ಕುಲ್ಗಾಮ್ನಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ಉಗ್ರರು ಸಾವು

ಶ್ರೀನಗರ, ಏಪ್ರಿಲ್ 4, ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಾಮ್ನಲ್ಲಿ ಶನಿವಾರ ಭದ್ರತಾ ಪಡೆಗಳು ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿ ನಾಲ್ಕು ಉಗ್ರರು ಹತರಾಗಿದ್ದಾರೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ ಕುಲ್ಗಾಮ್ ನ ಡಿಹೆಚ್ ಪೊರಾದಲ್ಲಿ  ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್ ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಶನಿವಾರ ಬೆಳಗಿನ ಜಾವ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿದ್ದಾಗ ಅಡಗಿ ಕುಳುತಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.ಗುಂಡಿನ ಚಕಮಕಿ ಮುಂದುವರೆದಂತೆ ಮತ್ತೊಬ್ಬ ಉಗ್ರ ಹತನಾಗಿದ್ದಾನೆ. ಇತ್ತೀಚಿನ ವರದಿಗಳು ಬರುವವರೆಗೆ ಕಾರ್ಯಾಚರಣೆ ಮುಂದುವರೆದಿತ್ತು. ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಉಗ್ರರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಈ ಪ್ರದೇಶವನ್ನು ಭದ್ರತಾಪಡೆಗಳು ಸುತ್ತುವರಿದಿವೆ ಎಂದು ಮೂಲಗಳು ತಿಳಿಸಿವೆ.