ಬೆಂಗಳೂರು, ಜೂನ್ ೩೦: ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ೪೦ ವರ್ಷಗಳನ್ನು ಪೂರ್ಣಗೊಳಿಸಿರುವ ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಜೆಡಿ ಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಂಗಳವಾರ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.೧೯೮೦ರ ಜೂನ್ ೩೦ ರಂದು ಬಸವರಾಜ ಹೊರಟ್ಟಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯದ ಶಿಕ್ಷಣ ಸಚಿವರಾಗಿ, ಮೇಲ್ಮನೆಯ ಸಭಾಪತಿಗಳಾಗಿ ಸೇವೆ ಸಲ್ಲಿಸಿರುವ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ರಾಜ್ಯ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ ೪೦ ವರ್ಷಗಳಾಗಿದ್ದು. ಅವರ ಈ ಸುಧೀರ್ಘ ಸೇವೆ ಭಾರತದ ರಾಜಕೀಯ ಇತಿಹಾಸದ ಒಂದು ದಾಖಲೆ ಎಂದು ಟ್ವೀಟ್ ನಲ್ಲಿ ಬಣ್ಣಿಸಿರುವ ದೇವೇಗೌಡರು, ಶುಭಾಶಯ ಸಲ್ಲಿಸಿದ್ದಾರೆ.