ಜಿಲ್ಲೆಯ ಪ್ರತಿ ಮನೆ, ಕುಟುಂಬಗಳಿಗೆ ತಲುಪುವಂತೆ ಗ್ಯಾರಂಟಿ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು: ಜಿಲ್ಲಾಧಿಕಾರಿ

 ಜಿಲ್ಲೆಯ ಪ್ರತಿ ಮನೆ, ಕುಟುಂಬಗಳಿಗೆ ತಲುಪುವಂತೆ ಗ್ಯಾರಂಟಿ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು: ಜಿಲ್ಲಾಧಿಕಾರಿ  Guarantee Utsav should be organized in a meaningful way to reach every home and family in the distri



ಧಾರವಾಡ ಜ.03: ನಾಳೆ ಸೋಮವಾರ ಜನೆವರಿ 5 ರಂದು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಉತ್ಸವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಮಾದರಿಯಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು (ಜ.3) ಮಧ್ಯಾಹ್ನ ಧಾರವಾಡ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಉತ್ಸವದ ಪೂರ್ವಭಾವಿ ಸಭೆ ಉದ್ದೇಶಿಸಿ, ಮಾತನಾಡಿದರು. 

ರಾಜ್ಯದ ಅಭಿವೃದ್ಧಿಯಲ್ಲಿ ಮತ್ತು ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯು ಗ್ಯಾರಂಟಿ ಉತ್ಸವದ ಮೂಲಕ ಪ್ರತಿ ಮನೆಗಳಿಗೆ ಮತ್ತು ವ್ಯಕ್ತಿಗಳಿಗೆ ತಲುಪಬೇಕು. ಯೋಜನೆಗಳ ಲಾಭ ಎಲ್ಲ ಅರ್ಹ ನಾಗರಿಕರಿಗೂ ಸಿಗುವಂತೆ ಮಾಡಬೇಕು. ಈ ಹಿನ್ನಲೆಯಲ್ಲಿ ಗ್ಯಾರಂಟಿ ಉತ್ಸವವು ಶಿಸ್ತುಬದ್ಧವಾಗಿ ಜರುಗಬೇಕೆಂದು ಅವರು ಹೇಳಿದರು.  

ಗ್ಯಾರಂಟಿ ಉತ್ಸವದ ಯಶಸ್ವಿಗಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿ, ಕಾರ್ಯಕ್ರಮದ ಸುವ್ಯವಸ್ಥಿ ಆಯೋಜನೆಗೆ ಆದೇಶಿಸಿದ್ದಾರೆ. ಇದು ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿರುವುದರಿಂದ ಸಮಿತಿಗಳಿಗೆ ನೇಮಕವಾಗಿರುವ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು. ತಮಗೆ ನೀಡಿರುವ ಜವಾಬ್ದಾರಿಗಳನ್ನು ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.  

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ ಸರಿಯಾದ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿ, ರಾಜ್ಯ ಮಟ್ಟದಲ್ಲಿ ಧಾರವಾಡ ಜಿಲ್ಲೆಯನ್ನು ಮಾದರಿಯಾಗಿ ಪರಿಗಣಿಸುವಂತಹ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಬೇಕು. ಯಾವುದೇ ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಎಲ್ಲಾ ಇಲಾಖೆಯ ಅಧಿಕಾರಿಗಳು ಒಗ್ಗಟ್ಟಿನಿಂದ, ಸಮನ್ವಯದೊಂದಿಗೆ ಪರಸ್ಪರ ಚರ್ಚಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸಾರಿಗೆ, ಊಟದ ವ್ಯವಸ್ಥೆಯನ್ನು ಸಮರ​‍್ಕವಾಗಿ ಮಾಡಬೇಕು ಹಾಗೂ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಗ್ಯಾರಂಟಿ ಉತ್ಸವ ಕಾರ್ಯಕ್ರಮದ ಪ್ರತಿಯೊಂದು ಹಂತವನ್ನು ಪೂರ್ವಯೋಜನೆಯೊಂದಿಗೆ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ಅಧಿಕಾರಿಯೂ ತನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಅವರು ಹೇಳಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ತಲುಪುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಮಾತನಾಡಿ, ಗ್ಯಾರಂಟಿ ಉತ್ಸವದ ಯಶಸ್ವಿಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ತಾಲೂಕು ಅಧ್ಯಕ್ಷರಿಗೆ ಹಾಗೂ ಯೋಜನೆಗಳ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಪೂರ್ವಭಾವಿ ಸಭೆಗಳನ್ನು ಜರುಗಿಸಿ, ಸಿದ್ಧತೆಯನ್ನು ಪರೀಶೀಲಿಸಲಾಗಿದೆ. ಯೋಜನೆಗಳ ಮಹತ್ವ ಮತ್ತು ಲಾಭ ಎಲ್ಲರಿಗೂ ಮನವರಿಕೆ ಆಗುವಂತೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿಸಲು ಅಧಿಕಾರಿಗಳು ಕೆಲಸ ನಿರ್ವಹಿಸಬೇಕೆಂದು ಹೇಳಿದರು.  

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಮುರಗಯ್ಯಸ್ವಾಮಿ ವಿರಕ್ತಮಠ, ಮಹಾನಗರ ಪಾಲಿಕೆ ವ್ಯಾಪ್ತಿ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರಾದ ರತ್ನಾ ತೇಗೂರಮಠ, ಶಾಂತಪ್ಪ ಅಕ್ಕಿ, ಸುಧೀರ ಬೋಳಾರ, ರೇಹನ್ ರಝಾ ಐನಾಪೂರಿ, ವಿರೇಶ ಕಡಕೋಳಮಠ ಅವರು ವೇದಿಕೆಯಲ್ಲಿದ್ದರು.  

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿ, ವಂದಿಸಿದರು. ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಪ್ರಾಧಿಕಾರದ ಸದಸ್ಯರಾದ ವಿನಾಯಕ ಕುರುಬರ, ಅರವಿಂದ.ಶಿ.ಏಗನಗೌಡರ, ಬಸಪ್ಪ ಮಹಾಬಳೇಶ್ವರ ಬಾವಕಾರ, ಮಂಜುನಾಥ ರಾ.ಮಾಯಣ್ಣವರ, ವರ್ಧಮಾನಗೌಡ.ಲ.ಹಿರೇಗೌಡರ, ಶಿವಾನಂದ ಭೂಮಣ್ಣವರ, ಅಬ್ದುಲ್ ರಸೀದ ಭೋಲಾಭಾಯಿ,  ಗೀತಾ ಥಾವಂಶಿ, ಶಿವಕುಮಾರ ಕೆ. ಖಂಡೆಕರ ಸೇರಿದಂತೆ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ಗ್ಯಾರಂಟಿ ಯೋಜನೆಗಳ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.