ಕನ್ನಡ ಕಟ್ಟಾಳು ಡಾ. ಸಿ. ಕೆ. ಜೋರಾಪೂರ

ಸುಮಾರು 47 ವರ್ಷಗಳಿಂದ ನಿರಂತರವಾಗಿ ಸಂಚಾಲಕರಾಗಿ ನಾಡದೇವಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಬಂದಿರುವುದರಿಂದ ಜಿಲ್ಲೆಯಾದ್ಯಂತ “ನಾಡಹಬ್ಬದ ಜೋರಾಪೂರ” ಎಂದೇ ಗುರುತಿಸಲ್ಪಡುವ ಡಾ. ಸಿ. ಕೆ. ಜೋರಾಪೂರ 


ಗಡಿಭಾಗದ ಬೆಳಗಾವಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವವರು ಡಾ. ಸಿ. ಕೆ. ಜೋರಾಪೂರವರು. ಅವರು ಬೆಳಗಾವಿಯಲ್ಲಿ ಮರಾಠಿಗರ ಗಡಿ ತಂಟೆಯ ವಿಷಯವಾಗಿ ಹೊಡೆದಾಟ, ಬಡೆದಾಟ, ಕನ್ನಡ ವಿರೋಧಿ  ಪುಂಡಾಟಗಳನ್ನು ಎದುರಿಸಿದ್ದು, ಅಲ್ಲದೇ 1976 ರಿಂದ ಇಲ್ಲಿಯವರೆಗೆ ನಾಡಹಬ್ಬದ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅವರು ‘ನಾಡಹಬ್ಬದ ಜೋರಾಪೂರ’ ಎಂದೇ ಪ್ರಸಿದ್ಧರಾಗಿದ್ದಾರೆ. 

ಚಿಂತಾಮಣಿ ಜೋರಾಪೂರ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ 1950ರ ಅಕ್ಟೋಬರ 24 ರಂದು ಜನಿಸಿದರು. ತಂದೆ ಕೇಶವರಾವ, ತಾಯಿ ಮಾನಂದಾ. ಅವರ ತಾಯಿ ಮಾನಂದಾರವರು ರಾಮಾಯಣ, ಮಹಾಭಾರತದ ಪುಸ್ತಕಗಳನ್ನು ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಕೊಟ್ಟು ಓದಲು ಹಚ್ಚುತ್ತಿದ್ದರು. ಕಡುಬಡತನದಲ್ಲಿ ಬೆಳೆದ ಚಿಂತಾಮಣಿ ಅವರಿಗೆ 6ನೆಯ ತರಗತಿಯಲ್ಲಿದ್ದಾಗಲೇ ತಂದೆ ಕೇಶವರಾವ್ ತೀರಿಕೊಂಡರು. ನಂತರ ತಾಯಿಯೇ ಇವರನ್ನು ಕಷ್ಟಪಟ್ಟು ಓದಿಸಿದರು. ಅವರು ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 

