ವಿನೋದ ಹೊನಕಾಂಬಳೆ ನಾಯ್ಕ ಹುದ್ದೆಗೆ ಬಡ್ತಿ ಗ್ರಾಮದಲ್ಲಿ ಅದ್ದೂರಿ ಸ್ವಾಗತ

ಕಾಗವಾಡ 01: ಶೇಡಬಾಳ ಗ್ರಾಮದ ಸುಪುತ್ರ ವಿನೋದ ಹೊನಕಾಂಬಳೆ ಇವರು ಕಳೆದ 7 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಅವರು ನಾಯ್ಕ ಹುದ್ದೆಗೆ ಬಡ್ತಿ ಪಡೆದುಕೊಂಡು ಸ್ವಗ್ರಾಮಕ್ಕೆ ಆಗಮಿಸಿದ್ದು, ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. 

ಮಂಗಳವಾರ ದಿ. 01 ರಂದು ಶೇಡಬಾಳ ಪಟ್ಟಣಕ್ಕೆ ಆಗಮಿಸಿದ ಅವರು ಮೊದಲಿಗೆ ಗ್ರಾಮದೇವರಾದ ಬಸವೇಶ್ವರ ದೇವರ ದರ್ಶನ ಪಡೆದುಕೊಂಡರು. ಬಳಿಕ ಗ್ರಾಮಸ್ಥರು ಮತ್ತು ಬಂಧುಗಳು ಸೇರಿ ಅವರನ್ನು ಸನ್ಮಾನಿಸಿದರು. ಮಹಿಳೆಯರು ಅವರನ್ನು ಆರತಿ ಎತ್ತಿ ಸ್ವಾಗತಿಸಿಕೊಂಡರು. 

ಈ ಸಮಯದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಯುವಕರು ಭಾರತೀಯ ಸೇನೆಯಲ್ಲಿ ಸೇರಿ, ದೇಶ ಸೇವೆ ಮಾಡಬೇಕು. ಸೇನೆಯಲ್ಲಿ ಸೇರಲು ಸಾಧ್ಯವಾಗದೇ ಹೋದರೂ ಇನ್ನಾವುದೋ ಕ್ಷೇತ್ರದಲ್ಲಿ ದೇಶ ಸೇವೆ ಮಾಡಿ ಎಂದು ಯುವಕರಿಗೆ ಕರೆ ನೀಡಿದರು. 

2018 ರಲ್ಲಿ ಸೇನೆಯ ಮದ್ರಾಸ್ ರೆಜಿಮೆಂಟ್‌ನಲ್ಲಿ ಸಿಪಾಯಿಯಾಗಿ ದೇಶ ಸೇವೆ ಪ್ರಾರಂಭಿಸಿರುವ ವಿನೋದ ಹೊನಕಾಂಬಳೆ ದೇಶದ ವಿವಿಧ ಕಡೆಗಳಲ್ಲಿ ದೇಶ ಸೇವೆ ಮಾಡಿದ್ದಾರೆ. ಜೊತೆಗೆ ಕಳೆದ ವರ್ಷ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 

ಈ ಸಮಯದಲ್ಲಿ ತಂದೆ ಶಶಿಕಾಂತ ಹೊನಕಾಂಬಳೆ, ತಾಯಿ ಮಂಗಲ ಹೊನಕಾಂಬಳೆ, ಸಹೋದರ ರಾಹುಲ ಹೊನಕಾಂಬಳೆ, ಹಿರಿಯರಾದ ಸಂಪತ್ತಿ ಹೊನಕಾಂಬಳೆ, ಬಾಬಾಸಾಬ ಕಾಂಬಳೆ, ವಿನೋದ ಕಾಂಬಳೆ, ಶಾಮರಾವ ಕಾಂಬಳೆ, ರಮೇಶ ಹೊನಕಾಂಬಳೆ, ಘನಶ್ಯಾಮ ಹೊನಕಾಂಬಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.