆಯೊಂದನ್ನು ಹೇಳಿದೆ. ಅವನೂ ಅತ್ಯಂತ ಗಮನಕೊಟ್ಟು ಕೇಳಿದ. ವಿಷ್ಣುವಿನ ವಾಹನವಾಗಿದ್ದ ಗರುಡನಿಗೆ ತುಂಬ ಅಹಂ ಬಂದು ಬಿಟ್ಟಿತಂತೆ. ನನ್ನಿಂದಲೇ ನೀನು ಎಲ್ಲಡೆ ತಿರುಗಾಡುತ್ತೀಯಾ ಎಂದು ನುಡಿದಂತೆ ಅದಕ್ಕೆ ವಿಷ್ಣು ನಿಧಾನವಾಗಿ ಗರುಡನ್ನಿಂದ ಕೆಳಗಿಳಿದನಂತೆ. ವಿಷ್ಣು ಕೆಳಗಿಳಿಯುತ್ತಿದ್ದಂತೆ ಗರುಡನಲ್ಲಿದ್ದ ಶಕ್ತಿಯಲ್ಲ ಹೋಗಿ ಕೆಳಗೆ ಬಿದ್ದು ಬಿಟ್ಟನಂತೆ. ‘ನಿನ್ನಲ್ಲಿರುವ ಶಕ್ತಿ ನಾನೇ, ಅಹಂ ಪಡಬೇಡ’ ಎಂದು ಹೇಳಿ ಗರುಡನನ್ನೇರಿದ ನಂತರ ಶಕ್ತಿ ಬಂದಿತಂತೆ ಎಂದು ಹೇಳಿದೆ. ಅದರಂತೆ ನಿನ್ನ ಗಾಡಿಯಲ್ಲಿರುವ ಶಕ್ತಿಯಂದರೆ ನಾನು. ನಾನಿಲ್ಲದೇ ಒಂದು ಹೆಜ್ಜೆ ಕೂಡ ಮುಂದೆ ಚಲಿಸಲಾರೆ. ಏಕಂದರೆ ಗಾಡಿಗೆ ಪೆಟ್ರೋಲ್ ಹಾಕಿಸುವವನೇ ನಾನು!’ ಹೇಳಿದಾಗ ‘ಗುಂಜ್‌’ ಜೋರಾಗಿ ನಕ್ಕ. ನಾನು ಗಾಡಿಯನ್ನೇರಿ ಹಿಂದಿನ ಸೀಟಿನಲ್ಲಿ ಕುಳಿತೆ. ಗಾಡಿ ಜೋರಾಗಿ ಮುಂದೆ ಹೋಯಿತು. 

ಈಗ ‘ಗುಂಜ್‌’ನ ಉತ್ಪಾದನೆ ಪ್ರಾರಂಭವಾಯಿತು. ಊರಲ್ಲಿ ಹೊಲ,  ಶಹರದಲಿ ಸ್ವಂತ ಮನೆ, ಮದುವೆಯ ವಯಸ್ಸು, ನೋಡಲು ಸ್ಫರದ್ರೂಪಿಯಾಗಿದ್ದ ಕನ್ಯಾಪಿತೃಗಳಿಗೆ ಇದಕ್ಕಿಂತ ಹೆಚ್ಚಿಗೆ ಏನು ಬೇಕು. ಕನ್ಯಾಪಿತೃಗಳು ಹುಡಿಗೆಯರ ಫೋಟೋ, ಕುಂಡಲಿಗಳನ್ನು ಹಿಡಿದುಕೊಂಡು ಮನೆಗೆ ಬರಲಾರಂಭಿಸಿದರು. ಈಗಿನಂತೆ ಕನ್ಯಾಗಳ ಅಭಾವವಿರಲಿಲ್ಲ. ಮೀಸೆ ಹೊತ್ತ ಗಂಡಸಿಗೆ ಡಿಮಾಂಡವೋ ಡಿಮಾಂಡು ಎಂದು ಮೀಸೆ ತಿರುವುತ್ತ ಅಡ್ಡಾಡುವ ಕಾಲ ಅದಾಗಿತ್ತು.  