ಕನ್ನಡತನ, ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡ ಜೋರಾಪೂರ ಅವರು ಮೂವತ್ತು ಮೌಲ್ಯಯುತ ಗ್ರಂಥಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಭವ್ಯ ಭಾರತ ಯಾತ್ರೆ, ಜಿಹಾದ ಮತ್ತು ಉಗ್ರಗಾಮಿ, ವಸುಧಾರಾ, ಬೆಳಗಾವಿ ಕನ್ನಡ ಚಳುವಳಿಗಳು ಮತ್ತು ನಾಡಹಬ್ಬ, ಪಾಕ್ ಸಮರ ಹಾಗೂ ಭಯೋತ್ಪಾದನೆ, ರಾಘವೇಂದ್ರರು ಅವರ ಕಂದ ಸುಶಮೀಂದ್ರರು, ಬಸವಣ್ಣ ಮತ್ತು ಸಪ್ತ ಸೂತ್ರಗಳು, ಶಬರಿಮಲೆಯ ಸ್ವಾಮಿ ಅಯ್ಯಪ್ಪ, ಶ್ರೀಹರಿ ವಾಯು ಗುರುಗಳ ಅಷ್ಟೋತ್ತರ ಶತನಾಮಾವಳಿ, ಸೊಲ್ಲಾಪುರ (ಸೊನ್ನಲಗಿ) ಸಿದ್ಧರಾಮೇಶ್ವರ ಚರಿತ್ರೆ, ಕರ್ನಾಟಕದಲ್ಲಿ ಕ್ಷತ್ರಿಯ ಪಂಗಡಗಳು ಭಾಗ 1 ಮತ್ತು ಭಾಗ 2, ಸೂರ್ಯವಂಶ ಕ್ಷತ್ರಿಯರ ಇಂದಿನ ಸ್ಥಿತಿಗತಿ, ಮಹಾನಂದಾ, ಮುಕ್ತಿಮಠದ ಮುಕ್ತಿದಾತ, ಸಮೃದ್ಧ ಕರ್ನಾಟಕ ಸಮೀಕ್ಷೆ, ಪಾದ ಸೇರಿದಳು. ನೆನಪಿನ ಸುಳಿಯಲ್ಲಿ, ದಿವ್ಯ ಭಾರತಿ, ಕಲಿಯುಗದ ಕಲ್ಪವೃಕ್ಷ ರಾಘವೇಂದ್ರರಾಯರು, ದಶಾವತಾರ, ತಾರತಮ್ಯ ಭಜನಾ ಮಂಜರಿ, ಕಠೋರ ಅನುಷ್ಠಾನಗಳ ತಪಸ್ವಿ ಶಿವಸಿದ್ಧ ಸೋಮೇಶ್ವರ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ​‍್ಿಸಿದ್ದಾರೆ. ಅಲ್ಲದೇ ವಿಜಯದುಂದುಭಿ, ಅಮೃತದುಂದುಭಿ ಮತ್ತು ವೈದ್ಯಭೂಷಣ ಸಂಪಾದನಾ ಕೃತಿಗಳನ್ನು ಅವರು ನೀಡಿದ್ದಾರೆ. 

ಭಾರತದ ಎಲ್ಲ ಕ್ಷೇತ್ರಗಳ ಪರಿಚಯವನ್ನು ಕಥಾ ರೂಪದಲ್ಲಿ ಓದುಗರಿಗೆ ಪರಿಚಯಿಸಿದ್ದರಿಂದ ವಸುಧಾರಾ ಕಾದಂಬರಿ ರಂಜಿಸುವದರೊಂದಿಗೆ ವಿಶೇಷ ಜ್ಞಾನವನ್ನು ನೀಡುವಲ್ಲಿ ಸಫಲವಾಗಿದೆ. ವಸುಧಾರಾ ಕಾದಂಬರಿಯು ಮೂರನೆಯ ಆವೃತ್ತಿಯನ್ನು ಹೊಂದಿರುವದು ಅದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಬೆಳಗಾವಿ ಕನ್ನಡ ಚಳುವಳಿಗಳು ಮತ್ತು ನಾಡಹಬ್ಬ ಕೃತಿಯಲ್ಲಿ ನಾಡಿನ ಇತಿಹಾಸ ಪರಂಪರೆ ಮತ್ತು ವೈಭವಗಳ ಜೊತೆಗೆ ಬೆಳಗಾವಿಯ ಕನ್ನಡಪರ ಚಳುವಳಿಗಳನ್ನು ಅನನ್ಯವಾಗಿ ಸೆರೆಹಿಡಿದ್ದಾರೆ. ದಶಾವತಾರ 500 ಪುಟಗಳ ಕೃತಿಯು ಇಂದಿನ ಮತ್ತು ಮುಂದಿನ ಪೀಳಿಗೆಯ ಧರ್ಮಾಸಕ್ತರಿಗೆ ಬಹಳ ಉಪಯುಕ್ತ ಕೃತಿಯಾಗಿದೆ. ಅವರು ರಚಿಸಿದ ಕಲಿಯುಗದ ಕಲ್ಪವೃಕ್ಷ ರಾಘವೇಂದ್ರರಾಯರು ಮತ್ತು ತಾರತಮ್ಯ ಭಜನಾ ಮಂಜರಿ ಗ್ರಂಥಗಳು ಮಂತ್ರಾಲಯದ ಪೂಜ್ಯರಿಂದ ಬಿಡುಗಡೆಗೊಂಡಿವೆ. ಅವರ ಹಿಂದುಸ್ತಾನದ ಪಾವನ ಯಾತ್ರೆ, ಭವ್ಯ ಭಾರತ ಯಾತ್ರೆ ಭಾರತದಾದ್ಯಂತ ಮಾರಾಟ ಕಂಡು ಅಪಾರ ಬೇಡಿಕೆ ಪಡೆದಿದೆ. ಸದಾ ನಾಡು-ನುಡಿ, ರಾಷ್ಟ್ರೀಯತೆ, ಧರ್ಮ ರಕ್ಷಣೆಗಳ ಚಿಂತನೆ ನಡೆಸುವ ಡಾ. ಸಿ. ಕೆ. ಜೋರಾಪೂರ ಅವರು ಮೂರು ಕಾದಂಬರಿ, ಎರಡು ಕವನ ಸಂಕಲನ, ಮೂರು ಪ್ರವಾಸ ಕಥನ, ಎರಡು ಶರಣ ಸಾಹಿತ್ಯ ಕೃತಿ, ಕ್ಷತ್ರಿಯ ಸಮಾಜದ ಕುರಿತು ಎರಡು ಅಧ್ಯಯನ ಗ್ರಂಥಗಳು, ರಾಷ್ಟ್ರೀಯ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ನಾಲ್ಕಾರು ಕೃತಿಗಳು ಹೀಗೆ 30 ಕೃತಿಗಳನ್ನು ನೀಡಿ ಓದುಗರ ವಲಯದಲ್ಲಿ ಚಿರಪರಿಚಿತರೆನಿಸಿದ್ದಾರೆ. 

