ಶ್ರೀನಗರ, ಮೇ 19, ಶ್ರೀನಗರದದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದು, ಭದ್ರತಾ ಪಡೆಯ ಮೂವರಿಗೆ ಗಾಯಗಳಾಗಿವೆ. ನವಕಾಡಲ್‌ನಲ್ಲಿ ಜನನಿಬಿಡ ಕನೆಮಜಾರ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ವಿಶೇಷ ಪಡೆ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭದ್ರತಾ ಪಡೆಗಳು ಗಮ್ಯ ಸ್ಥಾನದತ್ತ ಸಾಗುತ್ತಿರುವಾಗ, ಅಡಗಿಕೊಂಡಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದರು. "ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿದರು. ಸೋಮವರ ತಡರಾತ್ರಿಯಲ್ಲಿ ಈ ಗುಂಡಿನ ಚಕಮಕಿ ನಡೆಯಿತು. "ಬೆಳಗಿನ ಜಾವ ಹುಡುಕಾಟದ ಸಮಯದಲ್ಲಿ ಗುಂಡಿನ ಚಕಮಕಿ ಪುನರಾರಂಭವಾಗಿ ಈವರೆಗೆ ಓರ್ವ ಉಗ್ರ ಮೃತಪಟ್ಟಿದ್ದಾನೆ” ಎಂದು ತಿಳಿಸಿದ್ದಾರೆ. ಉಗ್ರರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಕೊನೆಯ ವರದಿಗಳು ಬಂದಾಗ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿತ್ತು ಎಂದಿದ್ದಾರೆ. ಭದ್ರತಾ ಕಾರಣಗಳಿಗಾಗಿ ಶ್ರೀನಗರದಲ್ಲಿ ಸೆಲ್ಯುಲಾರ್ ಸೇವೆ, ಬಿಎಸ್ಎನ್ಎಲ್ ಮತ್ತು ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.