ಯಾವುದೇ ನಿಶ್ಚಿತ ಆದಾಯವಿಲ್ಲದ ನನ್ನನ್ನು ನೋಡಿ ಕನ್ಯಾಪಿತೃಗಳು  ಮುಖ ತಿರುಗಿಸುತ್ತಿದ್ದರು. ‘ಗುಂಜ್‌’ನನ್ನು ನೋಡಿ ಅಳಿಯನ್ನಾಗಿ ಮಾಡಿಕೊಳ್ಳಲು ಬಾಯ್ದೆರುದುಕೊಂಡು ಕುಳಿತಿದ್ದರು. ಆದರೆ ‘ಗುಂಜ್‌’ ನನಗೆ ‘ನಿನ್ನ ಮದುವೆ ಮಾಡಿಯೇ ನಾನು ಮದುವೆ ಮಾಡಿಕೊಳ್ಳುವುದು ನಿಶ್ಚಿತ’ ಎಂದು ಭೀಷ್ಮನಂತೆ ಹೇಳಿದ. ಅದರಂತೆ ನಡೆದುಕೊಂಡ ಅಂದರೆ ಭೀಷ್ಮನಂತೆ ಮದುವೆ ಮಾಡಿಕೊಳ್ಳದೇ ಇರಲಿಲ್ಲ. ನನ್ನ ಮದುವೆ  ಮಾಡಿಯೇ ತಾನು ಮಾಡಿಕೊಂಡ. ಬಹುಷಃ ಆತನಿಗೆ ತಾನೊಬ್ಬನೇ ಶಿಕ್ಷೆ ಅನುಭವಿಸುವುದು ಬೇಡವಾಗಿತ್ತೆಂದು ಕಾಣುತ್ತದೆ! ತನ್ನೊಡನೇ ನನ್ನನ್ನೂ ಸೇರಿಸಿಕೊಂಡ! 

ಈಗಲೇ ಹೇಳಿದಂತೆ ತಮ್ಮ ‘ಗುಂಜ್‌’ ಮತ್ತು ನಾನು ಇಬ್ಬರೂ ಜೊತೆ ಜೊತೆಯಾಗಿಯೇ ತಿರುಗಾಡುವವರು. ಮದುವೆಯಾದೊಡನೆ ಮಡದಿಯೊಂದಿಗೆ ತಿರುಗಾಟ ಪ್ರಾರಂಭವಾಯಿತು. ಒಮ್ಮೆ ಗಂದಿಗವಾಡಕ್ಕೆ ಹೋಗಿ ಬಸ್ಸನ್ನಿಳಿದೆ. ಯಾರೋ ಹಿರಿಯ ಮನುಷ್ಯರೊಬ್ಬರು  ಭೇಟಿಯಾದರು. ಅವರು  ‘ಏನ ಒಬ್ಬನ ಬಂದಿಯೇನೋ?’ ಎಂದು ಕೇಳಿದರು. ‘ಹೌನ್ರಿ ನಾನೊಬ್ಬನ ಬಂದೀನ್ರಿ ‘ಗುಂಜ್‌’ಗ ರಜಾ ಸಿಗಲಿಲ್ಲ..’ ಎಂದು ಹೇಳಿದೆ. ಅದಕ್ಕ ಅವರು ನಗುತ್ತ ‘ನಾ ಕೇಳಿದ್ದು ‘ಗುಂಜ್‌’ ಅಲ್ಲೋ ನಿನ್ನ ಹೆಂಡತಿ ಬಗ್ಗೆ ಕೇಳಿದ್ದು’ ಎಂದು ಹೇಳಿದರು. “ಆಕಿನೂ ಬಂದಾಳ್ರಿ ಹಿಂದ ಇದ್ದಾಳ್ರೀ” ಎಂದು ಹೇಳಿದೆ ಅದಕ್ಕವರು “ಇನ್ನ ಮುಂದ ಒಬ್ಬನ ಬಂದಿಯೇನು, ಇಬ್ಬರೂ  ಬಂದೀರೇನು ಅಂತ ಕೇಳೋದು ನಿನ್ನ ತಮ್ಮ ‘ಗುಂಜ್‌’ನ ಸಲುವಾಗಿ ಅಲ್ಲ ಹೆಂಡ್ತಿ ಸಲುವಾಗಿ’ ಎಂದು ನಗುತ್ತ ಹೇಳಿ  ಹೋದರು. ಅಂದರೆ  ‘ಗುಂಜ್‌’ ಹಾಗೂ ನಾನು ಅಷ್ಟೊಂದು ಬೆಸೆದುಕೊಂಡು ಬಿಟ್ಟಿದ್ದೆವು. ನನಗೆ ಬೇರೆ ಬೇರೆ ಕವಿಗಳ ಭಾವಗೀತೆಗಳ ರುಚಿಯನ್ನು ಅಂಟಿಸಿದವನು  ತಮ್ಮ ‘ಗುಂಜ್‌’ನೇ. ನಾನು ಗದ್ಯ ಸಾಹಿತ್ಯವನ್ನಷ್ಟೇ ಓದುತ್ತಿದ್ದೆ. ಏಕೋ ಕಾವ್ಯವೆಂದರೆ ನನಗಾಗುತ್ತಿರಲಿಲ್ಲ. ತಮ್ಮನಿಗೆ ಕೆ. ಎಸ್‌. ನರಸಿಂಹಸ್ವಾಮಿ, ಬೇಂದ್ರೆ, ಕುವೆಂಪು, ಅಡಿಗ ಎಂದರೆ ಎಲ್ಲಿಲ್ಲದ ಪ್ರೀತಿ. 'ಭಾವಸಂಗಮ' ಕವಿ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ ಅವರು ಹೊರತಂದಿದ್ದ  ಧ್ವನಿಸುರುಳಿಯೊಂದನ್ನು  ತಂದಿದ್ದ ಅದರಲ್ಲಿ ಖ್ಯಾತನಾಮ ಕವಿಗಳ ಕವಿತೆಗಳೆಲ್ಲ ಇದ್ದವು. ಅವುಗಳನ್ನು ಪ್ರೀತಿಯಿಂದ ಕೇಳುತ್ತಿದ್ದ. ಬೇಂದ್ರೆಯವರು ಬರೆದಿರುವ 'ಮುಗಿಲ ಮಾರಿಗೆ ರಾಗರತಿಯ...' ಕವಿತೆಯಲ್ಲಿ 'ಹೆಂಗೋ ಬಿದ್ದಿತ್ತ,,,,' ಎಂಬ ಸಾಲಿನ ಬಗ್ಗೆ 'ಹೆಂಗೋ ಬಿದ್ದತ್ತ ಎಂದರೇನು ವರಕವಿಯಾದವನು ಹೇಗೆ ಬಿದ್ದಿತೆಂಬುದನ್ನು ಹೇಳಬೇಕು' ಎಂದು ವಾದಿಸುತ್ತಿದ್ದ, ಅಡಿಗರ 'ಇರುವುದೆಲ್ಲವ ಬಿಟ್ಟು ಇರದುದ ನೆನೆಯತೊಡಗುವುದೇ ಜೀವನ' ಸಾಲುಗಳನ್ನು ಮೆಚ್ಚಿಕೊಂಡು ಆ ಕುರಿತು ನನ್ನೊಂದಿಗೆ ಹಂಚಿಕೊಂಡಿದ್ದ ಹೀಗೆ  ಕವಿತೆಗಳಲ್ಲಿಯ ಸಾಲುಗಳನ್ನು ಎತ್ತಿಕೊಂಡು ನನ್ನೊಂದಿಗೆ ಚರ್ಚೆಗೆ ಇಳಿಯುತ್ತಿದ್ದ. ಬರುಬರುತ್ತ ನನಗೂ ಕಾವ್ಯಗಳತ್ತ ಒಲವು ಮೂಡಿತು. 