ನಡೆದಾಡುವ ದೇವರು ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು ಮಹಾಸ್ವಾಮಿಗಳು ಜೋರಾಪೂರ ಅವರ “ಭವ್ಯ ಭಾರತ ಯಾತ್ರೆ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತ “ಜೋರಾಪೂರ ಅವರೇ ಈ ಕೃತಿಯ ಮೂಲಕ ಇಡೀ ಭವ್ಯ ಭಾರತದ ದರ್ಶನದ ಬಗ್ಗೆ ತಿಳಿಸಿದ್ದಿರಿ. ಸಕಲರ ಚಿಂತೆಗಳನ್ನು ಮರೆಯಿಸುವ ಮಣಿಯೇ ಚಿಂತಾಮಣಿ. ಎಲ್ಲಿ ರಾಮತೀರ್ಥ...? ಎಲ್ಲಿ ಕೈಲಾಸ ಪರ್ವತ? ಅಖಂಡ ಹಿಂದುಸ್ಥಾನವನ್ನು ಆರಾಧಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಮಿಂದು ಎಂದಿದ್ದಾರೆ. ಆ ಅನುಭವದೊಂದಿಗೆ ರಚಿಸಿದ ಈ ಗ್ರಂಥ ಅಮೋಗ ಕೃತಿ ‘ಭವ್ಯ ಭಾರತ ಯಾತ್ರೆ’. ಈ ಸೇವೆಯೊಂದಿಗೆ ಬಡಬಗ್ಗರಿಗೂ ಆ ಪುಣ್ಯ ಕ್ಷೇತ್ರಗಳಿಗೆ ಕರೆದುಕೊಂಡು ಹೋಗುವ ಸೇವೆಯನ್ನು ಮಾಡಲು ಸಾಧ್ಯವಾದರೆ ಮಾಡಿರಿ” ಎಂದು ಶ್ರೀಗಳು ಹೇಳಿದಾಗ ಜೋರಾಪೂರ ಅವರು “ಶ್ರೀಗಳೇ ತಾವು ಹೇಳಿದಂತೆ ಜನಸಾಮಾನ್ಯರನ್ನು ಸೇವಾಭಾವನೆಯಿಂದ ಯಾತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಆ ಅನುಭವವಿದೆ. ಇದು ತಮ್ಮ ಆಜ್ಞೆ ಎಂದು ನಾನು ಭಾವಿಸಿ ಈ ಸೇವೆಯನ್ನು ಆರಂಭಿಸುತ್ತೇನೆ” ಎಂದು ಹೇಳಿ, ಅದರಂತೆ ಜೋರಾಪೂರ ಅವರು 2017 ರಿಂದ ಇವಾಗಿನವರೆಗೂ ಏಳು-ಎಂಟು ಬಾರಿ ಹಿಮಾಲಯದ ಚಾರಧಾಮ (ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ), ಹರಿದ್ವಾರ, ಹೃಷಿಕೇಶ, ದೆಹಲಿ, ಮಥುರಾ, ಕಾಶಿ ಯಾತ್ರೆಯನ್ನು ಮಾಡಿಸುವ ಅನುಪಮ ಸೇವೆಯನ್ನು ಶ್ರೀಗಳ ಆಜ್ಞೆಯಂತೆ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿರುವಂಥವರು ಜೋರಾಪೂರ ಅವರು. ಯಾತ್ರಾರ್ಥಿಗಳಿಗೆ ಕ್ಷೇತ್ರ ದರ್ಶನ ಮಾಡಿಸುವುದಲ್ಲದೇ ಆ ಕ್ಷೇತ್ರದ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಯಾತ್ರಾರ್ಥಿಗಳಿಗೆ ತಿಳಿಸಿ ಹೇಳುವ ಕಾರ್ಯವನ್ನು ಬಹಳ ಸೊಗಸಾಗಿ ಮಾಡುತ್ತಾರೆ. 

