ಹೊಸ ಅನ್ವೇಷಣೆ, ಪ್ರಯೋಗಗಳಿಂದಲೇ ಶಿಕ್ಷಣ ಕ್ಷೇತ್ರದ ಬೆಳವಣಿಗೆ: ಬಸಲಿಂಗಯ್ಯ ಹಿರೇಮಠ

ಹೊಸ ಅನ್ವೇಷಣೆ, ಪ್ರಯೋಗಗಳಿಂದಲೇ ಶಿಕ್ಷಣ ಕ್ಷೇತ್ರದ ಬೆಳವಣಿಗೆ: ಬಸಲಿಂಗಯ್ಯ ಹಿರೇಮಠ  Growth in the education sector comes from new innovations and experiments: Basalingayya Hiremath

ಸಿಂದಗಿ 18 : ಕಾಲಕ್ಕೆ ತಕ್ಕಂತೆ ಹೊಸ ಅನ್ವೇಷಣೆಗಳಿಲ್ಲದೆ ಬದುಕು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ಹೊಸ ಪ್ರಯೋಗಗಳು ಹಾಗೂ ಹೊಸ ಆಲೋಚನೆಗಳು ಅಗತ್ಯವಾಗಿವೆ ಎಂದು ಶಿಕ್ಷಕ ಹಾಗೂ ಸಾಹಿತಿ ಬಸಲಿಂಗಯ್ಯ ಹಿರೇಮಠ ಹೇಳಿದರು.  ಪಟ್ಟಣದ ಶಾಂತವೀರ ನಗರದ  ಸಂಗಮೇಶ್ವರ ವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಶಾಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಕೇವಲ ಪಠ್ಯ ಬೋಧನೆಗೆ ಸೀಮಿತರಾಗದೆ, ದೇಶೀಯ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು. ನಂದಿ ಅಕಾಡೆಮಿಯ ಸಂಸ್ಥಾಪಕ ಪ್ರೇಮಾನಂದ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಅಗತ್ಯವಾಗಿವೆ ಎಂದರು.  

ಬಂದಾಳ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಸಂಗಮೇಶ್ವರ ವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಅರ್ಥಪೂರ್ಣವಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ರಾಗ ರಂಜನಿ ಸಂಗೀತ ಅಕಾಡೆಮಿಯ ಡಾ. ಪ್ರಕಾಶ್ ಅವರು ಸುಮಧುರ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಸಂಸ್ಥೆಯ ಸಂಸ್ಥಾಪಕ ಗುರುನಾಥ ಅರಳಗುಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅಭಿಷೇಕ್ ಸಿಂಗ್ರೆ, ಪ್ರವೀಣ ಪಡಶೆಟ್ಟಿ, ಶರಣಮ್ಮ ಹಂದರಾಳ, ಸುಧಾ ಕೂಚಬಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀದೇವಿ ತಾಳಿಕೋಟಿ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ಅರಳಗುಂಡಗಿ ವಂದಿಸಿದರು.