ನನ್ನ ಅವನ ಸಂಬಂಧ ಕುರಿತಂತೆ ಒಂದು ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು. ಇಬ್ಬರೂ ಸೇರಿಯೇ ಬೆಳಗಾವಿ ಹಿಂದವಾಡಿಯಲ್ಲಿ ನಮ್ಮಪ್ಪ ಖರೀದಿಸಿದ್ದ ಜಾಗದಲ್ಲಿ ಮನೆ ಕಟ್ಟಿಕೊಂಡೆವು. ಇಬ್ಬರ ಮನೆಗಳು ಪೂರ್ಣಗೊಂಡವು. ಈಗ ಮನೆಗೊಂದು ಹೆಸರನ್ನಿಟ್ಟು ಗೃಹಪ್ರವೇಶ ಮಾಡಿ ಮನೆಯಲ್ಲಿರುವುದು ಅಷ್ಟೇ. ಮನೆ ಕಟ್ಟಿಸಲು ತೊಂದರೆಯಾಗಿರಲಿಲ್ಲ ಆದರೆ ಆ ಮನೆಗೊಂದು ಹೆಸರನ್ನು ಹುಡಕುವುದು ತುಂಬ ಕಷ್ಟದ ಕೆಲಸವಾಯಿತು. ‘ಗುಂಜ್‌’ ನಮ್ಮ ತಂದೆಯ ಹೆಸರು ‘ಬಾಳಕೃಷ್ಣ’ ಅದನ್ನೇ ಮನೆಗಿಟ್ಟ. 

ಈಗ ನನ್ನ ಸರದಿ ಬಂತು. ಮನೆಗೆ ಹೆಸರನ್ನಿಡುವ ವಿಚಾರ ತಲೆ ಸುತ್ತಲಾರಂಭಿಸಿತು. ‘ಸಾಹಿತಿಗಳಿವರು ಇವರು ಇಡುವ ಹೆಸರಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ’ ಎಂದು ಹಲವರು ಹೇಳಿ ನನ್ನ ಜವಾಬ್ಧಾರಿಯನ್ನು ಹೆಚ್ಚಿಸಿದರು.  ವಿಚಾರ ಮಾಡಿ, ಮಾಡಿ ಕೊನೆಗೆ ಹೆಸರನ್ನೊಂದು ಹುಡುಕಿ ತೆಗೆದೆ. ಹೆಸರೇನು ಗೊತ್ತಾ ‘ರಾಮಸಂ’ ಎಂದು. ಆ ಹೆಸರು ಮನೆಯ ತಲೆಬಾಗಿಲ ಮೇಲೆ ರಾರಾಜಿಸರಾಂಭಿಸತೊಡಗಿತು. ಮನೆಗೆ ಬಂದವರೆಲ್ಲ, ಅದನ್ನೇ ವಿಚಾರ ಮಾಡುತ್ತಾರೆ ‘ರಾಮಸಂ’ ಎಂದರೇನು ಎಂದು. ಕೆಲವೊಬ್ಬರು ಡಿಕ್ಷನರಿಯಲ್ಲಿ ಹುಡುಕಿ ನೋಡಿದವರೂ ಇದ್ದಾರೆ. ಆದರೆ ಈ ಹೆಸರಿನ ಅರ್ಥ ಸಿಕ್ಕಿಲ್ಲ. ಕೆಲವರು ಕುತೂಹಲದಿಂದ ಮನೆಗೆ ಕೇಳಲು ಬಂದವರೂ ಇದ್ದಾರೆ. ಅವರೆಲ್ಲರ ಸಹನೆಯನ್ನು ಪರೀಕ್ಷಿಸಲಿಲ್ಲ. ಅಲ್ಲದೇ ಈ ಲೇಖನವನ್ನು ಓದುತ್ತಿರುವ ನಿಮಗೂ ಕುತೂಹಲ ಮೂಡದೇ ಇರದು. ‘ರಾಮಸಂ’ ಮನೆಯ ಹೆಸರಿನ ಅರ್ಥವೇನೆಂದರೆ. ‘ರಾ’ ಅಂದರೆ ರಾಧಾಬಾಯಿ ತಾಯಿಯ ಹೆಸರು. ಇನ್ನು ‘ಮ’ ಅಂದರೆ ಮಧುಕರ ನನ್ನ ಹೆಸರು ಇನ್ನು ‘ಸಂ’ ಅಂದರೇನೇ ಸಂಜೀವ ಅಂದರೆ ನನ್ನ ತಮ್ಮ. ಈಗ ತಿಳಿಯಿತಲ್ಲವೆ ಈ ಹೆಸರಿನಲ್ಲಿ ಭಗವಂತ ರಾಮನೂ ಇದ್ದಾನೆೆ ಎಲ್ಲ ಸೇರಿ ‘ರಾಮಸಂ’ ಹೀಗೆ ನನ್ನ ಮನೆಯ ಹೆಸರಿನಲ್ಲಿ ಸಹ ‘ಗುಂಜ್‌’ ಇದ್ದಾನೆ.  