ಪ್ರತಿವರ್ಷ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಗಡಿನಾಡು ಜಿಜ್ಞಾಸೆಯ ನಗರ ಬೆಳಗಾವಿಯಿಂದ ಯಾವ ಲಾಭ-ನಷ್ಟ ಎಂಬುವುದನ್ನು ನೋಡದೆ ಬಹಳ ಕನ್ನಡಾಭಿಮಾನದಿಂದ ಮತ್ತು ರಾಷ್ಟ್ರಾಭಿಮಾನದಿಂದ ಇವರೊಬ್ಬರೇ ‘ಪ್ರಹ್ಲಾದ ಪ್ರಕಾಶನ’ ಪುಸ್ತಕ ಮಳಿಗೆಯನ್ನು ಇಡುತ್ತಾ ಬಂದಿದ್ದಾರೆ.  

ಡಾ. ಸಿ. ಕೆ. ಜೋರಾಪೂರ ಅವರು ನಾಡಿನ ವಿವಿಧ ಸಂಘ-ಸಂಸ್ಥೆಗಳ ಜೊತೆಗೆ ಒಡನಾಟವನ್ನು ಹೊಂದಿದ್ದಾರೆ. ಅವರು ಬೆಳಗಾವಿಯಲ್ಲಿ 1976 ರಿಂದ ನಾಡಹಬ್ಬದ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಂಥ ಗಡಿನಾಡು ಪ್ರದೇಶದಲ್ಲಿ 97 ವರ್ಷಗಳಿಂದ ನಿರಂತರವಾಗಿ ನಡೆದುಬಂದ ನಾಡಹಬ್ಬದ ಇತಿಹಾಸದಲ್ಲಿ ಇವರೇ 47 ವರ್ಷಗಳ ಕಾಲ ಸಂಚಾಲಕರಾಗಿ ನಾಡದೇವಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅವರಿಗೆ ಜಿಲ್ಲೆಯಾದ್ಯಂತ ನಾಡಹಬ್ಬದ ಜೋರಾಪೂರ ಎಂದೇ ಕರೆಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿ, ಬೆಳಗಾವಿಯ ಸೂರ್ಯವಂಶ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿ, ಬೆಳಗಾವಿ ರಾಮತೀರ್ಥನಗರದಲ್ಲಿರುವ ‘ಬಸವ ಬಳಗ’ದ ಉಪಾಧ್ಯಕ್ಷರಾಗಿ, ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಯುವಜನ ಸಂಘದ ಅಧ್ಯಕ್ಷರಾಗಿ ಜೋರಾಪೂರ ಅವರು ನಾಡಿನ ವಿವಿಧ ಸಂಘ-ಸಂಸ್ಥೆಗಳಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಡಾ. ಜೋರಾಪೂರ ಅವರು ‘ಪರೀಕ್ಷೆ’ ಎಂಬ ಪ್ರಶಸ್ತಿ ವಿಜೇತ ಚಲನಚಿತ್ರದಲ್ಲಿ ಪಂಚಾಯತಿಯ ಮುಖಂಡರ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೇ ದೂರದರ್ಶನ ಚಂದನದ ಬೆಳಗು ಕಾರ್ಯಕ್ರಮದಲ್ಲಿ ಟಿ.ವ್ಹಿ.1 ಚಾನೆಲ್‌ದಲ್ಲಿ ಕ್ಷತ್ರಿಯರ ಮೂಲ ‘ವಿಷಯದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು. 

