ಪಂಚಮಸಾಲಿ ಸಮುದಾಯದ ಸಭೆ;
ಕಾಗವಾಡ 02: ಎಲ್ಲ ರಾಜಕೀಯ ಪಕ್ಷಗಳು ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕಲು ಮತ್ತು ನಮ್ಮ ಧ್ವನಿ ಅಡಿಗಿಸಲು ಪ್ರಯತ್ನಿಸುತ್ತಿವೆ. ಈಗಿನ ಸಿದ್ದರಾಮಯ್ಯನವರ ಸರ್ಕಾರ ನಮ್ಮ ಸಮುದಾಯದ ಶಾಸಕರಿಗೆ ಅಧಿವೇಶನದಲ್ಲಿ ಮೀಸಲಾತಿ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲವೆಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಜಯ-ಮೃತ್ಯುಂಜಯ ಸ್ವಾಮೀಜಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಅವರು ಸೋಮವಾರ ದಿ. 02 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಂಬರುವ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪಂಚಮಸಾಲಿ ಹೋರಾಟ ಮೀಸಲಾತಿ ತೀವೃ ಗೊಳಿಸಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಉದ್ದೇಶದಿಂದ ಸಮುದಾಯದ ಮುಖಂಡರ ಪೂರ್ವಿಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಡಿ.10 ರಂದು ಒಂದು ಸಾವಿರ ಟ್ರ್ಯಾಕ್ಟರ್ ಮೂಲಕ ರಾ್ಯಲಿ ಹೋಗಲು ನಿರ್ಧರಿಸಿದ್ದೇವೆ. 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ವಕೀಲರು ಅಲ್ಲಿ ಸೇರಲಿದ್ದಾರೆ. ವಕೀಲರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದರು.
ಸುವರ್ಣಸೌಧಕ್ಕೆ ಲಕ್ಷಾಂತರ ಜನ ಪಂಚಮಸಾಲಿ ಸಮುದಾಯದವರು ಮುತ್ತಿಗೆ ಹಾಕಲಿದ್ದಾರೆ. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ನಮ್ಮ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಪೊಲೀಸರು ಫೋನ್ ಮಾಡಿ ಎಷ್ಟು ಜನ ಪ್ರತಿಭಟನೆಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಎಂದು ಕೇಳುತ್ತಿದ್ದಾರೆ. ನಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಮ್ಮ ನೈತಿಕ ಶಕ್ತಿ ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಬೇಸರ ತರಿಸಿದೆ. ಶೆಟ್ಟರ್, ಬಿಎಸ್‌ವೈ, ಬೊಮ್ಮಾಯಿ ಇದ್ದಾಗಲೂ ನಾವು ಹೋರಾಟ ಮಾಡಿದ್ದೇವೆ. ಆಗ ಒಂದೇ ಒಂದು ಕೇಸ್ ಹಾಕಿಲ್ಲ. ನಮ್ಮದು ಅಹಿಂಸಾತ್ಮಕ ಹೋರಾಟ. ಆದರೆ, ಈಗೀನ ಸರ್ಕಾರ ಎರಡು ವರ್ಷಗಳಿಂದ ನಮ್ಮ ಹೋರಾಟ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾನು ಎಚ್ಚರಿಕೆ ಕೊಡುತ್ತೇನೆ. ಡಿ.10 ರೊಳಗೆ ಪಂಚಮಸಾಲಿ ಸಮಾಜದ ಯಾವುದೇ ಪದಾಧಿಕಾರಿಯನ್ನು ಮುಟ್ಟಿದರೆ ನಾವು ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡಿದರು. ದಬ್ಬಾಳಿಕೆ ಮಾಡಿ ಕೇಸ್ ಹಾಕಿದ್ದೇ ಆದಲ್ಲಿ ಬಂಡಾಯ ಆಗುತ್ತದೆ. ಎರಡನೇ ನರಗುಂದ ಬಂಡಾಯ ಆಗುವುದರಲ್ಲಿ ಸಂದೇಹವಿಲ್ಲ. ಹೆಸರಿಗೆ ಪಂಚಮಸಾಲಿ ಹೋರಾಟವಾದರೂ ನಮ್ಮದು ರೈತ ಮಕ್ಕಳ ಹೋರಾಟ. ಬಿಜೆಪಿಯವರಂತೆ ಕಾಂಗ್ರೆಸ್‌ನವರೂ ಮಾತನಾಡಲಿ. ಸರ್ಕಾರ ಮೆಚ್ಚಿಸಲು ಕೆಲ ಜನಪ್ರತಿನಿಧಿಗಳು ಹೋರಾಟಕ್ಕೆ ಹಿನ್ನಡೆ ಮಾಡುತ್ತಿದ್ದಾರೆ. ಸಿಎಂ ಮನಸ್ಸು ಗೆಲ್ಲಲು ಕೆಲ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಪಕ್ಷಕ್ಕಿಂತ ಸಮಾಜ ದೊಡ್ಡದು. ಅದನ್ನು ಶಾಸಕರು ತಿಳಿದುಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ವಿನಯ್ ಕುಲಕರ್ಣಿ, ರಾಜು ಕಾಗೆ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕೆಲವರು ಬಾಯಿ ಇದ್ದರೂ ಗಟ್ಟಿಯಾಗಿ ಮಾತನಾಡುವುದಿಲ್ಲ. ಡಿ.1 ಪಂಚಮಸಾಲಿ ಸಮಾಜದ ರಾಜಕೀಯ ರಹಸ್ಯ ಸಭೆ ಕೂಡ ಮಾಡಲಿದ್ದೇವೆ ಎಂದರು.
ಈ ಸಮಯದಲ್ಲಿ ಬಸಗೌಡ ಪಾಟೀಲ (ಬೊಮ್ಮನಾಳ), 2ಎ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಧರೆಪ್ಪಾ ಠಕ್ಕನ್ನವರ, ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷ ಉಮೇಶ ಪಾಟೀಲ, ನ್ಯಾಯವಾದಿ ವಿಭಾಗದ ಅಣ್ಣಾಗೌಡಾ ಪಾಟೀಲ, ಅರ್ಚನಾ ಪಾಟೀಲ, ಕಾಗವಾಡ ಲಿಂಗಾಯತ ಸಮಾಜದ ಅಧ್ಯಕ್ಷ ರಾಜಗೌಡ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗಲೆ, ನಾಥಗೌಡಾ ಪಾಟೀಲ, ಶಿವಾನಂದ ಪಾಟೀಲ, ಚಿದಾನಂದ ಅವಟಿ, ಎಂ.ಬಿ. ಉದಾಗವೆ, ಸತೀಶ ಬಿರಾದರ, ಶಿವರಾಜ ಪಾಟೀಲ, ಅಶೋಕ ಪಾಟೀಲ, ಎಂ.ಎಸ್. ಪಾಟೀಲ, ಅಶೋಕ ಪಾಟೀಲ, ಶಿವಾನಂದ ನವಿನಾಳೆ, ರವಿ ಪಾಟೀಲ, ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮುದಾಯದವರು ಉಪಸ್ಥಿತರಿದ್ದರು. ಪಂಚ್ ನ್ಯೂಜ್‌ಗಾಗಿ ಕಾಗವಾಡದಿಂದ ಬಸವರಾಜ ತಾರದಾಳೆ