ಈಗ ನನಗೆ ಅರವತ್ತೊಂದು ವರ್ಷ. ಗುಂಜನಿಗೆ ಐವತ್ತಾರು ವರ್ಷ ಅಂದಿನಂತೆ ಈಗಲೂ ಸ್ನೇಹಿತರಂತೇ ಇದ್ದೇವೆ. ‘ಗುಂಜ್‌’ ತಿಲಕವಾಡಿ  ರಾಯ್‌ರೋಡದಲ್ಲಿಯ ಫ್ಲ್ಯಾಟ್‌ದಲ್ಲಿ ಇರುತ್ತಾನೆ. ನಾನು ಹಿಂದವಾಡಿ ಮೊದಲಿನ ಮನೆಯಲ್ಲಿಯೇ ಇದ್ದೇನೆ. ಈಗ ದಿನಾಲೂ ಮುಂಜಾನೆ ವಾಕಿಂಗ್‌ಗೆ ಇಬ್ಬರೂ ಸೇರಿಯೇ ಹೋಗಿರುತ್ತೇವೆ. ತಿಳಕವಾಡಿ ನಾಥಪೈ ಗಾರ್ಡನ್‌ದಲ್ಲಿ ಹತ್ತು ಸುತ್ತು ಸುತ್ತಾಡಿ ಉದಯಭವನದಲ್ಲಿ ಹಾಲನ್ನು ಕುಡಿದು ಮನೆಗೆ ಹೋಗುವಾಗ ದಿನಾಲೂ ಜಗಳವಾಡುವ ಕಾರ್ಯಕ್ರಮವಿದ್ದೇ ಇರುತ್ತದೆ. ಜಗಳದ ಕಾರಣವೆಂದರೆ ‘ಗುಂಜ್‌’ ತಮ್ಮ ಮನೆಗೆ ಬರುವಂತೆ ತುಂಬ ಕಾಡುತ್ತಾನೆ. ಇಬ್ಬರ ಜಗಳದಲ್ಲಿಯೇ ದಿನಾಲು ಸುಮಾರು ಅರ್ಧ ಗಂಟೆ ಹಾಳಾಗಲಾರಂಭಿಸಿತು. ಇದರಿಂದ ಬೇಸತ್ತು ‘ದಿನಾಲು ಹೀಗೆ ಕಾಡಬೇಡ ನಾನು ಬರುವುದಿಲ್ಲ’ ಎಂದು ಸಿಟ್ಟಿನಿಂದಲೇ ಹೇಳಿದೆ. ಅವನು ಮಾತನಾಡದೇ ಹೋಗಿ ಬಿಟ್ಟ ಮರುದಿನ ವಾಕಿಂಗ್ ಮುಗಿತು. ‘ಗುಂಜ್‌’ ಮಾತನಾಡದೇ ತನ್ನ ಮನೆಯತ್ತ ಹೊರಟು ಬಿಟ್ಟ. ‘ಮನೆಗೆ ಬಾ..’ ಎಂದು ಕಾಡುತ್ತಿದ್ದುದರಕ್ಕಿಂತ ಹೆಚ್ಚಿನ ನೋವು ಅವನು ಹಾಗೇ ಸುಮ್ಮನೆ ತನ್ನ ಮನೆ ಕಡೆಗೆ ಹೊರಟಾಗ ಆಯಿತು. ಅರ್ಧ ದಾರಿ ಮುಂದೆ ಹೋಗಿದ್ದ ಗುಂಜ್‌ನನ್ನು ಹಿಂಬಾಲಿಸಿ ಓಡುತ್ತ ಅವನ ಹೆಗಲ ಮೇಲೆ ಕೈ ಹಾಕಿದೆ. ಅವನೂ ನನ್ನ ಮುಖ ನೋಡಿ ಸಂತೃಪ್ತಿ ನಗು ನಕ್ಕ! 

- * * * -