ಡಾ. ಸಿ. ಕೆ. ಜೋರಾಪೂರ ಅವರ ಸಾಹಿತ್ಯ-ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ನಾಡಿನ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಕರ್ನಾಟಕ ಘನ ಸರ್ಕಾರವು 2018ರಲ್ಲಿ ಸಾಹಿತ್ಯೀಕ, ಸಂಘಟಕ, ಸಾಮಾಜಿಕ ಕಾರ್ಯಕರ್ತರಾಗಿ ಸಲ್ಲಿಸಿದ ಸೇವೆಗೆ ಸಂಕೀರ್ಣ ಕ್ಷೇತ್ರದಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಇನ್ನು ರಾಜ್ಯಮಟ್ಟದ ‘ಸರ್ ಎಂ. ವಿಶ್ವೇಶ್ವರಯ್ಯ ದಶಮಾನೋತ್ಸವ ಪ್ರಶಸ್ತಿ’, ಅತ್ತಿಮಬ್ಬೆ ರಾಷ್ಟ್ರೀಯ ಪ್ರತಿಷ್ಠಾನದಿಂದ ವಸುಧಾರಾ ಕಾದಂಬರಿಗೆ ‘ರನ್ನ ಸಾಹಿತ್ಯ ಪ್ರಶಸ್ತಿ’, ‘ಗೋರೂರು ಸಾಹಿತ್ಯ ಪ್ರಶಸ್ತಿ’, ‘ಬುದ್ಧ ಶಾಂತಿ ಪ್ರಶಸ್ತಿ’, ‘ವಿಶ್ವ ಕಲಾರತ್ನ ಪ್ರಶಸ್ತಿ’, ‘ಸಿರಿಗನ್ನಡ ಪ್ರಶಸ್ತಿ’, ‘ಕರ್ನಾಟಕ ಜ್ಯೋತಿ ಪ್ರಶಸ್ತಿ’, ‘ಕರ್ನಾಟಕ ರತ್ನಶ್ರೀ ಪ್ರಶಸ್ತಿ’, ನಾಗನೂರ ರುದ್ರಾಕ್ಷಿ ಮಠದ ‘ಕನ್ನಡ ನುಡಿಸಿರಿ ಪ್ರಶಸ್ತಿ’, ‘ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ’, ‘ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ’ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಜನರಾಗಿದ್ದಾರೆ. ಅಲ್ಲದೇ ಬೆಂಗಳೂರಿನ ವರ್ಚುಯಲ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವವು ಲಭಿಸಿದೆ. 

ಸಧ್ಯ ಬೆಳಗಾವಿಯ ರಾಮತೀರ್ಥನಗರದಲ್ಲಿ ನೆಲೆಸಿರುವ ಡಾ. ಸಿ. ಕೆ. ಜೋರಾಪೂರ ಅವರು ಮಕ್ಕಳು, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸದಾ ಮುನ್ನಡೆಯುತ್ತಿರುವ ಜೋರಾಪೂರವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಕನ್ನಡ ತಾಯಿಯ ಭುವನೇಶ್ವರಿಯ ಮಗನಾಗಿ, ರಾಷ್ಟ್ರಾಭಿಮಾನಿಯಾಗಿ ಸದಾ ಶ್ರಮಿಸುವ ಸಹಕಾರ ಮೂರ್ತಿಯಾಗಿದ್ದಾರೆ. ಕನ್ನಡದ ಕಟ್ಟಾಳುಗಳಾಗಿರುವ ಜೋರಾಪೂರ ಅವರದು ನಾಡು-ನುಡಿ, ರಾಷ್ಟ್ರಾಭಿಮಾನಕ್ಕೆ ಸಮರ​‍್ಿತ ವ್ಯಕ್ತಿತ್ವ. ಅವರದು ಸುಸಂಸ್ಕೃತ ಆರೋಗ್ಯಪೂರ್ಣವಾದ ಮನಸ್ಸು. ಸಂಪರ್ಕಿಸಿ : 9845144194 

- * * * -